ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ನಾಗಾರಾಧನೆಯ ಪುಣ್ಯ ತಾಣ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭೋಜನ ಪ್ರಸಾದ ಪವಿತ್ರವಾದುದು. ಇಲ್ಲಿ ವಾರ್ಷಿಕವಾಗಿ ಸುಮಾರು ೫೫ ಲಕ್ಷಕ್ಕೂ ಮಿಕ್ಕಿ ಭಕ್ತರು ಭೋಜನ ಪ್ರಸಾದ ಸ್ವೀಕರಿಸುತ್ತಾರೆ. ಇದೀಗ ದೇವಳದ ಆಡಳಿತಾಧಿಕಾರಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಮತ್ತು ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಚಿಂತನಾತ್ಮಕ ಯೋಜನೆ ಮೇರೆಗೆ ಪ್ರಸಾದ ಬೋಜನ ವ್ಯವಸ್ಥೆಯಲ್ಲಿ ವಿತರಿಸುವ ಖಾದ್ಯಗಳಲ್ಲಿ ಬದಲಾವಣೆಗಳನ್ನು ತರಲಾಗಿದೆ. ಇದರಿಂದಾಗಿ ಭಕ್ತರಿಗೆ ಪ್ರತಿ ದಿನ ವಿಶೇಷ ಭೋಜನ ಪ್ರಸಾದ ದೊರಕುತ್ತಿದೆ.ಈ ಹಿಂದೆ ವಿಶೇಷ ದಿನಗಳನ್ನು ಹೊರತು ಪಡಿಸಿ ಪ್ರತಿದಿನ ಒಂದೇ ರೀತಿಯ ಪಾಯಸವನ್ನು ಭಕ್ತರಿಗೆ ವಿತರಿಸಲಾಗುತ್ತಿತ್ತು. ಆದರೆ ಇದೀಗ ನೂತನ ಯೋಜನೆ ಮೂಲಕ ಪ್ರತಿದಿನ ಬೇರೆ ಬೇರೆ ತೆರನಾದ ಪಾಯಸಗಳನ್ನು ಭಕ್ತರಿಗೆ ಉಣಬಡಿಸುವ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿದ್ದಾರೆ.
ಕಡ್ಲೆ ಬೇಳೆ, ಹೆಸರು ಬೇಳೆ, ಕಡ್ಳೆ ಬೇಳೆ ಸಾಬಕ್ಕಿ, ಗೋಧಿ ಕಡಿ, ಹಾಲು ಪಾಯಸ, ಅಕ್ಕಿ ಪಾಯಸ, ಶ್ಯಾವಿಗೆ ಪಾಯಸ, ರವೆ ಪಾಯಸ ಮತ್ತು ಸಿರಿಧಾನ್ಯ ಸೇರಿದಂತೆ ೧೦ ಬಗೆಯ ಪಾಯಸಗಳನ್ನು ತಯಾರಿಸಿ ಭಕ್ತರಿಗೆ ವಿತರಿಸಲಾಗುತ್ತದೆ. ಅತ್ಯುತ್ತಮವಾದ ೧೫ ಬಗೆಯ ತರಕಾರಿಗಳನ್ನು ಪ್ರತಿದಿನ ಸಾಂಬಾರಿಗೆ ಉಪಯೋಗಿಸಲು ಯೋಜನೆ ಮಾಡಿದ್ದಾರೆ.ಪ್ರತಿನಿತ್ಯ ಭಕ್ತರಿಗೆ ಅನಾದಿ ಕಾಲದಿಂದ ಪ್ರಸಾದದಲ್ಲಿ ವಿತರಿಸಲಾಗುತ್ತಿರುವ ಸಾಂಪ್ರದಾಯಿಕ ಚಟ್ನಿ, ಪಲ್ಯ, ಅನ್ನ, ಸಾರು, ಸಾಂಬಾರು, ಪಾಯಸ, ಮಜ್ಜಿಗೆ ವಿತರಣೆಯಾಗುತ್ತದೆ. ಜಾತ್ರೆ ಮತ್ತು ಹೊಸ್ತಾರೋಗಣೆಯ ದಿನಗಳಲ್ಲಿ ಭಕ್ಷ್ಯಗಳ ಸಂಖ್ಯೆ ಅಧಿಕವಿರುತ್ತದೆ. ಏಕಾದಶಿ ದಿನ ಅವಲಕ್ಕಿ, ಉಪ್ಪಿಟ್ಟು ಮತ್ತು ಮಜ್ಜಿಗೆ ವಿತರಿಸಲಾಗುತ್ತದೆ.
ಶಿಕ್ಷಣಕ್ಕಾಗಿ ಅನ್ನದಾನ:ದೇವಳವು ತನ್ನ ಆಡಳಿತದಲ್ಲಿ ಎರಡು ಶಿಕ್ಷಣ ಸಂಸ್ಥೆಗಳನ್ನು ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ.ಈ ವಿದ್ಯಾ ಸಂಸ್ಥೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ದಿನ ನಿತ್ಯ ಶ್ರೀ ದೇವಳದಿಂದ ಪ್ರಸಾದ ಭೋಜನ ವಿತರಣೆಯಾಗುತ್ತಿದೆ. ಕ್ಷೇತ್ರದಲ್ಲಿನ ಇತರ ಶಾಲೆಗಳಿಗೆ ಕೂಡಾ ಶ್ರೀ ದೇವಳದಿಂದ ಬೋಜನ ವ್ಯವಸ್ಥೆ ಮಾಡಲಾಗುತ್ತದೆ. ಕ್ಷೇತ್ರದಲ್ಲಿ ವ್ಯಾಸಂಗ ಮಾಡುವ ಸುಮಾರು ೩,೩೦೦ ಮಂದಿಗೆ ಭೋಜನ ಪ್ರಸಾದ ವಿತರಿಸಲಾಗುತ್ತಿದೆ.
...................................ದೇವಳದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಹೈಟೆಕ್ ಪಾಕಶಾಲೆ ನಿರ್ಮಾಣವಾಗಿದೆ. ಮುಂದೆ ಭಕ್ತರಿಗೆ ಶ್ರೀ ದೇವರ ಬೋಜನ ಪ್ರಸಾದ ಸ್ವೀಕರಿಸಲು ಹೆಚ್ಚಿನ ವ್ಯವಸ್ಥೆ ಮಾಡಲಾಗುವುದು.
-ಜುಬಿನ್ ಮಹಪಾತ್ರ, ಆಡಳಿತಾಧಿಕಾರಿ...............
ಭಕ್ತರಿಗೆ ಪೌಷ್ಟಿಕಾಂಶ ಭರಿತ ವಿಶೇಷ ಬೋಜನ ಪ್ರಸಾದ ವಿತರಿಸುವ ದೃಷ್ಟಿಯಿಂದ ಈ ವಿಶೇಷ ವ್ಯವಸ್ಥೆ ಮಾಡಲಾಗಿದೆ. ವಿವಿಧ ಬಗೆಯ ಪಾಯಸ, ವಿವಿಧ ತರಕಾರಿಗಳ ಸಾಂಬಾರು ತಯಾರಿಸಲಾಗುತ್ತಿದೆ.-ಅರವಿಂದ ಅಯ್ಯಪ್ಪ ಸುತಗುಂಡಿ, ಕಾರ್ಯನಿರ್ವಹಣಾಧಿಕಾರಿ.
.....................ಪ್ರತಿದಿನ ಕಾಲೇಜಿಗೆ ಊಟ ಬರುತ್ತಿರುವುದರಿಂದ ವಿದ್ಯಾರ್ಥಿಗಳ ಹಾಗೂ ಕಾಲೇಜಿನ ಬೆಳವಣಿಗೆಗೆ ಪೂರಕವಾಗಿದೆ. ಹಳ್ಳಿಗಳಿಂದ ಮತ್ತು ದೂರದೂರುಗಳಿಂದ ಬರುವಂತಹ ವಿದ್ಯಾರ್ಥಿಗಳು ಬೆಳಗ್ಗೆ ಬೇಗನೆ ಬಿಟ್ಟು ಆಹಾರ ಸೇವಿಸದೆ ಬರುತ್ತಾರೆ.ಆದುದರಿಂದ ಮಧ್ಯಾಹ್ನ ಉತ್ತಮವಾದ ಭೋಜನ ಸಿಗುವ ಕಾರಣ ಮಕ್ಕಳ ಆರೋಗ್ಯ ವೃದ್ಧಿಯಾಗುತ್ತಿದೆ.
-ಸೋಮಶೇಖರ ನಾಯಕ್, ಎಸ್‌ಎಸ್‌ಪಿಯು ಕಾಲೇಜ್ ಪ್ರಾಂಶುಪಾಲೆ.