ನರಗುಂದ: ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎಂದು ಬಿರುದಾಂಕಿತರಾದ ಕುಮಾರವ್ಯಾಸ ಸ್ವಮೋಹವಿಲ್ಲದ ಕವಿ. ಅವನು ಗಮಕ ಶೈಲಿಯಲ್ಲಿ ರಚಿಸಿದ ಕಾವ್ಯಗಳು ಅನಕ್ಷರಸ್ಥರು ಕೂಡಾ ವಾಚನ ಮತ್ತು ವಿವರಣೆ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಉಳಿದುಕೊಂಡು ಬಂದಿರುವ ಕಾವ್ಯ ಪರಂಪರೆಯಾಗಿದೆ ಎಂದು ಶಿರೋಳದ ಉಪನ್ಯಾಸಕ ಮೋಹನ ಪಾಗೋಜಿ ಅಭಿಪ್ರಾಯ ಪಟ್ಟರು.
ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಶ್ರೀಗುರು ಬ್ರಹ್ಮಾನಂದ ಶಿವಾನುಭವ ಧರ್ಮಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 354 ನೇ ಮಾಸಿಕ ಶಿವಾನುಭವ ಹಾಗೂ ಕುಮಾರವ್ಯಾಸರ ಜಯಂತಿ ಸಮಾರಂಭದಲ್ಲಿ ಮಾತನಾಡಿದರು. ಕುಮಾರವ್ಯಾಸ ಕನ್ನಡ ಸಾಹಿತ್ಯದ ಬೆಳವಣಿಗೆಯ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದಾನೆ. ಅವನು ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪಕವನ್ನು ರಚಿಸಿದ್ದರಿಂದ, ವ್ಯಾಸ ಮಹಾಕವಿಯ ಮಾನಸಪುತ್ರ ತಾನೆನ್ನುವ ವಿನೀತ ಭಾವದಿಂದ ನಾರಣಪ್ಪ ಕುಮಾರ ವ್ಯಾಸನಾಗಿದ್ದಾನೆ. ಈ ಹೆಸರು ಕುಮಾರವ್ಯಾಸನಿಗೆ ಅನ್ವರ್ಥಕವಾಗಿದೆ. ಕುಮಾರವ್ಯಾಸ ಕನ್ನಡ ಭಾಷೆ ಮತ್ತು ಸಾಹಿತ್ಯದ ಶ್ರೀಮಂತ ಸಾಹಿತ್ಯ ಪರಂಪರೆಯಲ್ಲಿ ಪ್ರಮುಖ ವ್ಯಕ್ತಿ. ಕುಮಾರವ್ಯಾಸನು ತನ್ನ ಶ್ರೇಷ್ಠ ಕೃತಿಯಾದ ಗದುಗಿನ ಭಾರತ ಕೃತಿಗೆ ವಿಶೇಷವಾಗಿ ಹೆಸರುವಾಸಿಯಾಗಿದ್ದಾನೆ, ಇದೊಂದು ಮಹಾಕಾವ್ಯವಾಗಿದೆ. ಕುಮಾರವ್ಯಾಸನು ತನ್ನ ಕೃತಿಯಲ್ಲಿನ ಪಾತ್ರಗಳ ಮೂಲಕ ನೀತಿಯನ್ನು ತಿಳಿಯಪಡಿಸಿದ್ದಾನೆ. ಇದರ ಹಿಂದಿರುವ ಉದ್ದೇಶ ದುಷ್ಟ ಅಥವಾ ಕೆಟ್ಟ ಕೆಲಸಗಳನ್ನು ಹಾಗೂ ಸಮಾಜಕ್ಕೆ ಹಾನಿ ಮಾಡುವಂತಹ ಕಾರ್ಯಗಳನ್ನು ತಡೆಯುವುದೇ ಆಗಿದೆ. ಅಲ್ಲದೆ ಈ ರೀತಿಯ ಕೆಟ್ಟ ಕೆಲಸಗಳು ಮುಂದಿನ ಪೀಳಿಗೆಯವರೆಗೆ ಸಾಗದೇ ಇರಲಿ ಎಂಬ ಉದ್ದೇಶವೂ ಕುಮಾರವ್ಯಾಸನ ಕಾವ್ಯದಲ್ಲಿ ಅಡಗಿದೆ ಎಂದರು. ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಶಿಕ್ಷಕ ಶಿವಾನಂದ ಮಲ್ಲಾಪೂರ ಮಾತನಾಡಿ, ಕುವೆಂಪುರವರು ಹೇಳಿರುವಂತೆ ಕುಮಾರವ್ಯಾಸ ಹಾಡಿದನೆಂದರೆ ಕಲಿಯುಗ ದ್ವಾಪಾರಯುಗವಾಗುವುದು ಅಂತಹ ಅದ್ಭುತ ಕಾವ್ಯಶಕ್ತಿ ಕುಮಾರವ್ಯಾಸನಲ್ಲಿತ್ತು. ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಮಹಾಕಾವ್ಯವನ್ನು ಮೀರಿ, ಕಾವ್ಯ, ನಾಟಕ ಮತ್ತು ವಿದ್ವತ್ಪೂರ್ಣ ಗ್ರಂಥಗಳಂತಹ ವಿವಿಧ ಪ್ರಕಾರಗಳನ್ನು ಒಳಗೊಂಡಿರುವುದು ಅವನ ಕವಿತ್ವಶಕ್ತಿಯನ್ನು ತೋರಿಸುತ್ತದೆ ಎಂದರು. ಶಾಂತಲಿಂಗ ಶ್ರೀಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವೇದಿಕೆ ಮೇಲೆ ವೀರಯ್ಯ ಸಾಲಿಮಠ, ಕೆ.ಟಿ.ಪಾಟೀಲ ಮುದಕನ್ ಹೆರಕಲ್, ಹನಮಂತಗೌಡ ಪಾಟೀಲ, ಮುರುಳಿಧರ, ದಾವಲಸಾಭ ಪ್ರಮುಖರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗದಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಅಧೀಕ್ಷಕ ಎಸ್.ಡಿ. ಕುಲಕರ್ಣಿ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಆರ್.ಕೆ. ಐನಾಪೂರ ನಿರೂಪಿಸಿದರು. ಮಹಾಂತೇಶ ಹಿರೇಮಠ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.