ಕೂಡಿಗೆ: 24,25ರಂದು ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ

KannadaprabhaNewsNetwork | Published : Feb 21, 2024 2:05 AM

ಸಾರಾಂಶ

ಕೂಡಿಗೆ ಸರ್ಕಾರಿ ಕ್ರೀಡಾ ಶಾಲಾ ಮೈದಾನದಲ್ಲಿ ಫೆ.24 ಮತ್ತು 25 ರಂದು ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದೆ. ಆಸಕ್ತರು ಫೆ.೨೨ರೊಳಗೆ ಹೆಸರು ನೋಂದಾಯಿಸಲು ಸೂಚಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕೊಡಗು ಜಿಲ್ಲಾ ಶಾಖೆ, ಸೋಮವಾರಪೇಟೆ ತಾಲೂಕು ಶಾಖೆ ಸಂಯುಕ್ತಾಶ್ರಯದಲ್ಲಿ ಕೂಡಿಗೆ ಸರ್ಕಾರಿ ಕ್ರೀಡಾ ಶಾಲಾ ಮೈದಾನದಲ್ಲಿ ಫೆ.24 ಮತ್ತು 25 ರಂದು ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘದ ಜಿಲ್ಲಾಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ್‌, ಕೂಡಿಗೆ ಕ್ರೀಡಾ ಶಾಲಾ ಮೈದಾನದಲ್ಲಿ ಫೆ.24 ರಂದು ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ದೊರೆಯಲಿದೆ. ಹೀಗಾಗಿ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಖಾಯಂ ಸರಕಾರಿ ನೌಕರರು ಫೆ.22 ರೊಳಗೆ https://forms.gle/3arj7sBogh2kieAKA ಲಿಂಕ್ ಬಳಸಿ ಹೆಸರು ನೋಂದಾಯಿಸಿಕೊಳ್ಳಬಹುದೆಂದರು.ಫೆ.24 ರಂದು ಬೆಳಗ್ಗೆ 10.30 ಗಂಟೆಗೆ ಶಾಸಕ ಡಾ.ಮಂತರ್‌ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಸಂಸದ ಪ್ರತಾಪ್ ಸಿಂಹ, ವಿಧಾನಸಭಾ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ, ಎಸ್‌.ಎಲ್.ಬೋಜೇಗೌಡ, ಕೂಡುಮಂಗಳೂರು ಗ್ರಾ.ಪಂ ಅಧ್ಯಕ್ಷ ಸಿ.ಭಾಸ್ಕರ್‌ ನಾಯ್ಕ, ಕೂಡಿಗೆ ಗ್ರಾ.ಪಂ ಅಧ್ಯಕ್ಷ ಕೆ.ಟಿ.ಗಿರೀಶ್ ಹಾಗೂ ಸರ್ವ ಸದಸ್ಯರು ಮತ್ತು ಕೊಡಗು ಜಿ.ಪಂ ಆಡಳಿತಾಧಿಕಾರಿ ಡಾ.ಎನ್.ವಿ.ಪ್ರಸಾದ್ ಪಾಲ್ಗೊಳ್ಳಲಿದ್ದಾರೆ.ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ಕೆ.ರಾಮರಾಜನ್, ವರಿಷ್ಠಾಧಿಕಾರಿ ಕುಶಾಲನಗರ ತಾಲ್ಲೂಕು ತಹಶೀಲ್ದಾ‌ರ್ ಕಿರಣ್ ಜಿ.ಗೌರಯ್ಯ, ಸೋಮವಾರಪೇಟೆ ತಹಶೀಲ್ದಾ‌ರ್ ವಿ.ಎಸ್.ನವೀನ್ ಕುಮಾರ್ ಭಾಗವಹಿಸಲಿದ್ದಾರೆ.

ವಿವಿಧ ವಿಭಾಗಗಳು: 45 ವರ್ಷ ಒಳಪಟ್ಟ ಹಾಗೂ 45 ವರ್ಷ ಮೇಲ್ಪಟ್ಟ ಪುರುಷ ವಿಭಾಗಕ್ಕೆ ವಾಲಿಬಾಲ್, ಫುಟ್ಬಾಲ್, ಹಾಕಿ, ಕಬ್ಬಡಿ, ಕ್ರಿಕೆಟ್, ಚೆಸ್, ಟೇಬಲ್ ಟೆನ್ನಿಸ್, ಕೇರಂ, ಥ್ರೋಬಾಲ್, ಟಿನಿಕಾಯ್ಕ, ಖೋ ಖೋ, ಯೋಗ ಹಾಗೂ ವಿವಿಧ ತೂಕದ ಅನುಸಾರ ವೈಟ್ ಲಿಫ್ಟಿಂಗ್, ಪವರ್ ಲಿಫ್ಟಿಂಗ್, ದೇಹಧಾಡ್ಯ ಸ್ಪರ್ಧೆ ನಡೆಯಲಿದೆ. 35 ರಿಂದ 40 ವಯೋಮಾನದೊಳಗಿನ ಮಹಿಳೆಯರಿಗೆ ವಿವಿಧ ಹಂತದ ಓಟ, ಉದ್ದಜಿಗಿತ, ಎತ್ತರ ಜಿಗಿತ ಸೇರಿದಂತೆ ವಿವಿಧ ಕ್ರೀಡಾಕೂಟ ನಡೆಯಲಿದೆ.45 ವರ್ಷ ಒಳಪಟ್ಟ ಹಾಗೂ 45 ವರ್ಷ ಮೇಲ್ಪಟ್ಟ ಪುರುಷರಿಗೆ ವಿವಿಧ ಹಂತದ ಓಟ, ಉದ್ದಜಿಗಿತ, ಎತ್ತರ ಜಿಗಿತ, ಭಾರದ ಗುಂಡು ಎಸೆತ, ಡಿಸ್ಕಸ್ ಥೋ, ಹ್ಯಾಮರ್ ಥೋ, ರಿಲೇ, ಜಾವಿನ್ ಥೋ, 35 ರಿಂದ 45 ವಯೋಮಾನದ ಮಹಿಳೆಯರಿಗೆ ಓಟ, ಉದ್ದ ಹಾಗೂ ಎತ್ತರ ಜಿಗಿತ, ಗುಂಡು, ಡಿಸ್ಕಸ್ ಎಸೆತ, ಟೆನಿಕಾಯ್ಕ ಪಂದ್ಯ ನಡೆಯಲಿದೆ. ಇದೇ ರೀತಿ 40-50 ರ ಪುರುಷರ ವಿಭಾಗ, 35-40 ಮಹಿಳೆಯರ ವಿಭಾಗ, 50-60 ವರ್ಷ ಮೇಲ್ಪಟ್ಟ ಪುರುಷರ ವಿಭಾಗ, 45-60 ಮೇಲ್ಪಟ್ಟ ಮಹಿಳೆಯ ವಿಭಾಗದಲ್ಲಿ ಓಟ, ಲಾಂಗ್ ಜಂಪ್, ಭಾರದ ಗುಂಡು ಎಸೆತ ಇತ್ಯಾದಿ ಕ್ರೀಡೆ ನಡೆಯಲಿದೆ ಎಂದು ಮಾಹಿತಿ ನೀಡಿದರು.ಹಿಂದೂಸ್ಥಾನಿ ಸಂಗೀತ ಮೌಖಿಕ(ಕ್ಲಾಸಿಕಲ್), ಲಘು ಶಾಸ್ತ್ರೀಯ ಸಂಗೀತ, ವಿವಿಧ ನಾಟ್ಯ ಪ್ರಾಕರ, ಜಾನಪದ ಗೀತೆ, ಕರಕುಶಲ ವಸ್ತುಗಳ ಪ್ರದರ್ಶನ, ನಾಟಕ ಸೇರಿದಂತೆ ಕಥಕ್, ಮಣಿಪುರಿ, ಕೂಚುಪುಡಿ, ಕಥಕಳಿ, ಭರತನಾಟ್ಯ ನೃತ್ಯ ಸ್ಪರ್ಧೆ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದೆ. ಸ್ಪರ್ಧಿಗಳು ಖಾಯಂ ಸರ್ಕಾರಿ ನೌಕರರಾಗಿರಬೇಕು. ದೈಹಿಕ ಶಿಕ್ಷಕರು, ಕ್ರೀಡಾ ಇಲಾಖೆ ತರಬೇತುದಾರರು ಭಾಗವಹಿಸುವಂತಿಲ್ಲ. ಒಬ್ಬ ಸ್ಪರ್ಧಿ ಅಥ್ಲೆಟಿಕ್‌ಸ್‌ನ ಮೂರು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ 9480032712 ಸಂಪರ್ಕಿಸಬಹುದು ಎಂದರು.ಫೆ.27ರಂದು ಮಹಾ ಸಮ್ಮೇಳನ:

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಫೆ.27ರಂದು ಬೆಂಗಳೂರಿನ ಅರಮನೆ ಮೈದಾನದ ಕೃಷ್ಣ ವಿಹಾರ ಸಭಾಂಗಣದಲ್ಲಿ ಮಹಾ ಸಮ್ಮೇಳನ ನಡೆಯಲಿದೆ. ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಹಳೆ ಪಿಂಚಣಿ ಯೋಜನೆ ಮರು ಜಾರಿ, 7ನೇ ವೇತನ ಆಯೋಗದ ವರದಿಯ ಅನುಷ್ಠಾನ, ಆರೋಗ್ಯ ಸಂಜೀವಿನಿ ಯೋಜನೆ ಲೋಕಾರ್ಪಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಒತ್ತಾಯಿಸಲಾಗುವುದು. ಈಡೇರಿಸುವಂತೆ ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಸಂಘದ ಜಿಲ್ಲಾ ಕಾರ್ಯದರ್ಶಿ ಎಂ.ಸಿ.ಅರುಣ್ ಕುಮಾ‌ರ್, ಗೌರವಾಧ್ಯಕ್ಷ ಎಸ್.ಟಿ.ಶಮ್ಮಿ, ಹಿರಿಯ ಉಪಾಧ್ಯಕ್ಷ ಪಿ.ಎಂ.ಬಾಬು, ಖಜಾಂಚಿ ಪಿ.ಡಿ.ರಾಜೇಶ್, ರಾಜ್ಯ ಪರಿಷತ್‌ ಸದಸ್ಯ ವಿ.ಎಸ್.ಸುಗುಣಾನಂದ ಸುದ್ದಿಗೋಷ್ಠಿಯಲ್ಲಿದ್ದರು.

Share this article