ಕನ್ನಡಪ್ರಭ ವಾರ್ತೆ ಅಥಣಿ
ಬೇಲಿಯೇ ಎದ್ದು ಹೊಲ ಮೇಯ್ದಂತೆ ಕ್ಷೀರಭಾಗ್ಯ ಯೋಜನೆಯಡಿ ಶಾಲೆಯ ಮಕ್ಕಳಿಗೆ ವಿತರಿಸಬೇಕಿದ್ದ ಹಾಲಿನ ಪಾಕೆಟ್ ಕದ್ದೊಯ್ಯುತ್ತಿದ್ದ ಗುಂಡೇವಾಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮುಖ್ಯ ಶಿಕ್ಷಕ ಸಹದೇವ ಕಾತ್ರಾಳ ಇಂತಹ ಆರೋಪ ಹೊತ್ತ ಶಿಕ್ಷಕ. ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಇಲಾಖೆ ತನಿಖೆ ಆರಂಭವಾಗಿದೆ.ನಡೆದಿದ್ದೇನು?:
ಆ.19ರಂದು ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ತಂಡ ಗುಂಡೇವಾಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ದಿಢೀರ್ ಭೇಟಿ ನೀಡಿದ್ದು, ಸ್ಟಾಕ್ ಪುಸ್ತಕದ ಪ್ರಕಾರ ಅಡುಗೆ ವಸ್ತುಗಳನ್ನು ಪರಿಶೀಲಿಸಿದಾಗ ದಾಖಲೆ ಪುಸ್ತಕದಲ್ಲಿ ನಮೂದಿಸಿದ ಮತ್ತು ಶಾಲೆಯಲ್ಲಿರುವ ಮಕ್ಕಳಿಗೆ ಕೊಡುವ ಹಾಲಿನ ಪಾಕೆಟ್‌ಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ಈ ಕುರಿತು ಪ್ರಶ್ನಿಸಿದಾಗ ಉತ್ತರ ನೀಡಲು ಪರದಾಡಿದ್ದಾನೆ. ಬಳಿಕ ಕಾರಿನಲ್ಲಿದ್ದ ಗಂಟಿನಲ್ಲಿ 25 ಕೆಜಿ ಎರಡು ಹಾಲಿನ ಪಾಕೆಟ್‌ಗಳನ್ನು ಮರಳಿ ಶಾಲೆಯೊಳಗೆ ತಂದಿಡುವಾಗ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.ಅಧಿಕಾರಿಗಳ ವಿಚಾರಣೆ ವೇಳೆ ಮುಖ್ಯಶಿಕ್ಷಕ ಒಂದೊಂದು ಬಾರಿ ಒಂದು ರೀತಿಯ ಹೇಳಿಕೆ ನೀಡುತ್ತಿದ್ದಾನೆ. ಒಮ್ಮೆ ಅವು ನಮ್ಮ ಶಾಲೆಯ ಹಾಲಿನ ಪಾಕೆಟ್ ಎಂದರೆ ಮತ್ತೊಮ್ಮೆ ಬೇರೆ ಶಾಲೆಗಳ ಪಾಕೆಟ್ ಎಂದು ಹೇಳುತ್ತ ದಾರಿ ತಪ್ಪಿಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.ಗುಂಡೇವಾಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಕ್ಷೀರಭಾಗ್ಯ ಯೋಜನೆಯಡಿ ಮಕ್ಕಳಿಗೆ ವಿತರಿಸಬೇಕಿದ್ದ ಹಾಲನ್ನು ಅನಧಿಕೃತವಾಗಿ ಮನೆಗೆ ಒಯ್ಯುತ್ತಿದ್ದ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳ ತಂಡ ತನಿಖೆ ಆರಂಭಿಸಿದೆ. ಸಮಗ್ರ ತನಿಖಾ ವರದಿ ಬಂದ ನಂತರ ಕ್ರಮ ಜರುಗಿಸಲಾಗುವುದು.
-ರಾಜೇಂದ್ರ ತೆರದಾಳ ಬಿಸಿ ಊಟ ಅಧಿಕಾರಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗುಂಡೇವಾಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕನ ವಿರುದ್ಧ ತನಿಖೆ ಆರಂಭಿಸಲಾಗಿದೆ ಎಂದು ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಮೋರಟಗಿ ಮಾಹಿತಿ ನೀಡಿದ್ದಾರೆ. ವರದಿ ಬಂದ ನಂತರ ಶಿಸ್ತು ಕ್ರಮ ಜರುಗಿಸಲಾಗುವುದು.
-ಮಹೋನಕುಮಾರ ಹಂಚಾಟೆ ಡಿಡಿಪಿಐ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ