ಕೊಪ್ಪಳ: 1500 ಮಕ್ಕಳು ನೃತ್ಯದೊಂದಿಗೆ ಅಜ್ಜನ ಜಾತ್ರೆಗೆ ಬನ್ನಿ ಎಂದು ನಾಡಿನ ಭಕ್ತರಿಗೆ ಅಹ್ವಾನ ನೀಡುವ ವೀಡಿಯೋ ಟ್ರೇಲರ್ ಸಾಂಗ್ ಬಿಡುಗಡೆ ಮಾಡಲಾಗಿದೆ.
ರಾಜ್ಯ ಸರ್ಕಾರ ಕರ್ನಾಟಕ ನಾಮಕರಣಕ್ಕೆ 50 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಸುವರ್ಣ ಸಂಭ್ರಮ ಕಾರ್ಯಕ್ರಮ ಅಹ್ವಾನ ನೀಡಿರುವ ಹಿನ್ನೆಲೆಯಲ್ಲಿ ಹಳದಿ ಮತ್ತು ಕೆಂಪು ಬಣ್ಣದ ಬಲೂನ್ ಹಿಡಿದು ಕನ್ನಡ ನಾಡಿನ ಸಂಭ್ರಮದೊಂದಿಗೆ ಅಜ್ಜನ ಜಾತ್ರೆಗೆ ಅಹ್ವಾನ ನೀಡಲಾಗಿದೆ.ಗವಿಮಠದ ಆವರಣದಲ್ಲಿ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳು ಕೆಂಪು ಮತ್ತು ಹಳದಿ ಬಲೂನ್ ಹಿಡಿದು ನೃತ್ಯ ಮಾಡುತ್ತಾ, ಅಜ್ಜನ ಜಾತ್ರೆಗೆ ಬನ್ನಿ ಎನ್ನುವ ರೂಪಕ ನಿರ್ಮಾಣ ಮಾಡುವ ಮೂಲಕ ವಿಶೇಷ ಗಮನ ಸೆಳೆದಿದ್ದಾರೆ.
ಗವಿಸಿದ್ದೇಶ್ವರ ಶ್ರೀಗಳೇ ರಚನೆ ಮಾಡಿರುವ ಈ ಹಾಡನ್ನು ಸಂಗೀತ ಸಂಯೋಜಿಸಿ, ಆಕಾಶವಾಣಿ ಕಲಾವಿದ ಸದಾಶಿವ ಪಾಟೀಲ್ ಹಾಡಿದ್ದಾರೆ.
ವೀಡಿಯೋ ನೋಡಿ: ಟ್ರೇಲರ್ ಸಾಂಗ್ ವಿಡಿಯೋ ಡೌನ್‌ಲೋಡ್ ಮಾಡಲು ಈ ಲಿಂಕ್ (https://we.tl/t-rdKidNEAyp) ಒತ್ತಬಹುದು.ಈ ಬಾರಿಯೂ ಜನೇವರಿ 27, 28, 29ರಂದು ನಡೆಯುವ ಅಜ್ಜನ ಜಾತ್ರೆಗೆ ಭಕ್ತರನ್ನು ಆಹ್ವಾನಿಸುವ ದೃಶ್ಯವನ್ನು ಡ್ರೋಣ್ ಕ್ಯಾಮೆರಾ ಮೂಲಕ ಸೆರೆಹಿಡಿಯಲಾಗಿದೆ. ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ತಯಾರಿಸಿದ ಟ್ರೇಲರ್ ಸಾಂಗ್‌ನ್ನು ಶುಕ್ರವಾರ ಶ್ರೀಮಠದ ದಾಸೋಹಕ್ಕೆ ಸೇವೆಗೈಯುತ್ತಿರುವವರ ಮೂಲಕ ಬಿಡುಗಡೆಗೊಳಿಸಲಾಯಿತು.
ವೀಡಿಯೊದಲ್ಲೇನಿದೆ?: ವೀಡಿಯೊದಲ್ಲಿ ಗವಿಸಿದ್ದೇಶ್ವರ ಮಹಾರಥೋತ್ಸವದ ವಿಹಂಗಮ ನೋಟದಿಂದ ಆರಂಭವಾಗೊಂಡು ಗವಿಸಿದ್ದೇಶ್ವರ ಕರ್ತೃ ಗದ್ದುಗೆಯ ಪ್ರಸನ್ನ ದರ್ಶನವಾಗುವುದು, ಮಹಾದಾಸೋಹದಲ್ಲಿ ಭಕ್ತರು ಪ್ರಸಾದ ಸಿದ್ಧತೆಯ ಸೇವೆಯಲ್ಲಿ ತೊಡಗಿರುವುದು, ಭಕ್ತರು ಮಹಾದಾಸೋಹದಲ್ಲಿ ಪ್ರಸಾದ ಸ್ವೀಕರಿಸುವ ಭಕ್ತಿಭಾವದ ದೃಶ್ಯ, ಚಿಕ್ಕೇನಕೊಪ್ಪ ಶರಣರ ದೀರ್ಘದಂಡ ನಮಸ್ಕಾರ, ಭಕ್ತರು ಶ್ರದ್ಧಾಭಕ್ತಿಯಿಂದ ಸೇವೆಗೈದ ರೊಟ್ಟಿ ಹಾಗೂ ಸಿಹಿ ಪದಾರ್ಥಗಳ ಸಂಗ್ರಹಣೆಯ ದೃಶ್ಯ, ಶ್ರೀಮಠದ ಉಚಿತ ಪ್ರಸಾದನಿಲಯದಲ್ಲಿ ಮಕ್ಕಳು ಪ್ರಸಾದ ಸ್ವೀಕರಿಸುವ ಭಕ್ತಿ-ಭಾವದ ನೋಟ, ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡ 50 ವರ್ಷಗಳ ಸುವರ್ಣ ಸಂಭ್ರಮ ಸವಿನೆನಪಿಗಾಗಿ ಶ್ರೀಮಠದ ಉಚಿತ ಪ್ರಸಾದ ನಿಲಯದಲ್ಲಿ ಮಕ್ಕಳು ಕನ್ನಡ ನಾಡಿನ ಧ್ವಜದ ಬಣ್ಣಗಳಲ್ಲಿ ಬಲೂನ್ ಹಿಡಿದು “ಅಜ್ಜನ ಜಾತ್ರೆ ಬನ್ನಿ-2024” ಎಂಬ ವಾಕ್ಯದಂತೆ ಭಕ್ತಿ-ಭಾವದಿಂದ ಶ್ರೀಮಠದ ಮಕ್ಕಳು ಕುಳಿತು ಜಾತ್ರೋತ್ಸವಕ್ಕೆ ಆಹ್ವಾನಿಸಲಾಗುತ್ತಿದೆ.