ಕನ್ನಡಪ್ರಭ ವಾರ್ತೆ ಮದ್ದೂರು
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೃಷಿಗೆ ಒತ್ತು ನೀಡಲು ಭೂ ಅಭಿವೃದ್ಧಿ ಬ್ಯಾಂಕ್ ಆರಂಭಿಸಿದರು ಎಂದು ಕೆಂಪೇಗೌಡ ತಿಳಿಸಿದರು.ಪಟ್ಟಣದ ಪಿಕಾರ್ಡ್ ಬ್ಯಾಂಕ್ ಕಚೇರಿಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 140ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ಇಂದಿಗೂ ರಾಜರ ಆಶಯದಂತೆ ಭೂ ಬ್ಯಾಂಕ್‌ಗಳು, ಪಿಕಾರ್ಡ್ ಬ್ಯಾಂಕ್ ಹೆಸರಿನಲ್ಲಿ ಕೃಷಿ ಚಟುವಟಿಕೆಗಳಿಗೆ ನೆರವಾಗುವ ಕೆಲಸ ನಿರ್ವಹಿಸುತ್ತಿವೆ ಎಂದರು
ರೈತರು ಸಾಲದ ಸುಳಿಗೆ ಸಿಲುಕಿದ ವೇಳೆ ಅವರನ್ನು ರಕ್ಷಿಸಲು ಅಗ್ರಿಕಲ್ಚರಿಸ್ಟ್ ಡಿಬೇಟ್ ರಿಲೀಪ್ ಆಕ್ಟ್ ಜಾರಿಗೆ ತರುವ ಮೂಲಕ ತಮ್ಮೊಳಗಿನ ರೈತಪರ ನಿಲುವು ವ್ಯಕ್ತಪಡಿಸಿದ್ದರು. ಹಳೆ ಮೈಸೂರು ಭಾಗದ ಅಭಿವೃದ್ಧಿಯಲ್ಲಿ ನಾಲ್ವಡಿ ಒಡೆಯರ್ ಪಾತ್ರ ದೂರದೃಷ್ಟಿತ್ವದ್ದು ಮತ್ತು ಇಂದಿನ ಪ್ರಜಾಪ್ರಭುತ್ವ ಕ್ಕೆ ಅವರ ಆಡಳಿತ ಮಾದರಿಯಾದದ್ದು ಎಂದರು.ಈ ವೇಳೆ ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ನ.ಲಿ.ಕೃಷ್ಣ, ಪ್ರಭಾರ ವ್ಯವಸ್ಥಾಪಕಿ ಭಾಗ್ಯ, ಸಿಬ್ಬಂದಿ ಆಶಾ, ಸುನಿಲ್ .ಸಿದ್ದು ಇದ್ದರು.
ಬರಡು ನೆಲವನ್ನು ಬಂಗಾರವಾಗಿಸಿದ ದೊರೆ ನಾಲ್ವಡಿ: ತ್ರಿವೇಣಿಕಿಕ್ಕೇರಿ:ಬರಡು ನೆಲವಾಗಿದ್ದ ಮೈಸೂರು ಪ್ರಾಂತ್ಯವನ್ನು ಹಸಿರುಮಯವಾಗಿಸಿದ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಭಗೀರಥರು ಎಂದು ಸ್ಪಂದನಾ ಫೌಂಡೇಷನ್ ತ್ರಿವೇಣಿ ಹೇಳಿದರು.
ಪಟ್ಟಣದ ಸ್ಪಂದನಾ ಫೌಂಡೇಷನ್ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಯಲ್ಲಿ ಮಾತನಾಡಿ, ರಾಜ ಪ್ರಭುತ್ವದ ಆಳ್ವಿಕೆಯಲ್ಲಿ ರಾಮರಾಜ್ಯದ ಆಡಳಿತ ಕಂಡು ಗಾಂಧೀಜಿ ಅವರು ನಾಲ್ವಡಿಯವರನ್ನು ರಾಜರ್ಷಿ ಎಂದರು.24ನೇ ಯದುವೀರ ದೊರೆಯಾಗಿ ತಮ್ಮ 18ರ ವಯಸ್ಸಿನಲ್ಲಿ ಆಳ್ವಿಕೆ ನಡೆಸಿ ದೇಶದಲ್ಲಿ ಮಾದರಿ ರಾಜಾಡಳಿತ ನೀಡಿದರು. ಕನ್ನಡ ಸುಭದ್ರಗೊಳಿಸಲು ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ, ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಶಿಕ್ಷಣ, ವಿಧವಾ ಹುಡುಗಿಯರಿಗೆ ಸ್ಕಾಲರ್‌ಷಿಪ್, ಬಾಲ್ಯವಿವಾಹ ನಿಷೇಧ, ದೇವದಾಸಿ, ಗೆಜ್ಜೆಪೂಜೆ, ಬಸವಿ ಪದ್ಧತಿ ನಿಷೇಧ ಕಾಯ್ದೆ ಜಾರಿ, ವಿಧವಾ ಮರು ವಿವಾಹ, ಮಹಿಳೆಯರಿಗೆ ಮತದಾನದ ಹಕ್ಕು ಜಾರಿ ತಂದರು ಎಂದರು.ರಾಜರ್ಷಿಯವರ ದೂರದೃಷ್ಟಿಯಿಂದ ಶರಾವತಿ ನದಿಗೆ ಹಿರೇಭಾಸ್ಕರ ಅಣೆಕಟ್ಟು, ವಾಣಿವಿಲಾಸ ಅಣೆಕಟ್ಟು, ಸಹಕಾರಿ ಕಾರ್ಮಿಕ ಪರಿಹಾರ ಕಾಯ್ದೆ, ಉದ್ಯೋಗದಲ್ಲಿ ಮೀಸಲಾತಿ, ಗ್ರಾಮ ನ್ಯಾಯಾಲಯ ಸ್ಥಾಪನೆ, ಮೈಸೂರು ರಾಜ್ಯದ ಹಲವು ರೈಲು ದಾರಿಗಳ ನಿರ್ಮಾಣಗಳು ನಿರ್ಮಾಣವಾಗಿವೆ. ಇವರ ಬದುಕು ಮಕ್ಕಳಿಗೆ ಆದರ್ಶವಾಗಲು ತಿಳಿಹೇಳುವ ಕೆಲಸ ಸಮುದಾಯದಿಂದ ಮೊದಲು ಆಗಬೇಕಿದೆ ಎಂದರು.ಇದೇ ವೇಳೆ ನಾಲ್ವಡಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ಗಿಡಕ್ಕೆ ನೀರೆರೆಯಲಾಯಿತು. ಕವಿತಾ, ಸವಿತಾ ಉಪಸ್ಥಿತರಿದ್ದರು.