ಬಿರು ಬಿಸಿಲಿಗೆ ನಲುಗಿರುವ ಹೊಗೆಸೊಪ್ಪು ಸಸಿ ಮಡಿ । ಜಮೀನಿನಲ್ಲಿ ನಾಟಿಗೆ ಕಾದಿರುವ ರೈತ । ಸೊರಗು ರೋಗದ ಭೀತಿ
ಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕಿನಲ್ಲಿ ತಂಬಾಕು ಉತ್ಪಾದನೆಗೆ ಹೆಚ್ಚು ಆಸಕ್ತಿ ಹೊಂದಿರುವ ರೈತರಿಗೆ ವರುಣನ ಮುನಿಸು ಹೊಡೆತ ನೀಡಿದ್ದು ನಾಟಿ ಕಾರ್ಯಕ್ಕೆ ಹಿನ್ನಡೆ ಉಂಟು ಮಾಡಿದೆ.ಪ್ರಮುಖ ವಾಣಿಜ್ಯ ಬೆಳೆಯಾದ ಹೊಗೆಸೊಪ್ಪು ಬೆಳೆಯಲು ರೈತರು ಈಗಾಗಲೇ ಸಸಿ ಮಡಿ ಬೆಳೆಸಿಕೊಂಡಿದ್ದಾರೆ. ದುರಾದೃಷ್ಟವಶಾತ್ ಏಪ್ರಿಲ್ ತಿಂಗಳು ಕಳೆಯುತ್ತಾ ಬಂದರೂ ವರುಣ ಕೃಪೆ ತೋರಿಲ್ಲ. ಬದಲಾಗಿ ಬೇಸಿಗೆ ಬಿರು ಬಿಸಿಲಿನ ತಾಪಕ್ಕೆ ನೀರಿನ ಅಭಾವ ತಲೆದೋರಿ ಬೆಳೆಸಿದ್ದ ಸಸಿ ಮಡಿಗಳು ನಲುಗುತ್ತಿದ್ದು ರೈತರನ್ನು ಕಂಗೆಡಿಸಿದೆ.
ಕಳೆದ ಬಾರಿ ಮಾರುಕಟ್ಟೆಯಲ್ಲಿ ತಂಬಾಕಿಗೆ ಉತ್ತಮ ಬೆಲೆ ದೊರೆತ ಖುಷಿಯಲ್ಲಿ ರೈತರು ಈ ಸಲ ಹೊಗೆಸೊಪ್ಪು ಬೆಳೆಯಲು ಹೆಚ್ಚಿನ ಒಲವು ತೋರಿದ್ದಾರೆ. ಎರಡು ತಿಂಗಳ ಹಿಂದೆಯೇ ಸಸಿ ಮಡಿ ಬಿತ್ತನೆ ನಡೆಸಿ ಇದೀಗ ಮಳೆಗಾಗಿ ಮುಗಿಲಿನತ್ತ ದೃಷ್ಟಿ ನೆಟ್ಟಿದ್ದಾರೆ. ಒಂದೆಡೆ ಸಸಿ ಮಡಿಗಳು ಬೆಳೆದು ನಿಂತಿವೆ. ಮತ್ತೊಂದಡೆ ಮಳೆಯನ್ನೇ ನೆಚ್ಚಿಕೊಂಡಿರುವ ರೈತರು ಇನ್ನೂ ಜಮೀನು ಉಳುಮೆ ಕೂಡ ಮಾಡಿಲ್ಲ.
ತಂಬಾಕು ಗಿಡಗಳಲ್ಲಿ ಕಾಣಿಸಿಕೊಳ್ಳುವ ಸೊರಗು ರೋಗವನ್ನು ಪರಿಸರ ಸ್ನೇಹಿಯಾಗಿ ಮತ್ತು ಪರಿಣಾಮಕಾರಿಯಾಗಿ ನಿಯಂತ್ರಿಸಲು ಟ್ರೈಕೋಡರ್ಮಾ ಬಳಕೆ ಅತ್ಯವಶ್ಯಕ. ಟ್ರೇ ಮಾಡುವಾಗ ಕೋಕೋಪಿತ್ ಜತೆ ಬೆಳೆಸಿದ ಟ್ರೈಕೋಡರ್ಮಾ ಮಿಶ್ರಣದಲ್ಲಿ ತಂಬಾಕು ಸಸಿ ಬೆಳೆಸಿದರೆ ಸೊರಗು ರೋಗವನ್ನು ಟ್ರೇ ಮತ್ತು ಜಮಿನಿನಲ್ಲಿ ಹತೋಟಿಗೆ ತರಬಹುದು.
ಜಮೀನಿನಲ್ಲಿ ಸೊರಗು ರೋಗ, ಕಪ್ಪು ಕಾಂಡ ರೋಗ ನಿಯಂತ್ರಿಸಲು ಮುನ್ನೆಚ್ಚರಿಕಾ ಕ್ರಮವಾಗಿ ಸಸಿ ಮಡಿಗಳಿಗೆ ಜಮೀನಿಗೆ ನಾಟಿ ಮಾಡುವ ಮೂರ್ನಾಲ್ಕು ದಿನ ಮುಂಚಿತವಾಗಿ 20 ಗ್ರಾಂ ರಿಡೋಮಿಲ್ ಗೋಲ್ಡ್ , 10 ಗ್ರಾಂ ಗ್ಲೋಇಟ್ ಮತ್ತು 100 ಗ್ರಾಂ ಪೊಟಾಶಿಯಂ ನೈಟ್ರೇಟ್ 15 ಲೀಟರ್ ಸ್ಪ್ರೇ ಕ್ಯಾನಿಗೆ ಹಾಕಿ ಟ್ರೇ ಸಸಿಗಳಿಗೆ ಸಿಂಪಡಿಸಿದ ನಂತರ ಜಮೀನಿಗೆ ನಾಟಿ ಮಾಡುವುದು ಸೂಕ್ತ.
ಕುಮಾರ, ರೈತ.
ಬ್ರಿಜ್ ಭೂಷಣ್, ತಂಬಾಕು ಮಾರುಕಟ್ಟೆ ಹರಾಜು ಅಧೀಕ್ಷಕ, ರಾಮನಾಥಪುರ.