ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ವಿಶ್ವಮಾನ್ಯಕವಿ ಕುವೆಂಪು ಅವರು ಸಾಮಾಜಿಕ ಆಲೋಚನೆಗಳನ್ನು ತಮ್ಮ ಸಾಹಿತ್ಯದಲ್ಲಿ ಅಳವಡಿಸಿರುವುದರಿಂದ ಅವರು ವಿಶ್ವಮಾನ್ಯ ಕವಿ ಎನಿಸಿಕೊಂಡಿದ್ದಾರೆ. ಅವರ ಸಾಹಿತ್ಯ ಸರ್ವಕಾಲಕೂ ಪ್ರಸ್ತುತ ಎಂದು ಪ್ರಾಂಶುಪಾಲ ಎನ್.ವೈ.ಬಡನ್ನವರ್ ಹೇಳಿದರು.ಸೋಮವಾರ ಭಂಡಾರಿ ಮತ್ತು ರಾಠಿ ಪದವಿ ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಕನ್ನಡ ಸಂಘದ ಆಶ್ರಯದಲ್ಲಿ ನಡೆದ ಕವಿಕಾವ್ಯ ವಿದ್ಯಾರ್ಥಿ ವಿಚಾರ ಸಂಕಿರಣ, ವಿಶ್ವಮಾನವ ದಿನಾಚರಣೆ ಹಾಗೂ ಅಕ್ಷರದ ಅವ್ವ ಸಾವಿತ್ರಿ ಬಾಯಿ ಫುಲೆ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿ, ಕುವೆಂಪು ಜಗದ ಮತ್ತು ಯುಗದ ಶ್ರೇಷ್ಠ ಕವಿ. ಅವರ ಆಲೋಚನಾ ಶಕ್ತಿ ಅದ್ಭುತವಾದದ್ದು. ಅವರ ಸಾಹಿತ್ಯ ಓದುವುದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ಬದಲಾವಣೆಯಾಗುತ್ತದೆ. ವಿಶ್ವಮಾನವ ಪ್ರಜ್ಞೆ ಮೂಡುತ್ತದೆ. ವಿದ್ಯಾರ್ಥಿಗಳು ಕುವೆಂಪು ಸಾಹಿತ್ಯವನ್ನು ಅಧ್ಯಯನ ಮಾಡುವುದರಿಂದ ಜಾಗೃತಪ್ರಜ್ಞೆ ಮೂಡುತ್ತದೆ. ಹೀಗಾಗಿ ಓದುವ ಮನಸ್ಸು ನಿಮ್ಮದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಡಾ.ಸಿ.ಎಂ.ಜೋಶಿ ಮಾತನಾಡಿ, ಯುದ್ಧ,ಸೇಡು, ರಕ್ತಪಾತ, ಬೇಧಭಾವ ಎನ್ನುವ ಕ್ರೂರಜಗತ್ತಿಗೆ ಮನುಷತ್ವದ ಪಾಠ ಹೇಳಿಕೊಟ್ಟ ಮಹಾನ್ ಮಾನವತಾವಾದಿ ಕುವೆಂಪು. ಅವರ ಸಾಹಿತ್ಯ ಕೃತಿಗಳಲ್ಲಿ ಮಲೆನಾಡಿನ ಸೊಗಡು, ಪರಿಸರದ ಪ್ರಜ್ಞೆ, ಪ್ರಗತಿಪರ ನಿಲುವು, ಸಮಾಜಮುಖಿ ಚಿಂತನೆ, ವೈಚಾರಿಕ ನಿಲುವು, ಆಧ್ಯಾತ್ಮಿಕ ಧೋರಣೆ ಇವುಗಳು ದಟ್ಟವಾಗಿ ಎದ್ದು ಕಾಣುತ್ತದೆ. ಆ ಕಾರಣದಿಂದಲೇ ವರಕವಿ ಬೇಂದ್ರೆ "ಯುಗದಕವಿ ಜಗದ ಕವಿ ಕುವೆಂಪು. " ಎಂದು ಬಣ್ಣಿಸಿದ್ದು ಅರ್ಥಗಭರ್ಿತವಾಗಿದೆ. ಜಾತಿಮೌಢ್ಯದಿಂದ ಮುಳುಗಿದ್ದ ಅಂದಿನ ಸಮಾಜಕ್ಕೆ ಹೊಸ ಎಚ್ಚರಿಕೆ ನೀಡಿದ್ದಾರೆ. ನವೋದಯ ಕವಿಗಳು ಸ್ವಾತಂತ್ರ್ಯ ಭಾರತದ ಕನಸು ಮತ್ತು ಮಾತೃ ಭಾಷೆಯ ಪ್ರೇಮ ಇವೆರಡನ್ನೂ ಅನುಭವಿಸಿ ಬದುಕಿನ ಅನುಭಾವಿಕ ನುಡಿಗಳನ್ನು ಸಾಹಿತ್ಯದಲ್ಲಿ ಚಿರಂತನವಾಗಿಸಿದ ಚೇತನವಾಗಿದ್ದಾರೆ. ಅದೇ "ಓ ನನ್ನ ಚೇತನಾ ಆಗ ನೀ ಅನಿಕೇತನ " ಎಂದಿರುವುದು ಯುವ ಚೈತನ್ಯದ ಸಂಕೇತ. ವಿದ್ಯಾರ್ಥಿಗಳು ಕುವೆಂಪು ಅವರ ಸಾಮಾಜಿಕ ಆದರ್ಶಗಳನ್ನು ಅಳವಡಿಸಿಕೊಂಡು ನಿರಂಕುಶ ಮತಿಗಳಾಗಬೇಕು. ನವೋದಯ ಕವಿಗಳಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಗೌರವಾದರಗಳಿದ್ದವು. ಆಧುನಿಕ ದಿನಗಳಲ್ಲಿ ಅಕ್ಷರ ಘಾತುಕ ಶಕ್ತಿ ಹೆಚ್ಚುತ್ತಿದೆ. ಮನುಷ್ಯ ಮನುಷತ್ವದ ವ್ಯಕ್ತಿತ್ವವನ್ನೇ ಕಳೆದುಕೊಳ್ಳುತ್ತಿದ್ದಾನೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಕುವೆಂಪು ಅವರ ಸಾಹಿತ್ಯ ಅಧ್ಯಯನ ಮಾಡಿ ವಿಶ್ವಮಾನವ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಇಂದಿನ ದಿನಮಾನಕ್ಕೆ ಕುವೆಂಪು ಅವರ ವಿಶ್ವ ಮಾನವರಾಗಬೇಕೆನ್ನುವ ಸಂದೇಶ ಅಗತ್ಯವಾಗಿದೆ ಎಂದರು.ಕ್ಯಾಪ್ಟನ್ ಅನಿಲ್ ಉಣಚಗಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಅವರ ಜೀವನ ಸಾಧನೆ ಮಹತ್ವದ್ದು. ಮೌಢ್ಯದ ವಿರುದ್ಧ ಅಕ್ಷರ ದಾಸೋಹ ಮಾಡಿ ಸಾಮಾನ್ಯ ಮಹಿಳೆಯರು ತಲೆ ಎತ್ತಿ ನಡೆಯುವಂತೆ ಮಾಡಿದ ಅವರು ಅಂದಿನ ದಿನಗಳಲ್ಲಿ ಅಕ್ಷರ ಕಲಿತು 18 ಶಾಲೆಗಳನ್ನು ತೆರದು, ಬ್ರಿಟಿಷ್ರಿಂದ ಭಾರತದ ಪ್ರಥಮ ಶಿಕ್ಷಕಿ ಎಂಬ ಬಿರುದು ಪಡೆದ ಮಹಾತಾಯಿ ಅಂಥ ತಾಯಿಯ ಆದರ್ಶ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಎಂದರು.
ಪ್ರಾಸ್ತಾವಿಕವಾಗಿ ಡಾ. ಸಣ್ಣವೀರಣ್ಣ ದೊಡ್ಡಮನಿ ಮಾತನಾಡಿದರು. ಡಾ. ಎಂ. ಎಸ್. ಪಾಟೀಲ್, ಡಾ. ಸುರೇಖಾ ಯಂಡಿಗೇರಿ, ಡಾ.ಮಂಜಣ್ಣ ವೇದಿಕೆ ಮೇಲಿದ್ದರು. ಹತ್ತು ಜನ ವಿದ್ಯಾರ್ಥಿಗಳು ಕುವೆಂಪು ಕಾವ್ಯವಾಚನ ಮಾಡಿದರು. ಐಶ್ವರ್ಯ ಸುತಾಳಿ ಪ್ರಾರ್ಥಿಸಿದರು. ಶಿವಕುಮಾರ ಮುಂಡಾಸದ ನಿರೂಪಿಸಿದರು. ಇದೆ ಸಂದರ್ಭದಲ್ಲಿ ಕ್ಯಾಪ್ಟನ್ ಆಗಿ ಆಯ್ಕೆಯಾದ ಅನಿಲ್ ಉಣಚಗಿಯವರನ್ನು, ನಿವೃತ್ತ ಪ್ರಾಚಾರ್ಯ ಡಾ. ಸಿ. ಎಂ. ಜೋಶಿ ಅವರನ್ನು ಕರ್ನಾಟಕ ಸಂಘದಿಂದ ಸನ್ಮಾನಿಸಲಾಯಿತು. ಶ್ರೀಮತಿ ಹಾರವರಗಿ, ಸಂಗಣ್ಣ ಚಿಕ್ಕಾಡಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.