ಬರಪೀಡಿತ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ

KannadaprabhaNewsNetwork |  
Published : Mar 16, 2024, 01:50 AM ISTUpdated : Mar 16, 2024, 03:23 PM IST
೧೩ಕೆಎಲ್‌ಆರ್-೭ಬಿಸಿಲಿನ ತಾಪಕ್ಕೆ ಹಸಿರು ಹುಲ್ಲು ಒಣಗಿದ್ದು ಹಸಿವು ಇಂಗಿಸಿಕೊಳ್ಳಲು ಜಾನುವಾರುಗಳು ಪ್ಲಾಸ್ಟಿಕ್ ಪೇಪರ್‌ಗಳಂತ ವಸ್ತುಗಳನ್ನು ತಿನ್ನುತ್ತಿರುವ ಹಸು. | Kannada Prabha

ಸಾರಾಂಶ

ಕೋಲಾರಮ್ಮನ ಕೆರೆ, ಅಮ್ಮೇರಹಳ್ಳಿ ಕೆರೆ, ಕೋಡಿಕಣ್ಣೂರು ಕೆರೆಗಳಲ್ಲಿ ನೀರು ಸಂಪೂರ್ಣವಾಗಿ ಖಾಲಿಯಾಗಿ ಬಿಸಿಲಿನ ಝಳಕ್ಕೆ ಬಣಗುಟ್ಟುತ್ತಿದೆ, ಕೊಳವೆ ಬಾವಿಗಳಲ್ಲಿ ಅಂತರ್ಜಲಮಟ್ಟ ಮತ್ತೆ ಪಾತಾಳದತ್ತ ಕುಸಿಯುತ್ತಿದೆ

ಕನ್ನಡಪ್ರಭ ವಾರ್ತೆ ಕೋಲಾರ

ಬರಪೀಡಿತ ಕೋಲಾರ ಜಿಲ್ಲೆಯಲ್ಲಿ ಕುಡಿಯುವ ನೀರು, ಜಾನುವಾರುಗಳ ಮೇವಿಗೆ ಪರದಾಟ ಪ್ರಾರಂಭವಾಗಿದೆ. ದಿನೇ ದಿನೇ ಬಿಸಿಲಿನ ತಾಪ ಏರಿಕೆಯಾಗುತ್ತಿದ್ದು ನಾಗರಿಕರನ್ನು ಹೈರಾಣಾಗಿಸಿದೆ.

ಇಷ್ಟು ದಿನಗಳಿಂದ ಕೆ.ಸಿ. ವ್ಯಾಲಿ ನೀರು, ಕೆರೆಗಳನ್ನು ತುಂಬಿಸಿತ್ತು, ಆದರೆ ಈಗ ಕೆಲವು ಕೆರೆಗಳಲ್ಲಿ ಮಾತ್ರ ನೀರಿದ್ದು, ಉಳಿದಂತೆ ಬಹುತೇಕ ಕೆರೆಗಳಲ್ಲಿ ನೀರು ಖಾಲಿಯಾಗಿದೆ, ಬಿಸಿಲಿನ ಝಳಕ್ಕೆ ಭೂಮಿ ಬಿರುಕಿನಿಂದ ತಳಮಳಿಸುತ್ತಿದೆ, ಜೀವ ಜಲಕ್ಕಾಗಿ ಹಾಹಾಕಾರ ಎದುರಾಗಲಾರಂಭಿಸಿದೆ.

ಕಾದ ಕಾವಲಿಯಂತಾದ ರಸ್ತೆ: ಬಿಸಿಲಿನ ತಾಪದಿಂದಾಗಿ ಮಧ್ಯಾಹ್ನದ ವೇಳೆಗೆ ಹೊರಗೆ ಕಾಲಿಡಲು ಸಾಧ್ಯವಾಗದಷ್ಟು ತಾಪಮಾನ ಉಂಟಾಗಿದೆ. ಡಾಂಬರು ರಸ್ತೆಗಳಂತೂ ಕಾದ ಕಾವಲಿಯಂತಾಗಿ ಪರಿವರ್ತನೆಯಾಗಿರುವುದು, 

ಈಗಲೇ ಹೀಗಿದ್ದರೆ ಏಪ್ರಿಲ್-ಮೇ ತಿಂಗಳು ತಾಪಮಾನದ ಪ್ರಮಾಣವು ಮತ್ತಷ್ಟು ಏರಿಕೆಯಾಗುವ ಆತಂಕವಿದೆ ಎಂಬ ಆತಂಕ ನಾಗರಿಕರಲ್ಲಿ ಎದುರಾಗಿದೆ.

ಕೆ.ಸಿ.ವ್ಯಾಲಿ ಯೋಜನೆಯ ಸಂಸ್ಕರಣಾ ನೀರನ್ನು ಮೊದಲ ಹಂತದಲ್ಲಿ ಜಿಲ್ಲೆಯ ೧೩೬ ಕೆರೆಗಳಿಗೆ ತುಂಬಿಸಿದ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟದಲ್ಲಿ ಸುಧಾರಣೆ ಕಂಡು ಬಂದಿತ್ತು, ಆದರೆ ಮಳೆರಾಯನ ಮುನಿಸಿನಿಂದ ಈ ಹಿಂದಿನ ಹದಗೆಟ್ಟ ಪರಿಸ್ಥಿತಿಗೆ ಹಂತ ಹಂತವಾಗಿ ಹಿಂದಿರುಗುತ್ತಿರುವುದು ಕಳವಳಕಾರಿಯಾಗಿದೆ.

ಕೋಲಾರಮ್ಮನ ಕೆರೆ ಖಾಲಿ: ನಗರದ ಸುತ್ತಲಿನ ಕೋಲಾರಮ್ಮನ ಕೆರೆ, ಅಮ್ಮೇರಹಳ್ಳಿ ಕೆರೆ, ಕೋಡಿಕಣ್ಣೂರು ಕೆರೆಗಳಲ್ಲಿ ನೀರು ಸಂಪೂರ್ಣವಾಗಿ ಖಾಲಿಯಾಗಿ ಬಿಸಿಲಿನ ಝಳಕ್ಕೆ ಬಣಗುಟ್ಟುತ್ತಿದೆ, ಕೊಳವೆ ಬಾವಿಗಳಲ್ಲಿ ಅಂತರ್ಜಲಮಟ್ಟ ಸುಧಾರಣೆ ಕಂಡಿದ್ದು ಮತ್ತೆ ಯಥಾಸ್ಥಿತಿಗೆ ಪಾತಾಳದತ್ತ ಮರಳುತ್ತಿದೆ.

ಮಳೆ ಬಿದ್ದರೆ ಮಾತ್ರ ಯರಗೋಳ್ ಯೋಜನೆಯ ಡ್ಯಾಂನಲ್ಲಿ ನೀರು ಕಾಣಲು ಸಾಧ್ಯ. ಇದರ ಮೂಲ ಮಾರ್ಕಂಡೇಯ ಕೆರೆ ಆಗಿದ್ದು, ಕೆರೆ ಕೋಡಿ ಹರಿದರೆ ಮಾತ್ರ ಯರಗೋಳ್ ಡ್ಯಾಂಗೆ ನೀರು ಬರಲಿದೆ ಅಥವಾ ವಾಡಿಕೆ ಮಳೆಗಳು ಸಮರ್ಪಕವಾಗಿ ಅದಲ್ಲಿ ಮಾತ್ರ ಯರಗೋಳ ಡ್ಯಾಂನಲ್ಲಿ ನೀರು ಸಂಗ್ರಹವಾಗುತ್ತದೆ. ಮಳೆ ಇಲ್ಲವಾದಲ್ಲಿ ಈ ಯೋಜನೆಯು ಸಹ ವ್ಯರ್ಥವಾಗಲಿದೆ.

ಯರಗೋಳ್‌ಗೆ ಕೆಸಿ ವ್ಯಾಲಿ ನೀರು?
ಯರಗೋಳ್ ಡ್ಯಾಂಗೆ ಕೆ.ಸಿ.ವ್ಯಾಲಿ ನೀರನ್ನು ಹರಿಸುವ ಮೂಲಕ ಮೊನ್ನೆ ತುಂಬಿಸಿ ಉದ್ಘಾಟಿಸುವ ಮೂಲಕ ಸಾರ್ವಜನಿಕರಿಗೆ ಈ ಯೋಜನೆಯ ವೈಫಲ್ಯತೆಗಳನ್ನು ಮುಚ್ಚಿ ಹಾಕುವ ತಂತ್ರಗಾರಿಕೆ ಮಾಡಲಾಯಿತು, 

ಈಗ ಯರಗೋಳ್ ನೀರು ಎಂದು ಸಾರ್ವಜನಿಕರಿಗೆ ವಿತರಣೆ ಮಾಡುತ್ತಿರುವ ನೀರಿಗೂ ಕೆ.ಸಿ.ವ್ಯಾಲಿ ನೀರಿಗೂ ಯಾವುದೇ ವ್ಯತ್ಯಾಸಗಳಿಲ್ಲ. ಕೆ.ಸಿ. ವ್ಯಾಲಿಯಿಂದ ಹರಿಸುವ ನೀರನ್ನು ಯರಗೋಳ್ ಡ್ಯಾಂಗೆ ತುಂಬಿಸಿಕೊಂಡು ವಿತರಿಸಲಾಗುತ್ತಿದೆ ಎಂಬ ಆರೋಪಗಳಿವೆ.

ಮೂಕ ಪ್ರಾಣಿಗಳ ಸಂಕಷ್ಟ: ಮತ್ತೊಂದೆಡೆ ಅರಣ್ಯ ನಾಶದಿಂದಾಗಿ ಕಾಡು ಪ್ರಾಣಿಗಳು ನಾಡನ್ನು ಪ್ರವೇಶಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ, ಪ್ರಕೃತಿ ವಿಕೋಪಕ್ಕೆ ಬಲಿಯಾಗಿ ಮೂಕ ಪ್ರಾಣಿಗಳ ದಾಹವನ್ನು ತಣಿಸುತ್ತಿದ್ದ ಕೆರೆ, ಕುಂಟೆ, ಕಾಲುವೆಗಳಲ್ಲಿ ನೀರಿಲ್ಲ. ಅಂತರ್ಜಲ ಮಟ್ಟವು ಪಾತಾಳ ತಲುಪಿದೆ. ಜಾನುವಾರುಗಳು, ಕಾಡುಪ್ರಾಣಿಗಳ ಹಸಿವು ಇಂಗಿಸುತ್ತಿದ್ದ ಹಸಿರು ಹುಲ್ಲು ಸಹ ಬಿಸಿಲಿಗೆ ಒಣಗಿದೆ.

ಮೇವು, ನೀರಿಗಾಗಿ ಜಾನುವಾರುಗಳು ಒಂದೆಡೆಯಿಂದ ಮತ್ತೊಂದಡೆ ಅಲೆದಾಡುತ್ತಿವೆ, ದಾಹ, ದಣಿವು, ಹಸಿವು ನೀಗಿಸಿಕೊಳ್ಳಲು ಮೂಕ ಪ್ರಾಣಿಗಳು ಪಡುತ್ತಿರುವ ಪರಿತಾಪವು ಹೇಳ ತೀರದಾಗಿದೆ, ಬಿಸಿಲಿನ ತಾಪಕ್ಕೆ ಹಸಿರು ಹುಲ್ಲು ಒಣಗಿ ಹೋಗಿವೆ, 

ಇದರಿಂದ ಹಸಿವು ಇಂಗಿಸಿಕೊಳ್ಳಲು ಜಾನುವಾರುಗಳು ಪ್ಲಾಸ್ಟಿಕ್ ಪೇಪರ್‌ಗಳಂತ ವಸ್ತುಗಳನ್ನು ತಿನ್ನುವ ಸ್ಥಿತಿ ಉಂಟಾಗಿದೆ. ಬಿಸಲಿನಿಂದಾಗಿ ನೀರು ಸಿಗದೆ ಜಾನುವಾರುಗಳು ಯಾತನೆ ಅನುಭವಿಸುತ್ತಿರುವ ದೃಶ್ಯಗಳು ನಗರ-ಪಟ್ಟಣ ಪ್ರದೇಶ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿಯೂ ಕಂಡು ಬರುತ್ತಿದೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ