ಗದಗ: ನಗರದ ವೀರನಾರಾಯಣನ ದೇವಸ್ಥಾನದಲ್ಲಿ ಕರ್ನಾಟಕ ಭಾರತ ಕಥಾಮಂಜರಿ ಕಾವ್ಯವನ್ನು ಸಾರಸ್ವತ ಲೋಕಕ್ಕೆ ನೀಡಿದ ಗದುಗಿನ ನಾರಣಪ್ಪ ಕವಿ ಕುಮಾರವ್ಯಾಸನ ಜಯಂತಿಯನ್ನು ಕುಮಾರವ್ಯಾಸ ಸ್ತಂಭಕ್ಕೆ ಪೂಜೆ, ಮಾಲಾರ್ಪಣೆ ಹಾಗೂ ಕರ್ನಾಟ ಭಾರತ ಕಥಾ ಮಂಜರಿ ಗ್ರಂಥಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಗದುಗಿನ ಆರಾಧನಾ ಫೌಂಡೇಶನ್, ಹೊಂಬಾಳಿ ಕಲಾ ಅಕಾಡೆಮಿಯು ನಿರ್ಮಾಣ ಮಾಡುತ್ತಿರುವ ಕುಮಾರವ್ಯಾಸ ಭಾರತದ ಗಮಕ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು. ಗಮಕ ವಿದ್ವಾಂಸ ವಿಶ್ವನಾಥ ಕುಲಕರ್ಣಿ ಅವರಿಂದ ಗಮಕವಾಚನ ನೆರವೇರಿತು. ಕಲಾವಿದೆ ಮಂಜರಿ ಹೊಂಬಾಳಿ ಅವರ ನಿರ್ದೇಶನದಲ್ಲಿ ಚಿತ್ರೀಕರಣ ಪ್ರಾರಂಭವಾಯಿತು.ಈ ವೇಳೆ ಡಾ. ದತ್ತಪ್ರಸನ್ನ ಪಾಟೀಲ ಮಾತನಾಡಿ, ಕುಮಾರವ್ಯಾಸ ಕನ್ನಡದ ಆಸ್ತಿ ಅವನು ಬರೆದ ಗದುಗಿನ ಭಾರತ ಪ್ರತಿಯೊಬ್ಬರೂ ಕೇಳಿ ಆಸ್ವಾದಿಸಬೇಕು, ಇದು ಪ್ರತಿ ಮನೆಗೂ ತಲುಪಬೇಕು. ಆ ನಿಟ್ಟಿನಲ್ಲಿ ಡಿಜಿಟಲ್ ಅಂತರ್ಜಾಲ ಮಾಧ್ಯಮ ಹಾಗೂ ಯೂಟ್ಯೂಬ್ ಇತ್ಯಾದಿಗಳ ಮೂಲಕ ಪ್ರತಿಯೊಬ್ಬರಿಗೂ ಸುಲಭವಾಗಿ ತಮ್ಮ ಮೊಬೈಲ್‌ಗಳಲ್ಲಿ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಇಂದು ಹೊಂಬಾಳಿ ಕಲಾ ಅಕಾಡೆಮಿ ಕೈಗೊಂಡ ಗಮಕ ಚಿತ್ರೀಕರಣ ಯೋಜನೆ ಅತ್ಯಂತ ಶ್ಲಾಘನೀಯ ಎಂದರು.
ಹೊಂಬಾಳಿ ಕಲಾ ಅಕಾಡೆಮಿಯ ಅಧ್ಯಕ್ಷೆ ಮಂಜರಿ ಹೊಂಬಾಳಿ ಮಾತನಾಡಿ, ಕುಮಾರವ್ಯಾಸ ಜಯಂತಿಯ ದಿನ ಚಿತ್ರೀಕರಣಕ್ಕೆ ಚಾಲನೆ ದೊರೆಯುತ್ತಿರುವುದು ಅತ್ಯಂತ ಅರ್ಥಪೂರ್ಣ ಇದು ಎರಡು-ಮೂರು ವಷರ್ಗಳ ಯೋಜನೆಯಾಗಿದ್ದು, ಒಂದು ಭಾಗದ ಚಿತ್ರೀಕರಣ ಪೂರ್ಣಗೊಂಡ ನಂತರ ಹೊಂಬಾಳಿ ಪ್ರತಿಷ್ಠಾನ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗುವುದು. ಹಾಗೂ ಸಂಪೂರ್ಣ ಕುಮಾರವ್ಯಾಸ ಭಾರತವನ್ನು ಚಿತ್ರೀಕರಿಸಿ ಜನಮಾನಸಕ್ಕೆ ಅರ್ಪಿಸುವ ಸೇವೆಗೆ ಎಲ್ಲರ ಸಹಕಾರ ಮಾರ್ಗದರ್ಶನ ಬೇಕು ಎಂದು ಕೋರಿದರು.ವೀರನಾರಾಯಣ ದೇವಸ್ಥಾನದ ವ್ಯವಸ್ಥಾಪಕ ಪ್ರಹ್ಲಾದಾಚಾರ್ಯ ನಿಲುಗಲ್, ವೇದಮೂರ್ತಿ ರತ್ನಾಕರ್‌ಭಟ್ ಜೋಶಿ, ವಿದ್ಯಾದಾನ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ, ರಾಘಣ್ಣ ಜೋಷಿ, ರವಿ ಜೋಶಿ, ಗುರುರಾಜ ದೇಶಪಾಂಡೆ, ಮಧುಸೂದನ ಹೊಂಬಾಳಿ, ಹರೀಶ ಹೊಂಬಾಳಿ ಮತ್ತಿತರು ಇದ್ದರು.