ತುಮಕೂರು : ಜಿಲ್ಲೆಯ ಪಾವಗಡ ತಾಲೂಕಿನ ರ್ಯಾ ಪ್ಟೆ ಹಾಗೂ ಹುಸೇನ್‌ಪುರ ಗ್ರಾಮಗಳ ವ್ಯಾಪ್ತಿಯಲ್ಲಿ 400 ಕೆವಿ ಸಾಮರ್ಥ್ಯದ ಸೋಲಾರ್ ವಿದ್ಯುತ್ ಉಪಸ್ಥಾವರ ನಿರ್ಮಾಣಕ್ಕೆ ಭೂಮಿ ನಿಗದಿಪಡಿಸುವ ಪ್ರಕ್ರಿಯೆಗೆ ವೇಗ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಹುಸೇನ್‌ಪುರ ಗ್ರಾಮದಲ್ಲಿ ನಡೆದ ಭೂ-ದರ ನಿರ್ಧರಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೆಪಿಟಿಸಿಎಲ್ ಸಂಸ್ಥೆ ವಿದ್ಯುತ್ ಉಪಸ್ಥಾವರ ನಿರ್ಮಾಣದ ಈ ಮಹತ್ವಾಕಾಂಕ್ಷಿ ಯೋಜನೆಗೆ 150 ಎಕರೆ ಭೂಮಿ ಪಡೆದುಕೊಳ್ಳಲು ನಿರ್ಧಾರ ಕೈಗೊಂಡಿದೆ. ನೇರ ಖರೀದಿ ಆಧಾರದ ಮೇಲೆ ಪ್ರತಿ ಎಕರೆ ಭೂಮಿಗೆ 20 ಲಕ್ಷ ರು.ಗಳ ದರ ನಿಗದಿಪಡಿಸಲಾಗಿದೆ ಎಂದು ಅವರು ಘೋಷಣೆ ಮಾಡಿದರು.
ಪಾವಗಡದ ಸೋಲಾರ್ ವಿದ್ಯುತ್ ಉಪಸ್ಥಾವರಕ್ಕೆ ಭೂ-ದಾನ ನೀಡುತ್ತಿರುವ ರೈತರಿಗೆ ಅಭಿನಂದನೆ ಸಲ್ಲಿಸಿದ ಅವರು ಪಾವಗಡದ ಸೋಲಾರ್ ವಿದ್ಯುತ್ ಉಪಸ್ಥಾವರವು ರಾಜ್ಯದಲ್ಲಿಯೇ ಅತಿ ದೊಡ್ಡ ಸೋಲಾರ್ ವಿದ್ಯುತ್ ಉಪಸ್ಥಾವರವಾಗಿದ್ದು, ಈ ಸ್ಥಾವರ ನಿರ್ಮಾಣಕ್ಕೆ ರೈತರ ಸಹಕಾರ ಪ್ರಶಂಸನೀಯ ಎಂದು ಹೇಳಿದರು. ಶಾಸಕ ಎಚ್.ವಿ. ವೆಂಕಟೇಶ್ ಮಾತನಾಡಿ ಸೋಲಾರ್ ವಿದ್ಯುತ್ ಉಪಸ್ಥಾವರ ನಿರ್ಮಾಣವು ಅಭಿವೃದ್ಧಿಯ ಹೆಜ್ಜೆಯಾಗಿದೆ.
ಮೊದಲಿಗೆ ಸರ್ಕಾರವು ಪ್ರತಿ ಎಕರೆಗೆ 16 ಲಕ್ಷ ರು.ಗಳನ್ನು ನೀಡಲು ನಿರ್ಧರಿಸಿತ್ತು. ಆದರೆ ಜಿಲ್ಲಾಧಿಕಾರಿಗಳ ಸಮನ್ವಯದಿಂದ ಅದನ್ನು 20 ಲಕ್ಷ ರು.ಗಳಿಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು. ರ್ಯಾ ಪ್ಟೆಯ 10 ಸಾವಿರ ಎಕರೆ ಸೋಲಾರ್ ಪಾರ್ಕ್ ನಿರ್ಮಾಣದ ಗುದ್ದಲಿ ಪೂಜೆಗೆ ಮುಖ್ಯಮಂತ್ರಿಗಳು ಭಾಗವಹಿಸುವಂತೆ ಅವರಲ್ಲಿ ವಿನಂತಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಪಿ.ಎಚ್ ರಾಜೇಶ್, ಕೆಎಸ್‌ಪಿಡಿಸಿಎಲ್ ಜನರಲ್ ಮ್ಯಾನೇಜರ್ ಅಮರನಾಥ್, ಮಧುಗಿರಿಯ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಸೀಲ್ದಾರ್ ಡಿ.ಎನ್ ವರದರಾಜು, ಕೆಪಿಟಿಸಿಎಲ್ ಸೂಪರಿಂಟೆಂಡೆಂಟ್ ಇಂಜಿನಿಯರ್ ಶಿವಕುಮಾರ್, ಇಇ ಸೈಯದ್ ಅಹಮದ್, ಹಾಗೂ ಮಹೇಶ್, ಇಓ ಜಾನಕಿ ರಾಮ್ ಹಾಜರಿದ್ದರು.