ಕನ್ನಡಪ್ರಭ ವಾರ್ತೆ ಸೊರಬ
ಕುವೆಂಪು ಅವರು ವೈಚಾರಿಕತೆಯ ಜತೆಗೆ ಸರಳತೆಗೆ ಆಧ್ಯತೆ ನೀಡುವ ಮೂಲಕ ಮಾನವಕುಲದ ಏಳಿಗೆ ಬಯಸಿದ್ದರು ಎಂದು ಕುವೆಂಪು ಅವರ ಪುತ್ರಿ ತಾರಿಣಿ ಚಿದಾನಂದ್ ಹೇಳಿದರು.ಪಟ್ಟಣದ ನಿಜಗುಣ ರೆಸಿಡೆನ್ಸಿ ಸಭಾಂಗಣದಲ್ಲಿ ವಿಶ್ವಮಾನವ ಶಕ್ತಿ ಸತ್ಯ ಶೋಧಕ ಸಮಾಜ ಟ್ರಸ್ಟ್ ಸೊರಬ ವತಿಯಿಂದ ನಡೆದ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ ಹಾಗೂ ೪ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶೋಷಣೆ, ಬಡತನ, ಅನಕ್ಷರತೆ ಮುಕ್ತ ಸಮಾಜ ನಿರ್ಮಾಣದ ದೃಷ್ಟಿಕೋನ ಕುವೆಂಪು ಅವರದ್ದಾಗಿತ್ತು. ದುಂದುವೆಚ್ಚಗಳು ಬಡತನಕ್ಕೆ ತಳ್ಳುತ್ತವೆ ಎಂಬುದನ್ನರಿಯುವ ಜತೆಗೆ ವೈಚಾರಿಕ ಪ್ರಜ್ಞೆ ಇಟ್ಟುಕೊಂಡು ಮಂತ್ರ ಮಾಂಗಲ್ಯಕ್ಕೆ ಅಡಿಪಾಯ ಹಾಕಿದರು. ಅವರ ತತ್ವ ಸಿದ್ದಾಂತಗಳನ್ನು ಆರ್.ಬಿ.ಚಂದ್ರಪ್ಪ ಅವರು ಅಳವಡಿಸಿಕೊಳ್ಳುವ ಜತೆಗೆ ಬಡವರ ಸರಳ, ಸಾಮೂಹಿಕ ವಿವಾಹಕ್ಕೆ ಒತ್ತು ನೀಡಿರುವುದು ಶ್ಲಾಘನೀಯ ಎಂದರು.ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಚಿದಾನಂದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಟ್ರಸ್ಟ್ ಅಧ್ಯಕ್ಷ ಹಾಗೂ ನಿವೃತ್ತ ಶಿಕ್ಷಕ ಆರ್.ಬಿ. ಚಂದ್ರಪ್ಪ ಮಾತನಾಡಿ, ಮಂತ್ರ ಮಾಂಗಲ್ಯವಾಗುವ ಮೂಲಕ ನಾನು ಕುವೆಂಪು ಅವರ ಚಿಂತನೆಗಳನ್ನು ಅಳವಡಿಸಿಕೊಂಡಿದ್ದೇನೆ. ಮದ್ಯಮುಕ್ತ ಸಮಾಜ ಗುರಿ ಹೊಂದಿರುವ ಜತೆಗೆ ಬಡವರ ಮಕ್ಕಳ ಶಿಕ್ಷಣಕ್ಕೆ ಸಹಕಾರ ನೀಡುತ್ತಿದ್ದೇನೆ. ಎಸ್.ಬಂಗಾರಪ್ಪ ಅವರು ಸಾಮೂಹಿಕ ವಿವಾಹಗಳಿಗೆ ಆದ್ಯತೆ ನೀಡಿದ್ದರು. ಅದೇ ದಾರಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಟ್ರಸ್ಟ್ ಅಡಿಯಲ್ಲಿ ಸಾಮೂಹಿಕ ವಿವಾಹ ನಡೆಸಲಾಗುತ್ತಿದೆ ಎಂದರು.ಟ್ರಸ್ಟ್ನಿಂದ ಕೊಡಮಾಡುವ ೧ ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡ ವಿಶ್ವಮಾನವ ಕಲ್ಯಾಣ ಜ್ಯೋತಿ ಪ್ರಶಸ್ತಿಯನ್ನು ಕುವೆಂಪು ಅವರಿಗೆ ಮರಣೋತ್ತರವಾಗಿ ನೀಡಲಾಯಿತು. ಪ್ರಶಸ್ತಿಯನ್ನು ಕುವೆಂಪು ಅವರ ಕಿರಿಯ ಮಗಳು ತಾರಿಣಿ ಚಿದಾನಂದ್ ಸ್ವೀಕರಿಸಿದರು.
ಸಮಾಜಮುಖಿ ಕೆಲಸಗಳನ್ನು ಗುರುತಿಸಿ ಶಿವಮೊಗ್ಗ ಕಸ್ತೂರಬಾ ಕಾಲೇಜಿನ ಉಪನ್ಯಾಸಕ ಎಸ್.ಎಚ್. ರವಿಕುಮಾರ್ ಮಾಳೇಕೊಪ್ಪ ಅವರಿಗೆ ಯುವ ರತ್ನ ಪ್ರಶಸ್ತಿ, ಕಪ್ಪಗಳಲೆ ಅಂಗನವಾಡಿ ಶಿಕ್ಷಕಿ ಆರ್.ಕೆ.ರೇಣುಕ ಅವರಿಗೆ ಮಹಿಳಾ ರತ್ನ ಪ್ರಶಸ್ತಿ ನೀಡಲಾಯಿತು.ಕೊಡಕಣಿ ಗ್ರಾಮದ ಬಂಗಾರಮ್ಮ ಸಣ್ಣಬಂಗಾರಪ್ಪ ರಾಯನ ಅಧ್ಯಕ್ಷತೆ ವಹಿಸಿದ್ದರು. ಕನ್ನಡಪರ ಹೋರಾಟಗಾರ ಮಂಚೇಗೌಡ ಟಿಜಿ ಕೊಪ್ಪ, ನಿವೃತ್ತ ಶಿಕ್ಷಕ ಮೋಹನ್‌ದಾಸ್, ಜಿಲ್ಲಾ ಪರಿಷತ್ ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ, ಶಿವಪ್ಪ ನಡಹಳ್ಳಿ, ತಳಬೈಲ್ ಹುಚ್ಚಪ್ಪ, ಕೆರಿಯಪ್ಪ ರಾಯನ, ಮಹ್ಮದ್ ರಫಿಕ್ ಮದ್ನಿ, ಎ.ಜಿ.ನಾಯ್ಕ್ ಭರಣಿ, ಕೆರಿಯಪ್ಪ ಒಡೆಯರ್, ಮುದ್ದಪ್ಪ, ಶಿವರಾಯಪ್ಪ, ಬಸವಣ್ಯಪ್ಪ ಇತರರಿದ್ದರು.
೧೧ ಜೋಡಿಗಳ ವಿವಾಹ :ಸಾಮೂಹಿಕ ವಿವಾಹದಲ್ಲಿ ಗಣೇಶ-ದಿವ್ಯಾ, ಸುನೀಲ್-ಸೀತಾರ, ಸೀತಾರಾಮ-ಯಶೋಧ, ಪಕ್ಕೀರೇಶ-ಸುಧಾ, ಸಂಜೀವ-ಯಶೋಧ, ರವಿ-ಇಂಧು, ವಿಜಯ್-ಸುಜಾತ, ಶ್ರಿಧರ್-ದೀಪಿಕ, ಸಂತೋಷ್-ದಿವ್ಯ, ಮಂಜುನಾಥ್-ಸಾವಿತ್ರಿ, ಸಂತೋಷ್-ಐಶ್ವರ್ಯ, ಒಟ್ಟು ೧೧ ಜೋಡಿಗಳ ವಿವಾಹ ನೆರವೇರಿತು. ಅದರಲ್ಲಿ ೨ ಜೋಡಿಗಳು ಅಂಜರ್ಜಾತಿ ವಿವಾಹವಾದವು. ಪ್ರತಿ ಜೋಡಿಗೆ ಒಟ್ಟು ೪೫ ಸಾವಿರ ಮೌಲ್ಯದಲ್ಲಿ ಉಚಿತವಾಗಿ ಬಟ್ಟೆ, ತಾಳಿ, ಅಲ್ಮೇರ, ಬಾಳು ಬಳುವಳಿ ನೀಡಲಾಯಿತು.