ಬಸವರಾಜ ಹಿರೇಮಠ
ಕನ್ನಡಪ್ರಭ ವಾರ್ತೆ ಧಾರವಾಡಮುಂಗಾರು ಹಂಗಾಮು ಸಂಪೂರ್ಣ ಕಳೆದುಕೊಂಡು ಬರಗಾಲದ ಬವಣೆಯಲ್ಲಿರುವ ಜಿಲ್ಲೆಯ ರೈತರು, ಇದೀಗ ಹಿಂಗಾರು ಹಂಗಾಮಿನ ಮೇಲೆ ಇಟ್ಟಿರುವ ಭರವಸೆ ಸಹ ಹುಸಿಯಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಅದರಲ್ಲೂ ಚಳಿಯನ್ನೇ ನಂಬಿ ಬರುವ ಕಡಲೆ ಹಾಗೂ ಮಾವು ಬೆಳೆಗಳಿಗೆ ತೀವ್ರ ಪ್ರಮಾಣದಲ್ಲಿ ಚಳಿ ಕೊರತೆ ಎದುರಾಗಿದೆ.
ಬರೀ ಚಳಿಯ ಆಧಾರದ ಮೇಲೆ ಹಿಂಗಾರು ಬೆಳೆಗಳು ಬೆಳೆಯುತ್ತವೆ ಎಂದು ನಂಬಿ ಬಿತ್ತನೆ ಮಾಡಿದ ರೈತನಿಗೆ ಇದೀಗ ಚಳಿಗಾಲವು ಕೈ ಕೊಡಲಿದೆಯೇ ಎನ್ನುವ ಆತಂಕ ಶುರುವಾಗಿದೆ. ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ರೈತರು ಹಿಂಗಾರು ಬೆಳೆಗಳನ್ನು ತುಸು ಬೇಗನೆ ಬಿತ್ತಿದರು. ಜೊತೆಗೆ ಬಿತ್ತನೆ ಸಮಯದಲ್ಲೂ ಉಂಟಾದ ಮಳೆ ಕೊರತೆಯನ್ನು ಕಷ್ಟಪಟ್ಟು ಕೊಳವೆ ಬಾವಿ ಮತ್ತು ಹಳ್ಳಗಳಿಂದ ನೀಗಿಸಿದರು. ಇದೀಗ ನವೆಂಬರ್ ಅಂತ್ಯ ಬಂದರೂ ಒಂಚೂರು ಚಳಿಯ ಸದ್ದಿಲ್ಲ. ಹೀಗಾಗಿ ಚಳಿಯಿಂದಲೇ ಬೆಳೆಯಬೇಕಾದ ಕಡಲೆ ಸೇರಿದಂತೆ ಹಿಂಗಾರು ಬೆಳೆಗಳು ಕಸುವಿನಲ್ಲಿ ಬೆಳೆಯುತ್ತಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.ಮುಂಗಾರು ಹಂಗಾಮಿನ ಬೆಳೆಗಳಿಗೆ ಬಿತ್ತನೆಯಿಂದ ಬೆಳೆ ಕೈಗೆ ಸಿಗುವ ವರೆಗೂ ಮಳೆಯ ಅಗತ್ಯವಿದೆ. ಆದರೆ, ಹಿಂಗಾರು ಬೆಳೆಗಳಿಗೆ ಬಿತ್ತನೆ ಸಮಯದಲ್ಲಿ ಮಾತ್ರ ಮಳೆ ಬಂದರೆ ಸಾಕು. ಬೆಳೆ ಬೆಳೆದು, ರೈತನ ಕೈಗೆ ಸಿಗುವ ವರೆಗೂ ಚಳಿ ಅಗತ್ಯವಾಗಿ ಬೇಕು. ಆದರೆ, ಪ್ರಸ್ತುತ ಬೆಳಿಗ್ಗೆ ಮಾತ್ರ ತುಸು ಥಂಡಿ ವಾತಾವರಣ ಇದ್ದು ಸಂಜೆ ಹಾಗೂ ರಾತ್ರಿ ಚಳಿಯ ಕೊರತೆ ಎದುರಾಗುತ್ತಿದೆ. ಇದರಿಂದ ಬಿತ್ತನೆ ಮಾಡಿರುವ ಹಿಂಗಾರು ಬೆಳೆಗಳಿಗೆ ತೇವಾಂಶ ಕಡಿಮೆಯಾಗಿ ಉತ್ಪಾದನೆಯಲ್ಲಿ ತೀವ್ರ ಕೊರತೆ ಎದುರಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
114155 ಲಕ್ಷ ಹೆಕ್ಟೇರ್ ಬಿತ್ತನೆ:ಕೃಷಿ ಇಲಾಖೆ ಅಂಕಿ ಅಂಶಗಳ ಪ್ರಕಾರ, ಹಿಂಗಾರಿಗೆ 2.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರು ಬಿತ್ತನೆಗೆ ಗುರಿ ಹೊಂದಲಾಗಿತ್ತು. ಬಿತ್ತನೆ ಸಮಯದಲ್ಲೂ ಆದ ಮಳೆ ಕೊರತೆಯಿಂದ 1.52 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ (ಶೇ.75) ಮಾತ್ರ ಬಿತ್ತನೆಯಾಗಿದೆ. ಧಾರವಾಡ ಭಾಗದಲ್ಲಿ ಹಿಂಗಾರಿಗೆ ಸಾಮಾನ್ಯವಾಗಿ ಕಡಲೆ ಬೆಳೆಯ ಪ್ರಮುಖವಾದುದು. ಹೀಗಾಗಿ 101311 ಗುರಿ ಮೀರಿ 114155 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. 16088 ಹೆಕ್ಟೇರ್ ಗೋದಿ ಬೆಳೆಯ ಗುರಿ ಪೈಕಿ 9254 ಹೆಕ್ಟೇರ್ ಹಾಗೂ ಉಳಿದಂತೆ ಜೋಳ, ಹುರುಳಿ ಹಾಗೂ ಇತರೆ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಬಿತ್ತನೆಯ ಶೇ. 80ರಷ್ಟು ಕಡಲೆ ಬೆಳೆ ಇದ್ದು ಈ ಬೆಳೆಗೆ ಕಡ್ಡಾಯವಾಗಿ ಚಳಿ ಬೇಕೆ ಬೇಕು. ಇದೀಗ ಚಳಿಯೇ ಬಿಡದ ಕಾರಣ ಕಡಲೆ ಒಣಗಿ ಹೋಗುತ್ತಿದೆ. ಜೊತೆಗೆ ಬೆಂಕಿ ರೋಗಕ್ಕೂ ತುತ್ತಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಮುಂಗಾರು ಬೆಳೆ ಇಲ್ಲದ ಕಾರಣ ಹೊಲ ಖಾಲಿ ಬಿಡದೇ ಬೇಗನೇ ಹಿಂಗಾರು ಬಿತ್ತನೆ ಮಾಡಿದೆವು. ಈಗ ಚಳಿಯ ಕೊರತೆ ಎದುರಾಗಿದೆ. ರೋಗಗಳು ಬರುವ ಸಾಧ್ಯತೆ ಇದೆ. ಏನು ಮಾಡಬೇಕು ತಿಳಿಯುತ್ತಿಲ್ಲ ಎಂದು ಯಾದವಾಡ ಗ್ರಾಮದ ಕಡಲೆ ಬೆಳೆಗಾರ ವಿಠ್ಠಲ ದಿಂಡಲಕೊಪ್ಪ ಅಳಲು ತೋಡಿಕೊಂಡರು.ಕಡಲೆ ಬೆಳೆಗೆ ಬಿತ್ತನೆ ಸಮಯದಲ್ಲಿ ಮಾತ್ರ ಮಳೆ ಸಾಕು. ನಂತರದಲ್ಲಿ ಚಳಿಗಾಲದ ವಾತಾವರಣದ ಆಧಾರದ ಮೇಲೆಯೇ ಅದು ಬೆಳೆಯುತ್ತದೆ. ಚಳಿ ಕೊರತೆ ಎದ್ದು ಕಂಡರೂ ಬರುವ ದಿನಗಳಲ್ಲಿ ಚಳಿ ಬಿಡುವ ಸಾಧ್ಯತೆ ಇದ್ದು ಕಾದು ನೋಡಬೇಕಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣಕುಮಾರ ಹೇಳಿದರು.
ಮಾವಿಗೂ ಚಳಿ ಬೇಕುಧಾರವಾಡ ಜಿಲ್ಲೆಯಲ್ಲಿ 15 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಇದೆ. ಏಪ್ರಿಲ್ ಮೇ ತಿಂಗಳಲ್ಲಿ ಬರುವ ಮಾವು ಬೆಳೆಗೆ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಬಿಡುವ ಚಳಿ ತುಂಬಾ ಅಗತ್ಯ. ಈ ಚಳಿ ಆಧರಿಸಿಯೇ ಮಾವು ಹೂ ಬಿಡಲಿದೆ. ಉತ್ತಮ ರೀತಿಯಲ್ಲಿ ಚಳಿ ಬಿಡದೇ ಇದ್ದಲ್ಲಿ ಮಾವು ಹೂ ಬಿಡೋದಿಲ್ಲ. ಹೂ ಇಲ್ಲದೇ ಕಾಯಿಯ ಪ್ರಶ್ನೆಯೇ ಇಲ್ಲ. ಹೀಗಾಗಿ ಮಾವು ಬೆಳೆಗಾರರು ಸಹ ಚಳಿಗಾಗಿಯೇ ಹಾತೊರೆಯುತ್ತಿದ್ದಾರೆ.