ಕುಶಾಲನಗರ: ಶ್ರೀ ಗಂಧದ ಮರಗಳಿಗೆ ಬೆಂಕಿ ಹಾಕಿ ನಾಶ

KannadaprabhaNewsNetwork | Published : Mar 19, 2024 12:48 AM

ಸಾರಾಂಶ

ಹೆಬ್ಬಾಲೆಯಿಂದ ಬಾಣಾವರ ಕಡೆಗೆ ತೆರಳುವ ರಸ್ತೆಯಲ್ಲಿ ಸುಮಾರು ಮೂರು ಕಿಲೋ ಮೀಟರ್ ದೂರದಲ್ಲಿ ಯಥೇಚ್ಛವಾಗಿ ನೈಸರ್ಗಿಕವಾಗಿ ಬೆಳೆದಿರುವ ನೂರಾರು ಶ್ರೀಗಂಧ ಮರಗಳನ್ನು ಕಾಣಬಹುದು. ಆದರೆ ಈ ಅಪರೂಪದ ಶ್ರೀಗಂಧ ಮರಗಳನ್ನು ಸಂರಕ್ಷಣೆ ಮಾಡುವಲ್ಲಿ ಮಾತ್ರ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ.

ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿರುವ ಹೆಬ್ಬಾಲೆ ಗ್ರಾಮದ ಭೈರಪ್ಪನ ಗುಡಿ ವ್ಯಾಪ್ತಿಯಲ್ಲಿ ಖಾಸಗಿ ಜಮೀನಿನಲ್ಲಿ ಬೆಳೆದು ನಿಂತಿದ್ದ ಹಲವು ಶ್ರೀಗಂಧದ ಮರಗಳನ್ನು ಬೆಂಕಿ ಹಾಕಿ ನಾಶಗೊಳಿಸಿರುವ ಘಟನೆ ನಡೆದಿದೆ.ಸೋಮವಾರಪೇಟೆ ಅರಣ್ಯ ವಲಯ ನಿಡ್ತ ಮೀಸಲು ಅರಣ್ಯಕ್ಕೆ ಒತ್ತಿನಲ್ಲಿರುವ ಹೆಬ್ಬಾಲೆ ಬಾಣಾವರ ರಸ್ತೆ ಬದಿ ಬೇಲಿ ಹಾಕಿರುವ ಖಾಸಗಿ ಜಮೀನು ಒಂದರಲ್ಲಿ ಬೆಂಕಿ ಹಾಕಿದ್ದು, ಸುಮಾರು ಶ್ರೀಗಂಧದ ಮರಗಳು ಬೆಂಕಿಗೆ ಆಹುತಿಯಾಗಿವೆ. ದಾರಿ ಉದ್ದಕ್ಕೂ ಅರಣ್ಯದ ಅಂಚಿನ ಪ್ರದೇಶಕ್ಕೆ ಬೆಂಕಿ ಹಾಕಿದ್ದು, ಈ ವ್ಯಾಪ್ತಿಯಲ್ಲಿ ಕೂಡ ಹಲವು ಗಂಧದ ಮರಗಳು ಬೆಂಕಿಗೆ ಆಹುತಿಯಾಗಿವೆ.

ಹೆಬ್ಬಾಲೆಯಿಂದ ಬಾಣಾವರ ಕಡೆಗೆ ತೆರಳುವ ರಸ್ತೆಯಲ್ಲಿ ಸುಮಾರು ಮೂರು ಕಿಲೋ ಮೀಟರ್ ದೂರದಲ್ಲಿ ಯಥೇಚ್ಛವಾಗಿ ನೈಸರ್ಗಿಕವಾಗಿ ಬೆಳೆದಿರುವ ನೂರಾರು ಶ್ರೀಗಂಧ ಮರಗಳನ್ನು ಕಾಣಬಹುದು. ಆದರೆ ಈ ಅಪರೂಪದ ಶ್ರೀಗಂಧ ಮರಗಳನ್ನು ಸಂರಕ್ಷಣೆ ಮಾಡುವಲ್ಲಿ ಮಾತ್ರ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಬಹುತೇಕ ಕಳ್ಳರ ಪಾಲಾಗುತ್ತಿದ್ದು, ಇನ್ನುಳಿದ ಮರಗಳು ಬೆಂಕಿಗೆ ಆಹುತಿ ಆಗಿವೆ.ರಸ್ತೆ ಬದಿಯಲ್ಲಿ ಪೊದೆಯೊಳಗೆ ಬೆಳೆದು ನಿಂತಿದ್ದ ಈ ಶ್ರೀಗಂಧ ಮರಗಳ ಸುತ್ತಲೂ ಬೆಳೆದಿದ್ದ ಪೊದೆಗಳನ್ನು ತೆರೆವುಗೊಳಿಸಿ ಬೆಂಕಿ ಹಾಕಿರುವುದರಿಂದ ಈ ಶ್ರೀಗಂಧ ಮರಗಳಿಗೆ ಹಾನಿಯಾಗಿದೆ.

ಖಾಸಗಿ ಭೂಮಿಯಲ್ಲಿ ಬೆಳೆದು ನಿಂತ ಶ್ರೀಗಂಧ ಮರಗಳ ರಕ್ಷಣೆ ಮಾಡುವುದು ಅರಣ್ಯ ಇಲಾಖೆ ಜವಾಬ್ದಾರಿಯಾಗಿದ್ದು, ಈ ಗ್ಗೆ ಸೋಮವಾರಪೇಟೆ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಗೋಪಾಲ್ ಅವರನ್ನು ಸಂಪರ್ಕಿಸಿದಾಗ, ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಸ್ಥಳ ಪರಿಶೀಲನೆ ಮಾಡುವಂತೆ ಸೂಚನೆ ನೀಡುವುದಾಗಿ ಅವರು ತಿಳಿಸಿದ್ದಾರೆ.ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಭಾಸ್ಕರ್ ಅವರಿಗೆ ಮಾಹಿತಿ ತಿಳಿಸಿದ ಸಂದರ್ಭ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ತಪ್ಪಿತಸ್ಥ ಮೇಲೆ ಕ್ರಮ ಕೈಗೊಳ್ಳಲಾಗುವುದು. ಗಂಧಮರಗಳ ಸಂರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Share this article