ಕೊಪ್ಪಳ: ಗವಿಸಿದ್ದೇಶ್ವರ ಮಹಾರಥೋತ್ಸವವು ಭಕ್ತ ಸಾಗರದ ವಿಶೇಷ ಜಾತ್ರೆಯಾಗಿದ್ದು, ದಕ್ಷಿಣ ಭಾರತದ ಕುಂಭ ಮೇಳವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.ಗವಿಸಿದ್ದೇಶ್ವರ ಮಹಾರಥೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಇದು ಅದ್ಭುತವಾದ ಜಾತ್ರೆಯಾಗಿದೆ. ಎಲ್ಲೆಲ್ಲೂ ಜನಸಾಗರ. ಇಲ್ಲಿ ಎಲ್ಲರ ಮನೆಯ ಪ್ರಸಾದವನ್ನು ಒಂದು ಕಡೆ ಹಾಕಿ ನಾವು ಪ್ರಸಾದವನ್ನು ಸೇವನೆ ಮಾಡುತ್ತೇವೆ. ಇಂದಿನ ಜಾತ್ರೆ ಅಂದರೆ ಇದು ವೈವಿಧ್ಯಮಯ ಜಾತ್ರೆಯಾಗಿದೆ. ಇತಿಹಾಸ ಸೃಷ್ಟಿಯಾಗುವ ಜಾತ್ರೆ ಇದು. ಇಂತಹ ಜಾತ್ರೆ ಎಲ್ಲಿಯೂ ನಡೆಯುದಿಲ್ಲ. ಆಶೀರ್ವಾದ, ದಾಸೋಹ, ಶಿಕ್ಷಣ ಸೇರಿದಂತೆ ಇಲ್ಲಿ ಎಲ್ಲವನ್ನೂ ಪಡೆಯುತ್ತೇವೆ. ಇದು ಶ್ರದ್ಧಾ ಭಕ್ತಿಯ ಜಾತ್ರೆ ಎಂದರು.
ಈ ಸಲದ ಗವಿಸಿದ್ದೇಶ್ವರ ಜಾತ್ರೆಗೆ 10 ಲಕ್ಷ ಭಕ್ತರು ಆಗಮಿಸಿದ್ದಾರೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.ಪ್ರಸಕ್ತ ವರ್ಷ ಹತ್ತು ಲಕ್ಷಕ್ಕೂ ಅಧಿಕ ಭಕ್ತರು ಸೇರಿದ್ದಾರೆ. ಈ ಜಾತ್ರೆಗೆ ಲಕ್ಷ ಲಕ್ಷ ಭಕ್ತರು ಆಗಮಿಸಿದ್ದಾರೆ. ಪ್ರತಿ ವರ್ಷಕ್ಕಿಂತ ಈ ವರ್ಷ ಜನಸ್ತೋಮ ಹೆಚ್ಚು ಇದೆ. ಈ ಮಠ ಬಡವರಿಗೆ ಉಚಿತ ಶಿಕ್ಷಣ ಹಾಗೂ ವಸತಿ ನೀಡುತ್ತಿದೆ. ಈ ಗವಿಮಠ ನಮ್ಮ ಜಿಲ್ಲೆಯ ಹೆಮ್ಮೆಯ ಮಠವಾಗಿದೆ. ಎಲ್ಲರಿಗೂ ಗವಿಶ್ರೀಗಳ ಆಶೀರ್ವಾದ ಇರಲಿ ಎಂದರು.
ವಿಧಾನಸಭೆ ಮುಖ್ಯ ಸಚೇತಕ, ಶಾಸಕ ದೊಡ್ಡನಗೌಡ ಪಾಟೀಲ್ ಮಾತನಾಡಿ, ಇದು ಭಕ್ತಿಯ ಜಾತ್ರೆಯಾಗಿದೆ. ಗವಿಸಿದ್ದೇಶ್ವರ ಜಾತ್ರೆ ಭಕ್ತಿ, ಭಾವಗಳ ಸಂಕೇತವಾಗಿದೆ. ಗವಿಶ್ರೀಗಳ ಕಾರ್ಯ ಜಗತ್ತಿಗೆ ಮಾದರಿಯಾಗಿದೆ. ಅನ್ನ, ಅಕ್ಷರ, ಭಕ್ತಿ ಸಂಗಮ ಗವಿಮಠವಾಗಿದೆ ಎಂದು ಬಣ್ಣಸಿದರು.ಶಾಸಕ ಜನಾರ್ದನ ರೆಡ್ಡಿ ಮಾತನಾಡಿ, ಗವಿಮಠದ ವಿಶೇಷ ಜಾತ್ರೆಗೆ ಅಣ್ಣ ಬಸವಣ್ಣನವರ ವಚನದಂತೆ ಈ ಮಠ ಜಾತಿ, ಮತ, ಧರ್ಮ ಮೀರಿ ನಿಂತಿದೆ. ಈ ಮಠ ನಮ್ಮ ಜಿಲ್ಲೆಯ ಪುಣ್ಯ. ಬರುವ ದಿನಗಳಲ್ಲಿ ಮಠದ ಅಭಿವೃದ್ಧಿಗೆ ನಾನು ಸಹಕಾರ ನೀಡುತ್ತೇನೆ. ಈ ಮಠ ದೇಶಕ್ಕೆ ಮಾದರಿಯಾಗಿದೆ ಎಂದರು.ಸಂಸದ ಭಗವತ್ ಕುಬಾ ಮಾತನಾಡಿ, ಈ ಮಠದ ವಿಶೇಷ ತ್ರಿವಿಧ ದಾಸೋಹ. ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದಾಗಿದೆ. ನಾಡಿನ ಸಂಸ್ಕೃತಿಯನ್ನು ಈ ಮಠವು ಕಾಪಾಡಿಕೊಂಡು ಬರುತ್ತಿದೆ ಎಂದರು.ಎಂಎಲ್ಸಿ ಹೇಮಲತಾ ನಾಯಕ ಮಾತನಾಡಿ, ಜಗತ್ತಿನಲ್ಲಿ ಬಹಳಷ್ಟು ಪುಣ್ಯವಾದ ದಿನ ಕೊಪ್ಪಳ ಜಾತ್ರೆ ದಿನ. ಇದು ಜಗತ್ತಿನಲ್ಲಿ ಪ್ರಸಿದ್ದವಾಗಿದೆ. ಗವಿಶ್ರೀಗಳು ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾರೆ.ಈ ಜಾತ್ರೆಯಲ್ಲಿ ತೆಪ್ಪೋತ್ಸವ ಅದ್ಬುತವಾಗಿರುತ್ತದೆ. ದರ್ಶನಕ್ಕೆ ಬಂದ ಜನರು ವಾಪಸ್ ಮನೆಗೆ ಹೋಗಬೇಕು ಎಂದೆನಿಸುವುದಿಲ್ಲ ಎಂದರು.ಶಾಸಕ ವೆಂಕಟಗೌಡ ನಾಡಗೌಡ ಮಾತನಾಡಿ, ನಮ್ಮ ಭಾಗದ ಅತಿದೊಡ್ಡ ಜಾತ್ರೆ ಇದು. ರಾಜಕೀಯ ಕಾರ್ಯಕ್ರಮ ಇಷ್ಟು ಜನ ಸೇರೋಲ್ಲ. ಇದು ಗವಿಶ್ರೀಗಳ ಮೇಲಿರುವ ನಂಬಿಕೆ ಹಾಗೂ ಗವಿಮಠದ ಶಕ್ತಿಯಾಗಿದೆ. ಆ ಗವಿಸಿದ್ದೇಶ್ವರ ಸುಖ ಸಮೃದ್ಧಿ ಕೊಟ್ಟು ಕಾಪಾಡಲಿ ಎಂದರು.