ಕಾರಟಗಿ: ಮಹತ್ವಾಕಾಂಕ್ಷಿ ರೈಸ್ ಟೆಕ್ನಾಲಜಿ ಪಾರ್ಕ್ ಅನುಷ್ಠಾನಕ್ಕಾಗಿ ರೈತರಿಂದ ಭೂ ಸ್ವಾಧೀನ ಮಾಡಿಕೊಂಡ ಜಮೀನಿಗೆ ಹೆಚ್ಚುವರಿ ಪರಿಹಾರ ಹಣ ನೀಡುವ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಇಲ್ಲಿನ ವಿಶೇಷ ಎಪಿಎಂಸಿ ಕಚೇರಿಯ ಪೀಠೋಪಕರಣಗಳನ್ನು ಸೋಮವಾರ ನ್ಯಾಯಾಲಯದ ಸಿಬ್ಬಂದಿ ಜಪ್ತಿ ಮಾಡಿದ್ದಾರೆ.ಜಿಲ್ಲಾ ಮತ್ತು ಹೈಕೋರ್ಟ್‌ನ ಆದೇಶದ ಅನ್ವಯ ಕಾರಟಗಿಯಲ್ಲಿನ ವಿಶೇಷ ಎಪಿಎಂಸಿ ಕಚೇರಿಯ ಪಿಠೋಪಕರಗಳನ್ನು ಜಪ್ತಿ ಮಾಡಲಾಗಿದೆ ಎಂದು ರೈತರ ಪರ ನ್ಯಾಯವಾದಿಗಳು ತಿಳಿಸಿದ್ದಾರೆ.ಕಾರಟಗಿ ಮತ್ತು ಕನಕಗಿರಿ ಮಧ್ಯದ ನವಲಿ ಬಳಿ ಕಾರಟಗಿ ವಿಶೇಷ ಎಪಿಎಂಸಿಯಿಂದ ರೈಸ್ ಟೆಕ್ನಾಲಜಿ ಪಾರ್ಕ್‌ಗೆ ಸುಮಾರು ೪೦೦ ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಜಮೀನಿನ ಪೈಕಿ ೧೭೬ ಎಕರೆ ಭೂಮಿ ರೈತರ ಪಟ್ಟಾ ಭೂಮಿ ಸ್ವಾಧೀನ ಪಡಿಸಿಕೊಂಡ ವಿಶೇಷ ಎಪಿಎಂಸಿ ರೈತರಿಗೆ ಪರಿಹಾರ ಹಣ ನೀಡಿತ್ತು. ಆದರೆ, ಹೆಚ್ಚಿನ ಪರಿಹಾರ ಮೊತ್ತಕ್ಕೆ ರೈತರಾದ ರಾಮಣ್ಣ ಭೂವಿ, ಮರ್ತುಜ್‌ಸಾಬ್, ವಿರುಪಣ್ಣ ಭಜಂತ್ರಿ, ಪುತ್ರಮ್ಮ ಹರಿಜನ, ಈರಮ್ಮ ಭೂವಿ, ಮರೀರಾಜ್ ಭಜಂತ್ರಿ, ಮುತ್ತಣ್ಣ ಭಜಂತ್ರಿ, ಶಂಕ್ರಪ್ಪ ಹರಿಜನ, ನಾಗಪ್ಪ ಭಜಂತ್ರಿ, ಬಸವರಾಜ ಭಜಂತ್ರಿಕ್ಕೆ ಜಿಲ್ಲಾ ನ್ಯಾಯಾಲಯದ ಮೆಟ್ಟಿಲು ಏರಿದ್ದರು.ರೈತರ ವಾದ ಆಲಿಸಿದ ಜಿಲ್ಲಾ ನ್ಯಾಯಾಲಯ ಹೆಚ್ಚುವರಿ ಪರಿಹಾರ ನೀಡುವಂತೆ ಆದೇಶಿಸಿತ್ತು. ಅತ್ತ ಜಿಲ್ಲಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಎಪಿಎಂಸಿ ಹೈಕೋಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಆದರೆ, ಹೈಕೋರ್ಟ್ ಜಿಲ್ಲಾ ನ್ಯಾಯಾಲಯದ ಆದೇಶ ಪರಿಶೀಲಿಸುವ ಮುನ್ನ ಜಿಲ್ಲಾ ನ್ಯಾಯಾಲಯ ನೀಡಿದ ಆದೇಶದಲ್ಲಿನ ಪರಿಹಾರದ ಶೇ.೫೦ ಹಣವನ್ನು ರೈತರಿಗೆ ಮೊದಲು ಸಂದಾಯ ಮಾಡಿದ ಬಳಿಕ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಸ್ಪಷ್ಟವಾಗಿ ಸೂಚಿಸಿತ್ತು.ಹೈಕೋರ್ಟ್ ಆದೇಶದಂತೆ ಜಿಲ್ಲಾ ನ್ಯಾಯಾಲಯದ ಆದೇಶದ ಕನಿಷ್ಠ ಶೇ.೫೦ ಹಣವನ್ನು ಎಪಿಎಂಸಿ ರೈತರಿಗೆ ಸಂದಾಯ ಮಾಡದೇ ವಿಶೇಷ ಎಪಿಎಂಸಿ ಅಧಿಕಾರಿಗಳು ಕಾಲ ಹರಣ ಮಾಡಿದರು. ಕಾರಟಗಿ ವಿಶೇಷ ಎಪಿಎಂಸಿಯ ವಿಳಂಬ ನೀತಿ ಮತ್ತು ಹೈಕೋರ್ಟ್ ಆದೇಶಕ್ಕೆ ಮನ್ನಣೆ ನೀಡದ ಕಾರಣಕ್ಕೆ ಪುನಃ ರೈತರು ಕಚೇರಿ ಪೀಠೋಪಕರಣ ಜಪ್ತಿ ಮಾಡಲು ಮನವಿ ಸಲ್ಲಿಸಿ ಆದೇಶ ತಂದಿದ್ದರು. ನಾಲ್ಕು ವಾರಗಳ ಗಡುವು ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಕಾರಟಗಿ ಎಪಿಎಂಸಿ ಕಚೇರಿಯ ಪೀಠೋಪಕರಣಗಳನ್ನು ಸೋಮವಾರ ಜಪ್ತಿ ಮಾಡಲಾಗಿದೆ.ಜಿಲ್ಲಾ ನ್ಯಾಯಾಲಯದ ಸಿಬ್ಬಂದಿ ತಾಜಿದ್ದೀನ್, ರಾಜಶೇಖರ ಹಿರೇಮಠ, ಸೈಯದ್ ಇಮ್ತಿಯಾಜ್, ಮಹಾಬಳೇಶ್ವರ ಅಂಗಡಿ, ವಿಶ್ವನಾಥ ಬಂಗಾಳಿ ಎಪಿಎಂಸಿ ಕಚೇರಿಯಲ್ಲಿನ ಖುರ್ಚಿ, ಟೇಬಲ್, ಕಂಪ್ಯೂಟರ್ ಸೇರಿದಂತೆ ೧೨೫ ಪೀಠೋಪಕರ ಜಪ್ತಿ ಮಾಡಿದ್ದಾರೆ.ರೈತರಪರ ವಕೀಲರಾದ ಎಂ.ಪಿ. ರೇವಡಿ, ಪ್ರವೀಣ್ ಹೂಗಾರ, ಸಂತೋಷ, ಬಸವರಾಜ್ ಫ್ಯಾಟಿಹಾಳ್, ಮಲ್ಲಿಕಾರ್ಜುನ ಜಾಜಿ ಇದ್ದರು.