ಅಶೋಕ ಡಿ. ಸೊರಟೂರ
ಲಕ್ಷ್ಮೇಶ್ವರ: ಕಳೆದ ಒಂದೂವರೆ ವರ್ಷದಿಂದ ಇಲ್ಲಿಯ ಪುರಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರಿಲ್ಲದೇ ಆಡಳಿತ ತುಕ್ಕು ಹಿಡಿದಂತಾಗಿತ್ತು. ಕೊನೆಗೂ ರಾಜ್ಯ ಸರ್ಕಾರ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸುವ ಮೂಲಕ ಅಧ್ಯಕ್ಷ, ಉಪಾಧ್ಯಕ್ಷ ಕುರ್ಚಿಯ ಆಕಾಂಕ್ಷಿಗಳಲ್ಲಿ ಕುತೂಹಲ ಹೆಚ್ಚಿಸಿದೆ.ಸ್ಥಳೀಯ ಸಂಸ್ಥೆಗಳಲ್ಲಿ ಅದರಲ್ಲೂ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಮೊದಲ ಅವಧಿ ಮುಕ್ತಾಯಗೊಂಡು ೧೫ ತಿಂಗಳು ಕಳೆದರೂ ಇದುವರೆಗೆ ಎರಡನೇ ಅವಧಿಗಾಗಿ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿಯಾಗಿರಲಿಲ್ಲ. ಉಚ್ಚ ನ್ಯಾಯಾಲಯದ ಆದೇಶದಂತೆ ರಾಜ್ಯ ಸರ್ಕಾರ ಈಗ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗೆ ಮೀಸಲಾತಿ ನಿಗದಿಪಡಿಸಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ೨೦೧೮ರಲ್ಲಿ ಜರುಗಿ ಆರಂಭದಲ್ಲೇ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿಯ ಗೊಂದಲದ ಪರಿಣಾಮ ಎರಡು ವರ್ಷಗಳ ಕಾಲ ಕೋರ್ಟ್ ಮೆಟ್ಟಿಲೇರಿತ್ತು. ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾದ ಸದಸ್ಯರು ನ್ಯಾಯಾಲಯದ ಆದೇಶಕ್ಕಾಗಿ ಕಾದು ಕುಳಿತುಕೊಳ್ಳುವಂತಾಗಿತ್ತು.ನಂತರ ಸರ್ಕಾರ ಪಟ್ಟಣದ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿ ನಿಗದಿಪಡಿಸಿ ಆದೇಶಿಸಿತ್ತು. ಅದರಂತೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಈಗ ಮೊದಲ ೩೦ ತಿಂಗಳ ಅವಧಿ ಮುಗಿಯಿತು. ಬಳಿಕ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆ ಖಾಲಿಯಾಗಿ ೧೫ ತಿಂಗಳುಗಳೇ ಗತಿಸಿದೆ.
ಈಗ ಸರ್ಕಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಬಾಕಿ ಉಳಿದ ೧೫ ತಿಂಗಳಿಗೆ ನಿರ್ಧರಿಸುತ್ತದೆಯೋ ಅಥವಾ ೩೦ ತಿಂಗಳಿಗೆ ನಿರ್ಧರಿಸುತ್ತದೆ ಎಂಬುದು ಸರ್ಕಾರದ ನಿರ್ಣಯದ ಮೇಲೆ ಅವಲಂಬಿಸಿದೆ.ಈಗ ಪುರಸಭೆಗೆ ಅಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗದ ಅ ಮಹಿಳೆಗೆ ಮೀಸಲಿಟ್ಟಿದ್ದು, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.
ಪುರಸಭೆಯ ಚುನಾಯಿತ ಸದಸ್ಯರಿದ್ದರೂ ಕಳೆದ ೧೫ ತಿಂಗಳಿನಿಂದ ಆಡಳಿತವು ಅಧಿಕಾರಿಗಳ ಹಿಡಿದಲ್ಲಿತ್ತು. ಇದರಿಂದಾಗಿ ಪುರಸಭೆಯ ಪ್ರತಿ ನಿರ್ಣಯಕ್ಕೂ ಅಧಿಕಾರಿಗಳಿಗಾಗಿ ಕಾಯಬೇಕಾಗಿತ್ತು. ಇನ್ನು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ನಂತರ ಪುರಸಭೆಯಲ್ಲಿ ಚುನಾಯಿತ ಮಂಡಳಿ ಕ್ರಿಯಾಶೀಲವಾಗಲಿದೆ.ತುಕ್ಕು ಹಿಡಿದಿದ್ದ ಆಡಳಿತಕ್ಕೆ ಕೊನೆಗೂ ಚುರುಕು ಮುಟ್ಟಿಸುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡಿದೆ. ಇದು ಸದಸ್ಯರಲ್ಲಿ ತೀವ್ರ ಕುತೂಹಲ ಹುಟ್ಟಿಸಿದೆ.