ಹುಬ್ಬಳ್ಳಿ: ಕುಂದಗೋಳ ಹಾಗೂ ಶಿರಗುಪ್ಪಿ ಹೋಬಳಿಯ ಹೆಸರು ಬೆಳೆಗೆ ಅಂದಾಜು ₹30 ಕೋಟಿ ಬೆಳೆ ಪರಿಪಾರ ಬಿಡುಗಡೆಗೆ ಕಾರಣರಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ರೈತರು ಸನ್ಮಾನಿಸಿದರು.
ಇಲ್ಲಿಯ ಸಂಸದರ ಕಚೇರಿಯಲ್ಲಿ ಸೋಮವಾರ ಶಾಸಕ ಎಂ.ಆರ್. ಪಾಟೀಲ ನೇತೃತ್ವದಲ್ಲಿ ಕೇಂದ್ರ ಸಚಿವರನ್ನು ಭೇಟಿಯಾದ ರೈತ ಮುಖಂಡರು ಹಸಿರು ಟಾವೆಲ್ ಹಾಕಿ ಅಭಿನಂದಿಸಿದರು.ಈ ವೇಳೆ ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಬೆಳೆ ವಿಮೆ ಪರಿಹಾರ ಬಿಡುಗಡೆ ಶ್ರಮಿಸಿದ ಕೇಂದ್ರ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಚಿವ ಜೋಶಿ, ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿ ಆಫ್ ಇಂಡಿಯಾದವರು ಈ ಎರಡು ಹೋಬಳಿಗಳ ವಿಮಾ ಬಿಡುಗಡೆಗೆ ತಾಂತ್ರಿಕ ಕಾರಣಗಳೊಂದಿಗೆ ಬೆಳೆ ಕಟಾವು ಸಮೀಕ್ಷೆ ಪ್ರಕಾರ ವಿಮೆ ನೀಡಲು ಮಾನದಂಡಗಳು ಹೊಂದಾಣಿಕೆಯಾಗುತ್ತಿಲ್ಲವೆಂದು ನಿರಾಕರಿಸಿದ್ದರು. ಇದನ್ನು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ರೈತರಿಗೆ ಅನ್ಯಾಯವಾಗದಿರಲಿ ಎಂದು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು. ಈ ಕುರಿತಂತೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಿ ಪರಿಹಾರ ಬಿಡುಗಡೆ ಆದೇಶ ಹೊರಡಿಸಲಾಗಿದೆ ಎಂದ ಅವರು, ರೈತರ ಪರ ಕಾಳಜಿ ತೋರಿದ ಜಿಲ್ಲಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.ಮಧ್ಯವರ್ತಿಗಳಿಗೆ ಹಣ ನೀಡಬೇಡಿ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಯಾರಿಗೂ ತಮ್ಮ ಖಾತೆಯಿಂದ ಹಣ ನೀಡಬೇಡಿ. ನಾವೇ ವಿಮೆ ಹಣ ಪಾವತಿಸಿದ್ದು, ತಮಗೆ ಅರ್ಧ ಹಣ ನೀಡಲು ರೈತರ ಬೆನ್ನುಬಿದ್ದಿರುವುದು ಗಮನಕ್ಕೆ ಬಂದಿದೆ. ಯಾರಾದರೂ ಕೇಳಿದರೆ ಸಚಿವರ ಕಚೇರಿಗೆ ಅಥವಾ ಜಿಲ್ಲಾಧಿಕಾರಿ, ಕೃಷಿ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದು ಸಚಿವ ಜೋಶಿ ಮತ್ತು ಜಿಲ್ಲಾಧಿಕಾರಿ ದಿವ್ಯ ಪ್ರಭು ರೈತರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ವಿಪ ಸದಸ್ಯ ಎಸ್.ವಿ. ಸಂಕನೂರ, ಶಾಸಕ ಮಹೇಶ ಟೆಂಗಿನಕಾಯಿ, ಗುರುನಾಥ ಪಾಟೀಲ, ರೈತ ಮುಖಂಡರು, ಮತ್ತಿತರರು ಉಪಸ್ಥಿತರಿದ್ದರು.