ಇದು ಹೂವಿನಾ ಲೋಕವೋ..!

KannadaprabhaNewsNetwork | Published : Oct 10, 2024 2:23 AM

ಸಾರಾಂಶ

ಪ್ರದರ್ಶನ ನೋಡುವುದಕ್ಕಿಂತ ಫೋಟೋ, ವಿಡಿಯೋ, ಸೆಲ್ಫಿ ಮಾಡುವವರೇ ಹೆಚ್ಚು

ಕನ್ನಡಪ್ರಭ ವಾರ್ತೆ ಮೈಸೂರುದಸರಾ ಮಹೋತ್ಸವ ಅಂಗವಾಗಿ ಮೈಸೂರಿನ ಹಾರ್ಡಿಂಜ್ ವೃತ್ತದ ಬಳಿಯ ಕುಪ್ಪಣ್ಣ ಪಾರ್ಕ್ ನಲ್ಲಿ ಆಯೋಜಿಸಲಾಗಿರುವ ದಸರಾ ಫಲಪುಷ್ಪ ಪ್ರದರ್ಶನ ಎಂಬ ಹೂವಿನ ಲೋಕದ ಸೌಂದರ್ಯವನ್ನು ಕಣ್ಣು ತುಂಬಿಕೊಳ್ಳುವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.ಬಣ್ಣ ಬಣ್ಣದ ಹೂವುಗಳಿಂದ ಅಲಂಕೃತಗೊಂಡಿರುವ ಕುಪ್ಪಣ್ಣ ಪಾರ್ಕ್ ಮಹಿಳೆಯರು, ಮಕ್ಕಳ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಪ್ರದರ್ಶನದಲ್ಲಿರುವ ಹೂವುಗಳು, ಕಲಾಕೃತಿಗಳನ್ನು ನೋಡುವುದಕ್ಕಿಂತ ಫೋಟೋ, ವಿಡಿಯೋ, ಸೆಲ್ಫಿ ಮಾಡುವವರೇ ಸಂಖ್ಯೆಯೇ ಜಾಸ್ತಿ ಇದೆ.ತೋಟಗಾರಿಕಾ ಇಲಾಖೆ ಮತ್ತು ಜಿಲ್ಲಾ ತೋಟಗಾರಿಕೆ ಸಂಘವು ಆಯೋಜಿಸಿರುವ ದಸರಾ ಫಲಪುಷ್ಪ ಪ್ರದರ್ಶನವು ಆರಂಭವಾಗಿ ವಾರ ಪೂರೈಸಿದರು ಆಕರ್ಷಣೆ ಮಾತ್ರ ಕಳೆದುಕೊಂಡಿಲ್ಲ. ಪ್ರತಿ ನಿತ್ಯ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಮಹಿಳೆಯರು, ಯುವತಿಯರು, ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಹೂವಿನ ಲೋಕವನ್ನು ವೀಕ್ಷಿಸಲು ಆಗಮಿಸುತ್ತಿರುವುದು ವಿಶೇಷ.ಆಫ್ರಿಕನ್ ಮಾರಿಗೋಲ್ಡ್, ಹಳದಿ, ಆರ್ಕಿಡ್ ಗಳು, ಸೆಲೋಸಿಯಾ, ಕಾರ್ನೇಷನ್, ಆಂಥೂರಿಯ0, ಗರ್ಬೆರಾ, ರೋಸಸ್, ಕಾಸ್ಮೊಸ್, ಬ್ಲೂಡೈಸಿ, ಪಿಂಗ್ ಪಾಂಗ್, ಪೆಟುನಿಯಾ, ಟೊರೆನಿಯಾ, ಡ್ರಾಕೇನಾ, ಟಿಥೋನಿಯಾ, ಜಿನ್ನಿಯಾ ಸೇರಿದಂತೆ ವಿವಿಧ ಬಗೆಯ ಅಲಂಕಾರಿಕ ಹೂವುಗಳು ಪ್ರದರ್ಶನದಲ್ಲಿದೆ. ಈ ಹೂವುಗಳನ್ನು ಬಳಸಿ ನಿರ್ಮಿಸಲಾಗಿರುವ ವಿವಿಧ ಮಾದರಿಗಳು ನೋಡುಗರನ್ನು ಸೆಳೆಯುತ್ತಿವೆ. ಸಂಸತ್ ಭವನ- ಅನುಭವ ಮಂಟಪಕುಪ್ಪಣ್ಣ ಪಾರ್ಕಿನಲ್ಲಿರುವ ಗಾಜಿನ ಮನೆಯೊಳಗೆ ವಿವಿಧ ಬಗೆಯ ಹೂವುಗಳಿಂದ ನಿರ್ಮಿಸಿರುವ ಸಂಸತ್ ಭವನ, ಶಾಕ್ಯ ರಾಜಮನೆತನ ಬೌದ್ಧ ಬೋಧನೆಗಳು ಹಾಗೂ ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪವು ಜನಾಕರ್ಷಕವಾಗಿವೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಆರಂಭವಾದ ಭದ್ರಾವತಿ ಕಾರ್ಖಾನೆ, ಶಿವನಸಮುದ್ರ ವಿದ್ಯುತ್ ಉತ್ಪಾದನೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ಆಕಾಶವಾಣಿ ಮಾದರಿಗಳನ್ನು ಸಹ ಪುಷ್ಪಗಳ ಮಾದರಿಯಲ್ಲಿ ನಿರ್ಮಿಸಿ ಪ್ರದರ್ಶಿಸಲಾಗಿದೆ.ಕರ್ನಾಟಕ ಸಂಭ್ರಮ:50 ಕುರಿತು ಹಳದಿ ಮತ್ತು ಕೆಂಪು ಬಣ್ಣದ ಗುಲಾಬಿ ಹೂವಿನಿಂದ ನಿರ್ಮಿಸಲಾದ ಕರ್ನಾಟಕ ಭೂಪಟ, ಎಡ ಬಲದಲ್ಲಿ ಆನೆಯ ಮಾದರಿ, ಅಲ್ಲದೆ ಹೂವಿನಿಂದ ಅರಳಿದ ಟೀಮ್ ಇಂಡಿಯಾ ವಿಶ್ವಕಪ್ ಮಾದರಿ, ಭಾರತದ ಮೊದಲ ಮಹಿಳಾ ಶಿಕ್ಷಕಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ಕ್ರಾಂತಿಯ ಬಗ್ಗೆ ಬೆಳಕು ಚೆಲ್ಲಿದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ, ಒಂದೇ ಮಾನವನ ದೇಹದಲ್ಲಿ ಅರ್ಧಭಾಗ ರೈತ- ಇನ್ನರ್ಧ ಭಾಗ ಗಡಿ ಕಾಯುವ ಸೈನಿಕನ ಮಾದರಿ, ಹುಲಿಯನ್ನೇರಿದ ಮಲೆ ಮಹದೇಶ್ವರಸ್ವಾಮಿಯ ಪ್ರತಿಮೆ, ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ, ಶ್ರೀ ಚಾಮುಂಡೇಶ್ವರಿ ದೇವಸ್ಥಾನವನ್ನು ವಿವಿಧ ಬಣ್ಣದ ಹೂವುಗಳಿಂದ ಅಲಂಕರಿಸಲಾಗಿದೆ.ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಯುವನಿಧಿ, ಗೃಹಜ್ಯೋತಿ, ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮೀ ಯೋಜನೆಗಳ ಪುಷ್ಪ ಕಲಾಕೃತಿಗಳನ್ನು ಮಾಡಲಾಗಿದೆ.ವಿವಿಧ ರೀತಿಯ ತಿಂಡಿ ತಿನಿಸುಗಳು, ಆಟಿಕೆಗಳ ವ್ಯವಸ್ಥೆ, ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಮಳಿಗೆಗಳನ್ನು ಸಹ ಪ್ರದರ್ಶನದಲ್ಲಿ ತೆರೆಯಲಾಗಿದೆ.ಬೆಳಗ್ಗೆಯಿಂದ ಸಂಜೆಯವರೆಗೆ ಸೂರ್ಯನ ಬೆಳಕಿನಲ್ಲಿ ಆಕರ್ಷಿಸುವ ಪುಷ್ಪಗಳು, ಸಂಜೆಯ ನಂತರ ಬೆಳಗುವ ವಿದ್ಯುತ್ ದೀಪಗಳ ಬೆಳಕಿನಲ್ಲಿ ಮತ್ತಷ್ಟು ಆಕರ್ಷಿಸುತ್ತಿದೆ. ಇದರಿಂದಾಗಿ ಸಂಜೆಯ ನಂತರ ಪ್ರದರ್ಶನ ವೀಕ್ಷಣೆಗೆ ಜನಜಾತ್ರೆಯೇ ನೆರೆದಿರುತ್ತದೆ.----ಬಾಕ್ಸ್...-- ಮೊಬೈಲ್ ಗಳಲ್ಲಿ ಸೆರೆ- ಬಾಡುತ್ತಿರುವ ಹೂಗಳು-- ದಸರಾ ಫಲಪುಷ್ಪ ಪ್ರದರ್ಶನವನ್ನು ನೋಡುವವರಿಗಿಂತ ತಮ್ಮ ಮೊಬೈಲ್ ಗಳಲ್ಲಿ ಹೂಗಳ ಸೌಂದರ್ಯ ಸೆರೆ ಹಿಡಿಯುವುದು, ಫೋಟೋ, ವಿಡಿಯೋ ಮಾಡುವವರೇ ಜಾಸ್ತಿಯಾಗಿದೆ. ಇದು ಅವರಿಗೆ ಖುಷಿ ನೀಡಿದರೂ ಉಳಿದವರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ನಂತರ ಆ ಕಿರಿಕಿರಿ ಅನುಭವಿಸಿದರೇ ತಮ್ಮ ಮೊಬೈಲ್ ಗಳಲ್ಲಿ ಫೋಟೋ, ವಿಡಿಯೋ ಮಾಡಿಕೊಳ್ಳಾ ಉಳಿದವರಿಗೆ ಕಿರಿಕಿರಿ ಮಾಡುತ್ತಿದ್ದು ಸಾಮಾನ್ಯವಾಗಿತ್ತು.ಇನ್ನೂ ಪುಷ್ಪಗಳಿಂದ ಹಲವು ಕಲಾಕೃತಿಗಳನ್ನು ನಿರ್ಮಿಸಲಾಗಿದೆ. ಆದರೆ, ಒಂದು ವಾರದಿಂದ ಇರುವ ಕಾರಣ ಬಹುತೇಕ ಕಲಾಕೃತಿಗಳಲ್ಲಿರುವ ಹೂವುಗಳು ಬಾಡಿರುವುದು ಕಂಡು ಬಂತು. ಇನ್ನೂ ಕೆಲವು ಕಲಾಕೃತಿಗಳಲ್ಲಿ ಬಾಡಿರುವ ಹೂಗಳನ್ನು ತೋಟಗಾರಿಕೆ ಸಿಬ್ಬಂದಿ ಬದಲಿಸುತ್ತಿದ್ದು ಸಹ ಕಂಡು ಬಂತು.

Share this article