ಗೋಪಾಲ್ ಯಡಗೆರೆ
ಶಿವಮೊಗ್ಗ : ಅನೇಕ ವರ್ಷಗಳ ಕಾಲ ಆರ್ಥಿಕವಾಗಿ ಸದೃಢವಾಗಿದ್ದ ಕುವೆಂಪು ವಿಶ್ವವಿದ್ಯಾಲಯ 2025-26ನೇ ಸಾಲಿನಲ್ಲಿ ಬರೋಬ್ಬರಿ ₹38 ಕೋಟಿ ಕೊರತೆ ಆಯವ್ಯಯವನ್ನು ಮಂಡಿಸಿದೆ. ಇದು ವಿಶ್ವವಿದ್ಯಾಲಯದ ಆರ್ಥಿಕ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.
2025-26ನೇ ಸಾಲಿಗೆ ಒಟ್ಟಾರೆ ₹171.10 ಕೋಟಿ ರು. ಗಾತ್ರದ ಬಜೆಟ್ ಮಂಡಿಸಲಾಗಿದೆ. ಬಜೆಟ್ ಪ್ರತಿಯಲ್ಲೇ ನೀಡುವ ಮಾಹಿತಿ ಪ್ರಕಾರ ವಿವಿಗೆ ಎಲ್ಲಾ ಮೂಲಗಳಿಂದ ಬರುವ ಆದಾಯ ಅಥವಾ ಸ್ವೀಕೃತಿ ₹133.84 ಕೋಟಿ ಮಾತ್ರ. ಆದರೆ, ವೇತನ ಮತ್ತು ಭತ್ಯೆಗಳು, ಪಿಂಚಣಿ, ನೂತನ ಪಿಂಚಣಿ ಯೋಜನೆ ವಂತಿಕೆ (ಪೇ ಆ್ಯಂಡ್ ಅಲೋವೆನ್ಸಸ್), ಶೈಕ್ಷಣಿಕ ವೆಚ್ಚ, ಆಡಳಿತಾತ್ಮಕ ವೆಚ್ಚ, ವಿದ್ಯಾರ್ಥಿ ಬೆಂಬಲ ಸೇವೆಗಳು, ಪರೀಕ್ಷಾ ವೆಚ್ಚ, ದೂರ ಶಿಕ್ಷಣ ನಿರ್ದೇಶನಾಲಯದ ವೆಚ್ಚ ಸೇರಿ ಒಟ್ಟು ವಾರ್ಷಿಕ ಖರ್ಚು ₹171.10 ಕೋಟಿ ಬೇಕಾಗುತ್ತವೆ. ಇದರಿಂದ ₹38 ಕೋಟಿಗೂ ಹೆಚ್ಚು ಹಣಕಾಸು ಕೊರತೆಯಾಗಲಿದೆ.
ವಿವಿಗೆ ಬರುತ್ತಿರುವ ಬಹುಪಾಲು ಆದಾಯ ನಿವೃತ್ತ ನೌಕರರ ಪಿಂಚಣಿಗೆ ಹೋಗುತ್ತಿದೆ. ಅತಿಥಿ ಉಪನ್ಯಾಸಕರು, ಗುತ್ತಿಗೆ ನೌಕರರ ವೇತನ, ಕ್ಯಾಂಪಸ್ ನಿರ್ವಹನೆ, ಇನ್ನಿತರ ಶೈಕ್ಷಣಿಕ ಚಟುವಟಿಕೆ, ಕಾರ್ಯಕ್ರಮಗಳಿಗೆ ಹಣವೇ ಉಳಿಯುತ್ತಿಲ್ಲ. ಅಭಿವೃದ್ಧಿ ಕಾರ್ಯಗಳಂತು ಕೆಲವು ವರ್ಷಗಳಿಂದ ಮರೀಚಿಕೆಯಾಗಿದೆ. ಕೊರತೆ ಹಣಕ್ಕಾಗಿ ಸರ್ಕಾರದ ಮುಂದೆ ಗೋಗರೆಯುವಂತಾಗಿದೆ. ವಿಪರ್ಯಾಸವೆಂದರೆ ಅಭಿವೃದ್ಧಿ ಕಾಮಗಾರಿಗಳಿಗೆ ಕೇವಲ 1 ಕೋಟಿ ರು. ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ.
ಕೊರತೆ ಅನುದಾನ ಸರಿದೂಗಿಸಿಕೊಳ್ಳಲು ರಾಜ್ಯ ಸರ್ಕಾರದಿಂದ ಹೆಚ್ಚುವರಿ ಅನುದಾನ ಬೇಡಿಕೆ, ಆಡಳಿತಾತ್ಮಕ ವೆಚ್ಚಗಳ ಕಡಿತ, ಕಾರ್ಯಭಾರಕ್ಕೆ ಅನುಗುಣವಾಗಿ ಹೆಚ್ಚುವರಿ ಹುದ್ದೆಗಳ ಕಡಿತ ಮಾಡುವುದು, ಆನ್‌ಲೈನ್ ಶಿಕ್ಷಣಕ್ಕೆ ಒತ್ತು ಸೇರಿದಂತೆ ಹಲವು ಪರಿಹಾರ ಮಾರ್ಗಗಳನ್ನು ಹುಡುಕುವ ಕೆಲಸದಲ್ಲಿ ವಿವಿ ಅಧಿಕಾರಿಗಳು ಆಲೋಚಿಸಿದ್ದಾರೆ. ಜೊತೆಗೆ 2025-26ನೇ ಸಾಲಿನಲ್ಲಿ ಯಾವುದೇ ಹೊಸ ಕಾಮಗಾರಿ ಕೈಗೊಳ್ಳದೆ, ಹಾಲಿ ನಡೆಯುತ್ತಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಮಾತ್ರ ರಾಜ್ಯ ಸರ್ಕಾರಕ್ಕೆ ಹೆಚ್ಚುವರಿ ಅನುದಾನ ಕೋರಲು ತೀರ್ಮಾನಿಸಲಾಗಿದೆ.
ದೂರ ಶಿಕ್ಷಣ ಸ್ಥಗಿತದಿಂದಲೇ ಆರ್ಥಿಕ ಸಂಕಷ್ಟ : ವಿವಿ ಅಧಿಕಾರಿಗಳು ಹೇಳುವ ಪ್ರಕಾರ, ಕುವೆಂಪು ವಿವಿಗೆ ದೂರ ಶಿಕ್ಷಣ ಎಂಬುದು ಕಾಮಧೇನು ಆಗಿತ್ತು. ಹಣ ಒದಗಿಸುವ ಎಟಿಎಂನಂತೆ ಇತ್ತು. ಆದರೆ ಉತ್ತರ ಕರ್ನಾಟಕದ ಅನೇಕ ಕಡೆ ಈ ದೂರ ಶಿಕ್ಷಣ ಫ್ರಾಂಚೈಸಿ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ನಡೆದ ಹಗರಣಗಳು ಕುವೆಂಪು ವಿವಿಗೆ ಕಪ್ಪು ಚುಕ್ಕಿಯಾಯಿತು. ಪರೀಕ್ಷೆ ಎಂಬುದು ಲೇವಡಿಯ ವಸ್ತುವಾಯಿತು. ಇದೇ ವೇಳೆ ಯುಜಿಸಿ ಕುವೆಂಪು ವಿವಿ ಸೇರಿ ಹಲವು ವಿವಿಗಳಲ್ಲಿ ಇದ್ದ ದೂರ ಶಿಕ್ಷಣ ವ್ಯವಸ್ಥೆ ವಾಪಸ್ ಪಡೆಯಿತು. ಹೀಗಾಗಿ ವಿವಿಗೆ ಆದಾಯದ ದೊಡ್ಡ ಕೊರತೆ ಎದುರಾಯಿತು.
ಇನ್ನು ವಿವಿಯ ಸಂಯೋಜಿತ ಕಾಲೇಜುಗಳ ಸಂಖ್ಯೆ ಬದಲಾವಣೆ ಆಗಿಲ್ಲ. 1987ರಲ್ಲಿ ಆರಂಭವಾದ ಕುವೆಂಪು ವಿವಿಯಲ್ಲಿ ಆರಂಭದಲ್ಲಿ ಇದ್ದಂತೆ 97 ಕಾಲೇಜುಗಳು ಈಗಲೂ ಇದೆ. ಇವುಗಳಲ್ಲಿ ಪ್ರತೀ ವರ್ಷ 50 ಸಾವಿರಕ್ಕೂ ಹೆಚ್ಚು ಪದವಿ ವಿದ್ಯಾರ್ಥಿಗಳು, 4000- 5000 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸಂಯೋಜನಾ ಶುಲ್ಕ, ದಾಖಲಾತಿ ಅನುಮೋದನೆ ಶುಲ್ಕ ಸೇರಿ ಇನ್ನಿತರ ಮೂಲಗಳಿಂದ ಬರುವ ಆದಾಯ ಹಾಗೇ ಇದ್ದರು, ದೂರ ಶಿಕ್ಷಣದಿಂದ ಬರುತ್ತಿದ್ದ ದೊಡ್ಡ ಆದಾಯ ಕಡಿತಗೊಂಡಿದ್ದು ಜೊತೆಗೆ ಸರ್ಕಾರದಿಂದ ಬರುತ್ತಿದ್ದ ಅನುದಾನ ಕಡಿಮೆಯಾಗಿದ್ದು ವಿವಿಯ ಆರ್ಥಿಕ ಪರಿಸ್ಥಿತಿ ಹದಗೆಡಲು ಕಾರಣ ಎನ್ನಲಾಗಿದೆ.
88 ಕಾಯಂ ಪ್ರಾಧ್ಯಾಪಕ ಹುದ್ದೆ ಖಾಲಿ
ಕುವೆಂಪು ವಿವಿಯ ಪದವಿ ಹಾಗೂ ಸ್ನಾತಕೋತ್ತರ ಪದವಿಯ 37 ವಿಭಾಗಗಳಿಗೆ 238 ಕಾಯಂ ಬೋಧಕ ಹುದ್ದೆಗಳು ಮಂಜೂರಾಗಿವೆ. ಈ ಪೈಕಿ 150 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, 88 ಪ್ರಾಧ್ಯಾಪಕ ಹುದ್ದೆಗಳು ಖಾಲಿ ಇವೆ. ಬೋಧಕೇತರ ವಿಭಾಗದಲ್ಲಿ 604 ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ 238 ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. 366 ನೌಕರರ ಹುದ್ದೆಗಳು ಖಾಲಿ ಉಳಿದಿವೆ.
ಇನ್ನು, ಪದವಿ ವಿಭಾಗದಲ್ಲಿ 158 ಅತಿಥಿ ಉಪನ್ಯಾಸಕರು, 207 ಅತಿಥಿ ಉಪನ್ಯಾಸಕರು ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು ವಾರ್ಷಿಕ ₹1.16 ಕೋಟಿ ವೇತನ ನೀಡಬೇಕಾಗುತ್ತದೆ. ಇದನ್ನು ವಿವಿಯ ಆಂತರಿಕ ಆದಾಯದಲ್ಲೇ ಭರಿಸಬೇಕು. ವಿವಿ ಆರ್ಥಿಕ ಸಂಕಷ್ಟದ ಕಾರಣ ಪ್ರತಿ ತಿಂಗಳು ಅವರಿಗೆ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಬೇರೆ ಮೂಲಗಳಿಂದ ಬರುವ ಆದಾಯವನ್ನು ಹೊಂದಿಸಿಕೊಂಡು ಎರಡರಿಂದ 3 ತಿಂಗಳಿಗೊಮ್ಮೆ ವೇತನ ನೀಡಲಾಗುತ್ತಿದೆ. ಕೆಲವೊಮ್ಮೆ ಇದು ನಾಲ್ಕೈದು ತಿಂಗಳಾದ ಉದಾಹರಣೆಯೂ ಇದೆ ಎನ್ನುತ್ತಾರೆ ಅತಿಥಿ ಉಪನ್ಯಾಸಕರು.
ಕುವೆಂಪು ವಿವಿಯ ಮೇಲಿದೆ ಹಲವು ಆರೋಪ
- ಕುಲಸಚಿವರ ನೇಮಕಾತಿಯಲ್ಲಿ ಗೊಂದಲ, ಪರೀಕ್ಷೆ ಮಾಡದೆ ಅಂಕಪಟ್ಟಿ ನೀಡಿದ ವಿವಾದ ವಿವಿಗೆ ಸಾಕಷ್ಟು ಮುಜುಗರ ತಂದಿತು.2017ರಲ್ಲಿ ನಕಲಿ ಅಂಕಪಟ್ಟಿ ಮತ್ತು ಉತ್ತರ ಪರೀಕ್ಷೆ ಬದಲಿಸುವ ಹಗರಣ ಬೆಳಕಿಗೆ ಬಂದು ರಾಜ್ಯಮಟ್ಟದಲ್ಲಿ ವಿವಿ ಮರ್ಯಾದೆ ಹರಾಜಾಗಿ ಹೋಗಿತ್ತು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ವಿವಿ ಪ್ರಕರಣ ದಾಖಲಿಸಿದ್ದು, ನಾಲ್ವರನ್ನು ಅಮಾನತು ಮಾಡಲಾಗಿತ್ತು. ಕೆಲವರಿಗೆ ಹಿಂಬಡ್ತಿ ನೀಡಲಾಯಿತು. ಅಂತಿಮವಾಗಿ ಯಾರಿಗೂ ಇಲ್ಲಿ ದೊಡ್ಡ ಶಿಕ್ಷೆಯೂ ಆಗಲಿಲ್ಲ. ಪ್ರಕರಣ ತಾರ್ಕಿಕ ಅಂತ್ಯ ಕಾಣಲೇ ಇಲ್ಲ.
- ಸ್ಮಾರ್ಟ್ ಕ್ಲಾಸ್ ರೂಂ ಕಾಮಗಾರಿಗಳಲ್ಲಿ ಬಹುಕೋಟಿ ಹಗರಣದ ಆರೋಪ ಎದುರಾಗಿದ್ದು, ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸ್ನಾತಕ ಮತ್ತು ಪದವಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ರೂಂ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಸರ್ಕಾರ ಬಿಡುಗಡೆ ಮಾಡಿದ್ದ ₹4.25 ಕೋಟಿ ಹಗರಣದ ಆರೋಪ. ಈ ಸಂಬಂಧ ತನಿಖಾ ಸಮಿತಿ ರಚನೆಯಾಗಿತ್ತು. ಈ ಸಮಿತಿಯು ಹಗರಣ ನಡೆದಿದೆ ಎಂದು ವರದಿ ನೀಡಿತ್ತು. ಆದರೆ ಈವರೆಗೆ ಕ್ರಮ ಜರುಗಿಸಲಾಗಿಲ್ಲ.
- ತಿಂಗಳ ಹಿಂದೆ ವಿವಿಯಲ್ಲಿ ಅಂತಾರಾಷ್ಟ್ರೀಯ ಸೆಮಿನಾರ್ ನಡೆಯಿತು. ಇದಕ್ಕೆ ಖಾಸಗಿ ಸಹಭಾಗಿತ್ವ ಎಂದು ಪ್ರಕಟಿಸಲಾಗಿತ್ತು. ಆದರೆ ಇದರ ಬಹುತೇಕ ವೆಚ್ಚವನ್ನು ವಿವಿಯೇ ಭರಿಸಿತ್ತು. ಆದರೆ ಇಡೀ ಕಾರ್ಯಕ್ರಮದಲ್ಲಿ ಖಾಸಗಿಯವರ ಜಾಹೀರಾತು ಸೇರಿ ಅವರದೇ ಅಬ್ಬರ ಎದ್ದು ಕಾಣುತ್ತಿತ್ತು. ಇದು ವಿವಿ ಅಧ್ಯಾಪಕರ ವಲಯದಲ್ಲೇ ತೀವ್ರ ಅಸಮಾಧಾನಕ್ಕೆಕಾರಣವಾಗಿತ್ತು.
ಇತರೆ ಸಾಂಪ್ರದಾಯಿಕ ವಿವಿಗಳಂತೆ ನಮ್ಮ ವಿವಿಯೂ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಬರುವ ಆದಾಯಕ್ಕಿಂತ ಖರ್ಚುಗಳು ಹೆಚ್ಚಿರುವುದರಿಂದ ನಿಭಾಯಿಸುವುದು ಸವಾಲಾಗಿದೆ. ಆದಾಯ ಕೊರತೆ ನಡುವೆಯೂ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಬಜೆಟ್‌ನಲ್ಲಿ ಬ್ಯಾಲೆನ್ಸ್ ಮಾಡುವ ಪ್ರಯತ್ನ ನಡೆದಿದೆ. ಕೊರತೆ ಹಣ ಸರಿದೂಗಿಸಲು ಸರ್ಕಾರ ನೆರವಾಗಬೇಕು.
- ಪ್ರೊ.ಶರತ್ ಅನಂತಮೂರ್ತಿ, ಕುವೆಂಪು ವಿವಿ ಕುಲಪತಿ