ಬೀದರ್: ರಾಜ್ಯ ಸರ್ಕಾರ ರಾಜ್ಯದಲ್ಲಿರುವ ಅಂಗಡಿ ಮುಂಗಟ್ಟುಗಳ ಮೇಲಿರುವ ನಾಮಫಲಕಗಳಲ್ಲಿ ಶೇ.60ರಷ್ಟು ಭಾಗ ತಮ್ಮ ಅಂಗಡಿಯ ಹೆಸರನ್ನು ಕನ್ನಡದಲ್ಲಿ ಬರೆಯಿಸಲು ಮತ್ತು ಉಳಿದ ಶೇ.40ರಷ್ಟು ಭಾಗದಲ್ಲಿ ಇತರ ಭಾಷೆಗಳಲ್ಲಿ ಬರೆಯಿಸಲು ಅವಕಾಶ ನೀಡಿ ಆದೇಶಿಸಿದ್ದು, ಅದರಂತೆ ನಗರ ಮತ್ತು ಜಿಲ್ಲೆಯಾದ್ಯಂತ ಇರುವ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರು ತಕ್ಷಣ ಕಾರ್ಯಪ್ರವೃತ್ತರಾಗಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಆಗ್ರಹಿಸಿದ್ದಾರೆ.
ಸಂಪೂರ್ಣ ಕನ್ನಡ ನಾಮಫಲಕ ಅಳವಡಿಸುವವರಿಗೆ ಕಸಾಪ ಗೌರವ: ಸರ್ಕಾರದ ಆದೇಶದ ಹೊರತಾಗಿಯೂ ನಗರದಲ್ಲಿ ಯಾರು ಸರ್ಕಾರದ ಆದೇಶದ ವಿರುದ್ಧ ಕನ್ನಡೇತರ ನಾಮಫಲಕಗಳನ್ನು ಹೊಂದಿದ್ದಾರೆಯೋ ಅಂತಹವರ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ತು ಹೋರಾಟ ಮಾಡುತ್ತದೆ ಮತ್ತು ಯಾವ ಅಂಗಡಿಯ ನಾಮಫಲಕಗಳಲ್ಲಿ ಸಂಪೂರ್ಣ ಕನ್ನಡಕ್ಕೆ ಆದ್ಯತೆ ನೀಡಲಾಗಿದೆಯೋ ಅಂತಹ ನಾಮಫಲಕಗಳನ್ನು ಗುರುತಿಸಿ ಕನ್ನಡ ಸಾಹಿತ್ಯ ಪರಿಷತ್ತು ಅವರನ್ನು ಗೌರವಿಸುತ್ತದೆ ಎಂದು ತಿಳಿಸಿದ್ದಾರೆ.
ಇದರ ಜೊತೆಗೆ ಸರ್ಕಾರಿ, ಅರೆಸರ್ಕಾರಿ, ಸರ್ಕಾರದ ಅನುದಾನ ಪಡೆಯುವ ಕಚೇರಿಗಳು, ಶಾಲಾ ಕಾಲೇಜುಗಳು ತಮ್ಮ ಸಂಸ್ಥೆಯ ನಾಮಫಲಕದಲ್ಲಿ ಕನ್ನಡಕ್ಕೆ ಪ್ರಥಮಾದ್ಯತೆಯನ್ನು ನೀಡಿ ಬರೆಯಿಸಬೇಕು. ಅಧಿಕಾರಿಗಳೂ ತಮ್ಮ ಕೋಣೆಯ ಎದುರು ಅಂಟಿಸಿರುವ ಫಲಕಗಳು, ಮೇಜಿನ ಮೇಲೆ ಇಟ್ಟಿರುವ ಹೆಸರಿನ ಫಲಕಗಳನ್ನು ಸಹ ಕನ್ನಡದಲ್ಲಿ ಬರೆಯಿಸಬೇಕೆಂದು ಚನ್ನಶೆಟ್ಟಿ ಆಗ್ರಹಿಸಿದ್ದಾರೆ.