ಕನ್ನಡಪ್ರಭ ವಾರ್ತೆ ಯಾದಗಿರಿ
ಜಲಾಶಯಗಳಲ್ಲಿನ ಸಂಗ್ರಹವನ್ನು ಆಧರಿಸಿ, ಈ ಹಿಂದೆ ಅನುಸರಿಸಿದ 14 ದಿನ ಚಾಲು ಹಾಗೂ 10 ದಿನ ಬಂದ್ ಪದ್ಧತಿಯನ್ನು ಅನುಸರಿಸುವಂತೆ ಅಬಕಾರಿ ಸಚಿವರು ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆ ಸಭೆಯ ಅಧ್ಯಕ್ಷರಾದ ಆರ್. ಬಿ. ತಿಮ್ಮಾಪೂರ ಅವರ ಸಭೆಯಲ್ಲಿ ನಿರ್ಣಯವಾಗಿದೆ ಎಂದು ಭೀಮರಾಯನಗುಡಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಅಧೀಕ್ಷಕ ಅಭಿಯಂತರರು ತಿಪ್ಪಣ್ಣಗೌಡ ಎಸ್. ಅನ್ನದಾನಿ ಹೇಳಿದರು.ಬೆಂಗಳೂರು ವಿಕಾಸಸೌಧದಲ್ಲಿ ಜುಲೈ 1ರ ಮಂಗಳವಾರ ನಡೆದ ಇತ್ತೀಚಿನ ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶದ 2025-26ನೇ ಸಾಲಿನ ಮುಂಗಾರು ಹಂಗಾಮಿಗಾಗಿ ನೀರಾವರಿ ಸಲಹಾ ಸಮಿತಿ, ಕೃಷ್ಣಾ ಮೇಲ್ದಂಡೆ ಯೋಜನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಲ್ಲ ಅಧಿಕಾರಿ ಸದಸ್ಯರು ಹಾಗೂ ವಿಶೇಷ ಆಹ್ವಾನಿತರೊಂದಿಗೆ ಸುದೀರ್ಘವಾಗಿ ಚರ್ಚಿಸಿದ ನಂತರ, ಎರಡೂ ಜಲಾಶಯಗಳಲ್ಲಿ ಮುಂಗಾರು ಹಂಗಾಮಿಗೆ ಅಗತ್ಯವಿರುವ ನೀರು ಸಂಗ್ರಹಣೆಯಾಗಿರುವುದರಿಂದ, ಕೃಷ್ಣಾ ಮೇಲ್ದಂಡೆ ಯೋಜನೆಯ ಎಲ್ಲ ಕಾಲುವೆಗಳಿಗೆ ಜುಲೈ 8 ರಿಂದಲೇ ನೀರು ಹರಿಸಲು ಹಾಗೂ ಒಳಹರಿವು, ಹೊರಹರಿವಿನ ಪ್ರಮಾಣಕ್ಕೆ ಸಮವಾಗಿರುವವರೆಗೆ ಸತತವಾಗಿ ಕಾಲುವೆ ಜಾಲಕ್ಕೆ ನೀರು ಹರಿಸಲಾಗುವುದು. ಒಂದು ವೇಳೆ ಆಲಮಟ್ಟಿ ಆಣೆಕಟ್ಟಿನಲ್ಲಿ ಪೂರ್ಣಪ್ರಮಾಣದ ನೀರು ಭರ್ತಿ ಆಗದೇ ಇದ್ದ ಪಕ್ಷದಲ್ಲಿ ಜಲಾಶಯಗಳಲ್ಲಿನ ಸಂಗ್ರಹವನ್ನು ಆಧರಿಸಿ ಈ ಹಿಂದೆ ಅನುಸರಿಸಿದ 14 ದಿನ ಚಾಲು ಹಾಗೂ 10 ದಿನ ಬಂದ್ ಪದ್ಧತಿಯನ್ನು ಈ ವೇಳಾಪಟ್ಟಿಯಂತೆ ಅನುಸರಿಸಲು ಸರ್ವಾನುಮತದಿಂದ ತೀರ್ಮಾನಿಸಲಾಗಿರುತ್ತದೆ ಎಂದರು.ಕಾಲುವೆ ಚಾಲು ಇರುವುದು 14 ದಿನ ವಾರಾಬಂದಿಯಂತೆ ರಚನೆ :
ಜುಲೈ 8 ರಿಂದ ಜುಲೈ 21ರ ವರೆಗೆ, 2025ರ ಆಗಸ್ಟ್ 1 ರಿಂದ ಆಗಸ್ಟ್ 14ರ ವರೆಗೆ, 2025ರ ಆಗಸ್ಟ್ 25 ರಿಂದ ಸೆಪ್ಟೆಂಬರ್ 7ರ ವರೆಗೆ, 2025ರ ಸೆಪ್ಟೆಂಬರ್ 18 ರಿಂದ ಅಕ್ಟೋಬರ್ 1ರ ವರೆಗೆ, 2025ರ ಅಕ್ಟೋಬರ್ 12 ರಿಂದ ಅಕ್ಟೋಬರ್ 25ರ ವರೆಗೆ ಒಟ್ಟು 70 ದಿನಗಳು ಕಾಲುವೆ ಚಾಲೂ ಇರುವ ದಿನಾಂಕ ಪ್ರಕಟಿಸಿದೆ ಎಂದು ತಿಳಿಸಿದರು.ಕಾಲುವೆ ಬಂದ್ ಇರುವುದು 10 ದಿನ ವಾರಾಬಂದಿಯಂತೆ ರಚನೆ :
ಜುಲೈ 22 ರಿಂದ ಜುಲೈ 31ರ ವರೆಗೆ, 2025ರ ಆಗಸ್ಟ್ 15 ರಿಂದ ಆಗಸ್ಟ್ 24ರ ವರೆಗೆ, 2025ರ ಸೆಪ್ಟೆಂಬರ್ 8 ರಿಂದ ಸೆಪ್ಟೆಂಬರ್ 17ರ ವರೆಗೆ, 2025ರ ಅಕ್ಟೋಬರ್ 2 ರಿಂದ ಅಕ್ಟೋಬರ್ 11ರ ವರೆಗೆ, 2025ರ ಅಕ್ಟೋಬರ್ 26 ರಿಂದ ನವೆಂಬರ್ 4ರ ವರೆಗೆ ಒಟ್ಟು 50 ದಿನಗಳು ಕಾಲುವೆ ಬಂದ್ ಇರುವ ದಿನಾಂಕ ಪ್ರಕಟಿಸಿದೆ ಎಂದು ಹೇಳಿದರು.ಮೇಲಿನ ತೀರ್ಮಾನದಂತೆ ಕೃಷ್ಣಾ ಮೇಲ್ದಂಡೆ ಯೋಜನೆ, ಕೃಷ್ಣಾ ಭಾಗ್ಯ ಜಲ ನಿಗಮ ನಿ., ಜೆಬಿಸಿ ವೃತ್ತ, ಭೀಮರಾಯನಗುಡಿ ಕಚೇರಿ ಅಧೀನದಲ್ಲಿ ಬರುವ ಶಹಾಪೂರ ಶಾಖಾ ಕಾಲುವೆ, ಜೇವರ್ಗಿ ಶಾಖಾ ಕಾಲುವೆ ಮತ್ತು ಮುಡಬಾಳ ಶಾಖಾ ಕಾಲುವೆಯ ಅಚ್ಚುಕಟ್ಟು ಪ್ರದೇಶದ ಜಾಲದಡಿ 2025-26 ನೇ ಸಾಲಿನ ಮುಂಗಾರು ಹಂಗಾಮಿಗಾಗಿ 2025ರ ಜುಲೈ 8 ರಿಂದ ಕಾಲುವೆಗಳಲ್ಲಿ ನೀರು ಹರಿಸಲಾಗುವುದು ಎಂದರು.
ಕಾಲುವೆ ಜಾಲದ ಗೇಟುಗಳನ್ನು ಹಾನಿ ಮಾಡುವುದು, ಎಸ್ಕೇಪ್‌ಗಳ ಮೂಲಕ ಹಳ್ಳಕ್ಕೆ ನೀರು ಹರಿಸುವುದು, ಸೈಫನ್‌ಗಳ ಮೂಲಕ ಮಣ್ಣಿನ ಏರಿಯಲ್ಲಿ ನೀರನ್ನು ಎತ್ತಿಕೊಳ್ಳುವುದು, ಕಾಲುವೆ ಜಾಲದಲ್ಲಿ ಪಂಪುಗಳ ಮೂಲಕ ನೀರನ್ನು ಎತ್ತುವುದನ್ನು ನಿರ್ಬಂಧಿಸಲಾಗಿದೆ. ಈ ಪರಿಸ್ಥಿತಿ ಕಂಡುಬಂದರೆ, ಸಂಬಂಧಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು.ರೈತ ಬಾಂಧವರು ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶದಲ್ಲಿ ಲಘು ನೀರಾವರಿ ಬೆಳೆಗಳನ್ನು ಮಾತ್ರ ಬೆಳೆಯಬೇಕೆಂದು, ನೀರಿನ ಬಳಕೆಯಲ್ಲಿ ಮಿತವ್ಯಯ ಸಾಧಿಸುವ ದಿಶೆಯಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳೊಂದಿಗೆ ಸಹಕಾರ ನೀಡಬೇಕು. ಜೀವ ಜಲ ಅತೀ ಅಮೂಲ್ಯ ಅದನ್ನು ಪೋಲು ಮಾಡಬೇಡಿ ಹಿತವಾಗಿ ಮಿತವಾಗಿ ಬಳಸಿ ಎಂದು ಅವರು ತಿಳಿಸಿದ್ದಾರೆ.