ಕನ್ನಡಪ್ರಭ ವಾರ್ತೆ, ಶಿಕಾರಿಪುರ
ಶಿವಮೊಗ್ಗದಲ್ಲಿ ನಿರ್ಮಾಣದ ಅಂತಿಮ ಹಂತದಲ್ಲಿರುವ ಇಎಸ್ಐ ಆಸ್ಪತ್ರೆಯಿಂದಾಗಿ ಜಿಲ್ಲೆಯ ಲಕ್ಷ ಕಾರ್ಮಿಕ ಕುಟುಂಬಕ್ಕೆ ಅತ್ಯಾಧುನಿಕ ಗುಣಮಟ್ಟದ ಆರೋಗ್ಯ ಸೇವೆ ದೊರೆಯಲಿದೆ. ಬೆಂಗಳೂರು ಮತ್ತು ಕಲಬುರಗಿಯಲ್ಲಿ ಮಾತ್ರವಿರುವ ಇಎಸ್ಐ ಆಸ್ಪತ್ರೆ ಶಿವಮೊಗ್ಗದಲ್ಲಿ ಅಂದಾಜು ₹100 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲು ಅಸಂಘಟಿತ ಕಾರ್ಮಿಕರ ಬಗೆಗಿನ ಸಂಸದ ರಾಘವೇಂದ್ರ ಅವರ ಪ್ರಾಮಾಣಿಕ ಕಾಳಜಿ ಬಹುಮುಖ್ಯ ಕಾರಣವಾಗಿದೆ ಎಂದು ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಹೇಳಿದರು.ಮಂಗಳವಾರ ಪಟ್ಟಣದ ಶಿವಗಿರಿ ಮರಾಠ ಮಂದಿರದಲ್ಲಿ ಯೆನಪೋಯ ಡೆಂಟಲ್ ಕಾಲೇಜು ಆಸ್ಪತ್ರೆ, ದೇರಳಕಟ್ಟೆ ಮಂಗಳೂರು ಹಾಗೂ ತಾಲೂಕು ಆರೋಗ್ಯ ಇಲಾಖೆ, ಶ್ರಮಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟ, ಶಿವಗಿರಿ ಮರಾಠ ಮಂದಿರ, ಆಶಾ ಕಾರ್ಯಕರ್ತರ ಸಹಯೋಗದಲ್ಲಿ ಹಿರಿಯ ನಾಗರಿಕರಿಗೆ ಆಯೋಜಿಸಲಾಗಿದ್ದ ಉಚಿತ ದಂತಪಂಕ್ತಿ ಜೋಡಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿಗೂ ಕಣ್ಣು- ಮೂಗು- ಬಾಯಿ- ಕಿವಿ ಅತ್ಯಗತ್ಯವಾಗಿವೆ. ವಯೋಸಹಜದಿಂದ ಹಲ್ಲುಗಳು ಹಾಳಾದಾಗ ಕೃತಕ ಹಲ್ಲಿನ ಮೊರೆ ಹೋಗುವುದು ಸಾಮಾನ್ಯ. ಈ ದಿಸೆಯಲ್ಲಿ ಅಸಂಘಟಿತ ಕಾರ್ಮಿಕರ ಸಂಘ ಉಚಿತ ದಂತ ಪಂಕ್ತಿ ಜೋಡಣೆಯ ಬಹುಮಹತ್ವದ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ಶ್ಲಾಘಿಸಿದರು.ಜಿಲ್ಲೆಯಲ್ಲಿ ಜನಪರ ಕಾಳಜಿಯ ಯಡಿಯೂರಪ್ಪ ಅವರ ಸಹಿತ ಸಂಸದ ರಾಘವೇಂದ್ರ ಅವರಿಗೆ ಜನತೆ ನೀಡಿದ ಸತತ ಬೆಂಬಲದಿಂದ ಅಭಿವೃದ್ಧಿಪರ ವಿಮಾನಯಾನ, ನಿತ್ಯ ಸಾವಿರಾರು ಜನತೆ ಅಲೆದಾಡುತ್ತಿರುವ ರೈಲ್ವೆ ಸೌಲಭ್ಯ ದೊರೆತಿದೆ. ಶೀಘ್ರದಲ್ಲಿಯೇ ಶಿಕಾರಿಪುರಕ್ಕೆ ರೈಲ್ವೆ ಸಂಪರ್ಕದಿಂದ ರೈತರ ಬೆಳೆಗೆ ಅಂತರ ರಾಜ್ಯ ಮಾರುಕಟ್ಟೆಗೆ ಪ್ರವೇಶ, ಏತ ನೀರಾವರಿ ಯೋಜನೆಯಿಂದ 200ಕ್ಕೂ ಅಧಿಕ ಕೆರೆಗೆ ನೀರು ತುಂಬಲಾಗಿದೆ ಎಂದು ತಿಳಿಸಿದರು.
ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಸುಂದರಬಾಬು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘ ಸಂಸ್ಥೆಗಳು ಕೇವಲ ಸರ್ಕಾರದ ಸೌಲಭ್ಯಕ್ಕೆ ಮಾತ್ರ ಸೀಮಿತವಾಗದೇ ಸಮಾಜಮುಖಿ ಕಾರ್ಯದ ಜವಾಬ್ದಾರಿ ನಿರ್ವಹಿಸಬೇಕಾಗಿದೆ. ಈ ದಿಸೆಯಲ್ಲಿ ಕಟ್ಟಡ ಕಾರ್ಮಿಕರ ಸಂಘ ಈಗಾಗಲೇ ಸಸಿ ನೆಡುವ ಕಾರ್ಯಕ್ರಮ, ವ್ಹೀಲ್ ಚೇರ್ ವಿತರಣೆ, ಉಚಿತ ದಂತಪಂಕ್ತಿ ಮತ್ತಿತರ ಹಲವು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು. ರಾಜ್ಯ ಉಗ್ರಾಣ ನಿಗಮದ ಮಾಜಿ ಅಧ್ಯಕ್ಷ ಎಚ್.ಟಿ ಬಳಿಗಾರ್, ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಮುನಿರತ್ನ, ಗೌರವಾಧ್ಯಕ್ಷ ಮಹದೇವಾಚಾರ್, ತಾಲೂಕು ಮರಾಠ ಸಮಾಜ ಅಧ್ಯಕ್ಷ ಗುರುರಾಜ ಜಗತಾಪ್, ಶಿವಗಿರಿ ಮರಾಠ ಸಮಾಜದ ಅಧ್ಯಕ್ಷ ಶಿವಾಜಿ ರಾವ್ ಮೋಹಿತೆ, ಚಂದ್ರೋಜಿ ರಾವ್, ಧರ್ಮೋಜಿರಾವ್, ಯನಪೋಯ ಆಸ್ಪತ್ರೆ ವೈದ್ಯ ಡಾ.ರಾಜೇಶ ಶೆಟ್ಟಿ, ಡಾ.ಸನತ್ ಶೆಟ್ಟಿ, ಡಾ.ಸವಿತ, ತಾಲೂಕು ವೈದ್ಯಾಧಿಕಾರಿ ಡಾ.ನವೀದ್ ಖಾನ್, ಒಕ್ಕೂಟದ ವಿಜಯಲಕ್ಷ್ಮೀ, ಪ್ರಶಾಂತ್ ಮೇಸ್ತ್ರಿ, ರೇಣು ಮೇಸ್ತ್ರಿ, ನೇತ್ರಾವತಿ, ಭಾಗ್ಯ, ಮಹಮ್ಮದ್ ಹನೀಫ್, ವೆಂಕಟೇಶ್, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
- - - -28ಕೆಎಸ್.ಕೆಪಿ1:ಶಿಕಾರಿಪುರದಲ್ಲಿ ಉಚಿತ ದಂತಪಂಕ್ತಿ ಜೋಡಣಾ ಕಾರ್ಯಕ್ರಮವನ್ನು ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ ಉದ್ಘಾಟಿಸಿದರು.