ಬೆಂಗಳೂರು : ಬಡವರ ‘ಮುಖ್ಯಮಂತ್ರಿಗಳ ಬಹುಮಹಡಿ ಬೆಂಗಳೂರು ವಸತಿ ಯೋಜನೆಗೆ ಜಾಗ ಕೊರತೆ

KannadaprabhaNewsNetwork |  
Published : Oct 13, 2024, 01:04 AM ISTUpdated : Oct 13, 2024, 08:18 AM IST
ಕಟ್ಟಡ | Kannada Prabha

ಸಾರಾಂಶ

ಬಡ ವಸತಿ ರಹಿತರಿಗಾಗಿ ಬೆಂಗಳೂರು ಸುತ್ತ ಮುತ್ತ ರಾಜೀವ್ ಗಾಂಧಿ ವಸತಿ ನಿಗಮದಿಂದ ‘ಮುಖ್ಯಮಂತ್ರಿಗಳ ಬಹುಮಹಡಿ ಬೆಂಗಳೂರು ವಸತಿ ಯೋಜನೆ’ಯಡಿ ‘ಒಂದು ಲಕ್ಷ’ ಫ್ಲ್ಯಾಟ್/ಮನೆ ನಿರ್ಮಿಸಲು ಜಮೀನುಗಳ ತೀವ್ರ ಅಭಾವ ಉಂಟಾಗಿದೆ.

 ಬೆಂಗಳೂರು : ಬಡ ವಸತಿ ರಹಿತರಿಗಾಗಿ ಬೆಂಗಳೂರು ಸುತ್ತ ಮುತ್ತ ರಾಜೀವ್ ಗಾಂಧಿ ವಸತಿ ನಿಗಮದಿಂದ ‘ಮುಖ್ಯಮಂತ್ರಿಗಳ ಬಹುಮಹಡಿ ಬೆಂಗಳೂರು ವಸತಿ ಯೋಜನೆ’ಯಡಿ ‘ಒಂದು ಲಕ್ಷ’ ಫ್ಲ್ಯಾಟ್/ಮನೆ ನಿರ್ಮಿಸಲು ಜಮೀನುಗಳ ತೀವ್ರ ಅಭಾವ ಉಂಟಾಗಿದೆ. ಹೀಗಾಗಿ, 1 ಲಕ್ಷ ಫ್ಲ್ಯಾಟ್‌ ನಿರ್ಮಿಸುವ ಯೋಜನೆ ಕೈಬಿಟ್ಟು 46,999 ಫ್ಲ್ಯಾಟ್ ನಿರ್ಮಿಸುವ ಪರಿಷ್ಕೃತ ಗುರಿಯನ್ನು ನಿಗಮ ಹಾಕಿಕೊಂಡಿದೆ.

ಬೆಂಗಳೂರು ನಗರ ಜಿಲ್ಲೆಯ ಐದು ತಾಲೂಕುಗಳ ವ್ಯಾಪ್ತಿಯಲ್ಲಿ ಕೈಗೆಟುಕುವ ದರದಲ್ಲಿ 1 ಬಿಎಚ್‌ಕೆ ಮತ್ತು 2 ಬಿಎಚ್‌ಕೆಯ 1 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲು 2017ರಲ್ಲಿ ಯೋಜನೆ ರೂಪಿಸಲಾಗಿತ್ತು. ಅದಕ್ಕಾಗಿ ಕಂದಾಯ ಇಲಾಖೆಯಿಂದ 1,014 ಎಕರೆ ಜಮೀನನ್ನು ನಿಗಮಕ್ಕೆ ನೀಡಲಾಗಿತ್ತು. ಆದರೆ, ಅದರಲ್ಲಿ ಸುಮಾರು 500 ಎಕರೆಯಷ್ಟು ಜಮೀನು ಬಳಕೆಗೆ ಯೋಗ್ಯವಾಗಿಲ್ಲ. ಗುಡ್ಡ, ಕಲ್ಲು ಬಂಡೆ, ಕ್ವಾರಿ ಸಮೀಪ, ಎತ್ತರ ಅಥವಾ ತಗ್ಗು ಪ್ರದೇಶ ಸೇರಿದಂತೆ ಸಂಕೀರ್ಣವಾದ ಪ್ರದೇಶಗಳಲ್ಲಿ ಈ ಜಮೀನುಗಳಿವೆ.

ಬಹುತೇಕ ಖರಾಬು ಜಮೀನು ಮತ್ತು ಇನ್ನಿತರ ಉದ್ದೇಶದ ಜಮೀನನ್ನು ನೀಡಲಾಗಿದೆ. ಈ ಜಮೀನುಗಳಲ್ಲಿ ವಸತಿ ಯೋಜನೆ ಅನುಷ್ಠಾನಗೊಳಿಸಲು ನಿಗಮದ ಆರ್ಥಿಕ ಮಿತಿಯಲ್ಲಿ ಕಾರ್ಯಸಾಧುವಲ್ಲ. ಒಂದು ವೇಳೆ ಅಭಿವೃದ್ಧಿಪಡಿಸಲು ಮುಂದಾದರೆ ನಿರ್ಮಾಣ ವೆಚ್ಚ ಹೆಚ್ಚಾಗುತ್ತದೆ. ಇದರಿಂದ ಫ್ಲ್ಯಾಟ್‌ ದರವನ್ನು ಹೆಚ್ಚಿಸಬೇಕಾಗುತ್ತದೆ. ಆಗ ಆರ್ಥಿಕವಾಗಿ ಹಿಂದುಳಿದವರಿಗೆ ಫ್ಲ್ಯಾಟ್ ಖರೀದಿಸಲು ಕಷ್ಟವಾಗುತ್ತದೆ. ಕೈಗೆಟುಕುವ ಪರಿಕಲ್ಪನೆ ಕೈಗೂಡುವುದಿಲ್ಲ ಎನ್ನುತ್ತಾರೆ ನಿಗಮದ ಅಧಿಕಾರಿಗಳು.

ಜಮೀನು ಅಭಾವದ ಕಾರಣ 500 ಎಕರೆ ಪ್ರದೇಶದಲ್ಲಿ ಮಾತ್ರ 1 ಬಿಎಚ್‌ಕೆ ಫ್ಲ್ಯಾಟ್‌ ನಿರ್ಮಾಣ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಸುಮಾರು 4,000 ಫ್ಲ್ಯಾಟ್‌ಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಪರ್ಯಾಯ ಜಮೀನು ಮತ್ತು ಅನುದಾನ ಒದಗಿಸಿದರೆ ಯೋಜನೆಯನ್ನು ವಿಸ್ತರಿಸಿಕೊಳ್ಳಲು ಸಾಧ್ಯವಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ವ್ಯಾಜ್ಯದಲ್ಲಿವೆ ಜಮೀನುಗಳು:

ಬಳಕೆಗೆ ಯೋಗ್ಯವಿರುವ ಜಮೀನುಗಳ ಪೈಕಿ ಅನೇಕ ಕಡೆಗಳಲ್ಲಿ ಹತ್ತಾರು ಎಕರೆ ಜಮೀನು ಒತ್ತುವರಿಯಾಗಿದೆ. ಖಾಸಗಿ ವ್ಯಕ್ತಿಗಳ ಜೊತೆಗೆ ಸರ್ಕಾರದ ಸಂಸ್ಥೆಗಳು ಕೂಡ ಒತ್ತುವರಿ ಮಾಡಿಕೊಂಡಿವೆ. ಕೆಲವು ಜಮೀನುಗಳಿಗೆ ಸಂಬಂಧಿಸಿದ ವ್ಯಾಜ್ಯಗಳು ನ್ಯಾಯಾಲಯದಲ್ಲಿವೆ. ಒತ್ತುವರಿಯನ್ನು ತೆರವು ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳನ್ನು ಕೋರಲಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...