ಮಳೆ ಕೊರತೆ, ತೋಟಗಾರಿಕೆ ಬೆಳೆಯಲ್ಲಿ ಶೇ. 40 ರಷ್ಟು ಇಳುವರಿ ಕುಂಠಿತ: ಸಿಇಒ

KannadaprabhaNewsNetwork | Published : Feb 7, 2024 1:46 AM

ಸಾರಾಂಶ

ಜಿಲ್ಲೆಯಲ್ಲಿ ಈ ಬಾರಿ ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿದಿದೆ. ತೋಟಗಾರಿಕೆ ಬೆಳೆಯಲ್ಲಿ ಇಳುವರಿ ಶೇ. 40 ರಷ್ಟು ಕುಸಿತವಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ ಹೇಳಿದರು

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲೆಯಲ್ಲಿ ಈ ಬಾರಿ ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿದಿದೆ. ತೋಟಗಾರಿಕೆ ಬೆಳೆಯಲ್ಲಿ ಇಳುವರಿ ಶೇ. 40 ರಷ್ಟು ಕುಸಿತವಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ ಹೇಳಿದರು. ಚಿಕ್ಕಮಗಳೂರು ಪ್ರೆಸ್ ಕ್ಲಬ್ ಮಂಗಳವಾರ ಏರ್ಪಡಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂಗಾರು ಮಳೆ ಸಕಾಲದಲ್ಲಿ ಬರದೆ ಬಿತ್ತನೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣಲು ಸಾಧ್ಯವಾಗಿಲ್ಲ ಎಂದರು. ತೋಟಗಾರಿಕೆ ಬೆಳೆಯಲ್ಲಿ ಶೇ. 40 ರಷ್ಟು ಇಳುವರಿ ಕುಂಠಿತವಾಗಿದೆ. ಅಡಿಕೆಗೆ ಎಲೆಚುಕ್ಕಿ ರೋಗ, ಹಳದಿ ಎಲೆ ರೋಗ ಬಂದಿದ್ದರೆ, ತೆಂಗಿನ ತೋಟಗಳಲ್ಲಿ ಗರಿಗಳಿಗೆ ಕಪ್ಪು ತಲೆ ಹುಳು ರೋಗ ಕಾಣಿಸಿಕೊಂಡಿದೆ. ಹೀಗಾಗಿ ಇಳುವರಿಯಲ್ಲಿ ಸಾಕಷ್ಟು ಕುಂಠಿತವಾಗಿದೆ ಎಂದು ಹೇಳಿದರು. ಜಿಲ್ಲೆಯ 9 ತಾಲೂಕುಗಳ ಪೈಕಿ 8 ತಾಲೂಕುಗಳನ್ನು ತೀವ್ರ ಬರಪೀಡಿತ ಹಾಗೂ ಸಾಧಾರಣ ಬರಪೀಡಿತ ತಾಲೂಕು ಎಂದು ಸರ್ಕಾರ ಘೋಷಣೆ ಮಾಡಿದೆ. 10 ಗ್ರಾಮ ಪಂಚಾಯತ್‌ಗಳ 11 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಅಲ್ಲಿ ಖಾಸಗಿ ಬೋರ್‌ವೆಲ್‌ಗಳಿಂದ ದಿನ ಬಿಟ್ಟು ದಿನ ನೀರು ಕೊಡಲಾಗುತ್ತಿದೆ ಎಂದರು. ಕುಡಿಯುವ ನೀರಿನ ಸಮಸ್ಯೆ ಎಲ್ಲೆಲ್ಲಿ ಎದುರಾಗಬಹುದೆಂದು ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದು, ಮುಂದಿನ ದಿನ ಗಳಲ್ಲಿ 303 ಹಳ್ಳಿಗಳಲ್ಲಿ ಕುಡಿಯುವ ನೀರಿನ ಕೊರತೆಯಾಗಬಹುದೆಂದು ಗುರುತಿಸಲಾಗಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸ್ಥಳೀಯವಾಗಿ ದೊರೆಯುವ ನೀರಿನ ಮೂಲಗಳು ಹಾಗೂ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿ ಸಜ್ಜಾಗಿರಿಸಲಾಗಿದೆ. ನೀರಿನ ಅಭಾವ ಎದುರಾದ ತಕ್ಷಣ ನೀರು ಒದಗಿಸಲಾಗುವುದು ಎಂದು ಹೇಳಿದರು. ಮಲೆನಾಡು ವಿಭಿನ್ನವಾಗಿದ್ದು, ಅನೇಕ ಕುಗ್ರಾಮಗಳು ನೈಸರ್ಗಿಕವಾಗಿ ಬರುವ ಝರಿಗಳನ್ನು ಅವಲಂಭಿಸಿದ್ದಾರೆ. ಈ ಝರಿ ಗಳಲ್ಲಿ ನೀರು ಬತ್ತಿದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕಾಗುತ್ತದೆ. ಆ ಕೆಲಸ ಕಷ್ಟವಾಗುವುದರಿಂದ ಅಂತಹ ಗ್ರಾಮಗಳಿಗೆ ಜೀಪ್‌ಗಳಲ್ಲಿ ನೀರು ಪೂರೈಕೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. ಜಿಲ್ಲೆಯ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕ್ರಮವಹಿಸಲಾಗಿದೆ. ಮುಂದಿನ 28 ವಾರಗಳಿಗೆ ಸಾಕಾಗು ವಷ್ಟು ಮೇವಿನ ಲಭ್ಯತೆ ಈಗಾಗಲೇ ಇದೆ. ಅಮೃತ್ ಮಹಲ್ ಕಾವಲ್‌ನಲ್ಲಿ ಈಗಾಗಲೇ ಮೇವು ಬೆಳೆಯಲಾಗುತ್ತಿದೆ. ಕುಡಿಯುವ ನೀರು ಮತ್ತು ಮೇವಿಗೆ ಕೊರತೆಯಾಗದಂತೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಜಿಲ್ಲೆಯ ಕೊಪ್ಪ ಮತ್ತು ಶೃಂಗೇರಿ ಭಾಗದಲ್ಲಿ ಮಂಗನಕಾಯಿಲೆ ನಾಲ್ಕು ಪ್ರಕರಣಗಳು ದಾಖಲಾಗಿವೆ. ಓರ್ವ ವ್ಯಕ್ತಿ ಮೃತ ಪಟ್ಟಿದ್ದಾರೆ. ಮಂಗನ ಕಾಯಿಲೆ ನಿಯಂತ್ರಣ ಕುರಿತು ಇತ್ತೀಚೆಗೆ ಶಿವಮೊಗ್ಗದಲ್ಲಿ ಉನ್ನತ ಅಧಿಕಾರಿಗಳ ಸಭೆ ನಡೆಸ ಲಾಗಿದೆ. ಈ ಭಾಗದಲ್ಲಿ ಮಂಗನ ಕಾಯಿಲೆ ನಿಯಂತ್ರಿಸುವ ನಿಟ್ಟಿನಲ್ಲಿ ಜನಜಗೃತಿ ಮೂಡಿಸಲಾಗುತ್ತಿದೆ. ಜತೆಗೆ ಜನರು ಕಾಡಿಗೆ ತೆರಳಿದ ವೇಳೆ ಏನೇನು ಮುಂಜಾಗ್ರತೆ ವಹಿಸಬೇಕೆಂಬ ಮಾಹಿತಿ ಮತ್ತು ತಿಳುವಳಿಕೆ ನೀಡಲಾಗುತ್ತಿದೆ ಎಂದರು. ಜಿಲ್ಲೆಯಲ್ಲಿ ಸ್ವಸಹಾಯ ಸಂಘಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸ್ವಸಹಾಯ ಸಂಘಗಳನ್ನು ಇನ್ನಷ್ಟು ಸದೃಢ ಗೊಳಿಸಲು ಶ್ರಮಿಸಲಾಗುತ್ತಿದೆ. ಮುಂದೊಂದು ದಿನ ದೊಡ್ಡ ಉದ್ಯಮವಾಗಿ ರೂಪುಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಮಲೆನಾಡು ಭಾಗದಲ್ಲಿ ಸ್ವಸಹಾಯ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಕಡೂರು, ಅಜ್ಜಂಪುರ ಭಾಗದಲ್ಲಿ ಉತ್ತೇಜನ ಕೊಡುವ ಕೆಲಸ ಮಾಡಲಾಗುತ್ತಿದೆ ಎಂದರು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವತ್ತಿನ ಅಳತೆ ಮಾಡಲಾಗುತ್ತಿದೆ. ಅದರ ಆಧಾರದ ಮೇಲೆ ತೆರಿಗೆ ವಿಧಿಸಲಾಗುವುದು ಹಾಗಾಗಿ ತೆರಿಗೆ ಸಂಗ್ರಹ ಹೆಚ್ಚಳವಾಗಲಿದೆ. ಈ ಹಣದಲ್ಲಿ ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಯೋಗೀಶ್, ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ರಾಜೇಶ್, ಪ್ರಧಾನ ಕಾರ್ಯದರ್ಶಿ ಆರ್. ತಾರಾನಾಥ್, ಖಜಾಂಚಿ ಗೋಪಿ ಇದ್ದರು. 6 ಕೆಸಿಕೆಎಂ 1ಚಿಕ್ಕಮಗಳೂರು ಪ್ರೆಸ್‌ ಕ್ಲಬ್‌ನಲ್ಲಿ ಮಂಗಳವಾರ ನಡೆದ ತಿಂಗಳ ಅತಿಥಿ ಕಾರ್ಯಕ್ರಮವನ್ನು ಜಿಪಂ ಸಿಇಒ ಡಾ. ಗೋಪಾಲಕೃಷ್ಣ ಉದ್ಘಾಟಿಸಿದರು. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಯೋಗೀಶ್‌ ಹಾಗೂ ಪ್ರೆಸ್‌ ಕ್ಲಬ್‌ ಪದಾಧಿಕಾರಿಗಳು ಇದ್ದರು.

Share this article