ಕೊಪ್ಪಳ: ಮುಂದಿನ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಪಕ್ಷ ಸಂಘಟನೆ ಕಾರ್ಯ ಕೈಗೊಳ್ಳುತ್ತಿದ್ದೇವೆ ಎಂದು ಕೆಆರ್‌ಪಿಪಿ ರಾಜ್ಯ ಉಪಾಧ್ಯಕ್ಷ ಮನೋಹರಗೌಡ ಹೇರೂರು ಹೇಳಿದರು.
ನಗರದ ಮೀಡಿಯಾ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದ ಅವರು, ಲೋಕಸಭಾ ಚುನಾವಣೆ ಹಿನ್ನೆಲೆ ಕೆಆರ್‌ಪಿಪಿ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ಪಕ್ಷದ ಸಂಘಟನೆಯ ಕಾರ್ಯವೂ ನಡೆದಿದೆ. ಲೋಕಸಭಾ ಕ್ಷೇತ್ರವನ್ನು ಗೆಲ್ಲಲು ಕಾರ್ಯಕರ್ತರ ಪಡೆಯನ್ನು ಕಟ್ಟುವ ಕೆಲಸ ಮಾಡಲಿದ್ದೇವೆ. ಈಗಾಗಲೇ ಗಂಗಾವತಿ ಕ್ಷೇತ್ರದಲ್ಲಿ ಪಕ್ಷದ ಸಂಸ್ಥಾಪಕ ಶಾಸಕ ಜನಾರ್ದನ ರೆಡ್ಡಿ ಗೆಲುವು ಕಂಡಿದ್ದಾರೆ. ಮುಂದೆಯೂ ಪಕ್ಷ ಸಂಘಟನೆಗಾಗಿ ಅವರಿಗೆ ಬಲ ನೀಡಲಿದ್ದೇವೆ ಎಂದರು.ಪಕ್ಷದ ಜಿಲ್ಲಾಧ್ಯಕ್ಷ ಸಂಗಮೇಶ ಬಾದವಾಡಗಿ ಮಾತನಾಡಿ, ಪಕ್ಷದಿಂದ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಿದ್ದೇವೆ. ಮುಂದಿನ ದಿನಗಳಲ್ಲಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಿದ್ದೇವೆ. ಪ್ರಸ್ತುತ ಬರಲಿರುವ ಲೋಕಸಭಾ ಚುನಾವಣಾ ತಯಾರಿಯೂ ಈಗಿನಿಂದಲೇ ನಡೆದಿದೆ ಎಂದರು.ಎಂಪಿ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ. ಮುಂದೆ ಜಿಪಂ, ತಾಪಂ ಚುನಾವಣೆಯು ಎದುರಾಗಲಿವೆ. ದುರ್ದೈವದ ಸಂಗತಿಯೆಂದರೆ ಸರ್ಕಾರಗಳಿಗೆ ತಾಪಂ ಹಾಗೂ ಜಿಪಂ ಚುನಾವಣೆ ನಡೆಸಲು ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಣ್ಣ ಕಾರ್ಯಕರ್ತರನ್ನು ದೂರ ಇಡುವ ವ್ಯವಸ್ಥೆ ನಡೆದಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೊಪ್ಪಳದಲ್ಲಿ ಈ ಬಾರಿ ಅಧಿಕಾರದ ಗದ್ದುಗೆ ಹಿಡಿಯಲಿದ್ದೇವೆ ಎಂದರು.ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ವಿಚಾರದ ಕುರಿತು ಕೊಪ್ಪಳದಲ್ಲಿ ಸಮಾವೇಶ ನಡೆಯಲಿದೆ. ಅಭ್ಯರ್ಥಿಗಳನ್ನು ಪಕ್ಷದ ರಾಜ್ಯಾಧ್ಯಕ್ಷರೇ ಘೋಷಣೆ ಮಾಡಲಿದ್ದಾರೆ. ಬಳ್ಳಾರಿ, ರಾಯಚೂರು, ಬೀದರ್, ಚಿಕ್ಕಬಳ್ಳಾಪುರ, ಬಾಗಲಕೋಟೆ, ಕೊಪ್ಪಳ, ಚಿತ್ರದುರ್ಗ, ವಿಜಯಪುರ ಎಂಪಿ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ. ಜನಾರ್ದನ ರೆಡ್ಡಿ ಅವರೂ ಲೋಕಸಭೆಗೆ ನಮ್ಮ ಕುಟುಂಬದಿಂದ ಯಾರೂ ಸ್ಪರ್ಧೆ ಮಾಡಲ್ಲವೆಂದು ಘೋಷಣೆ ಮಾಡಿದ್ದಾರೆ ಎಂದರು.