ಭೂ ಕಬಳಿಕೆ ನಿಷೇಧ ಕಾನೂನು ಅನುಷ್ಠಾನ ಆಡಳಿತ ಯಂತ್ರದ ಜವಾಬ್ದಾರಿ: ನ್ಯಾ. ಪಾಟೀಲ್

KannadaprabhaNewsNetwork | Published : Feb 4, 2024 1:36 AM

ಸಾರಾಂಶ

ಭೂ ಕಬಳಿಕೆ ನಿಷೇಧ ಕಾನೂನು ಜಾರಿಯಲ್ಲಿದೆ, ಅದು, ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ಜವಾಬ್ದಾರಿ ಆಡಳಿತ ಯಂತ್ರದ ಮೇಲಿದೆ ಎಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಅಧ್ಯಕ್ಷ, ನ್ಯಾಯಮೂರ್ತಿ ಬಿ.ಎ. ಪಾಟೀಲ್ ಹೇಳಿದರು.

ಅಕ್ರಮ ದಂಧೆಗೆ ಅಧಿಕಾರಿಗಳು ಸಹಕರಿಸಿದರೆ ಶಿಸ್ತು ಕ್ರಮ । ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ, ಸಂಬಂಧಿಸಿದ ಕಾಯ್ದೆಗಳ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಭೂ ಕಬಳಿಕೆ ನಿಷೇಧ ಕಾನೂನು ಜಾರಿಯಲ್ಲಿದೆ, ಅದು, ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ಜವಾಬ್ದಾರಿ ಆಡಳಿತ ಯಂತ್ರದ ಮೇಲಿದೆ ಎಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಅಧ್ಯಕ್ಷ, ನ್ಯಾಯಮೂರ್ತಿ ಬಿ.ಎ. ಪಾಟೀಲ್ ಹೇಳಿದರು. ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ, ಕಂದಾಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ ಕಂದಾಯ ಇಲಾಖೆ, ಅರಣ್ಯ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಕ್ಕೆ ಬರುತ್ತಿರುವ ಬಹಳಷ್ಟು ಪ್ರಕರಣಗಳಲ್ಲಿ ಮಾಹಿತಿ ಕೊರತೆ ಕಂಡು ಬರುತ್ತಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಕಾರ್ಯಾಗಾರ ಏರ್ಪಡಿಸುವ ಕೆಲಸ ಆಗುತ್ತಿದೆ. ಯಾವುದಾದರೂ ಗೊಂದಲ ಇದ್ದರೆ ಮುಕ್ತವಾಗಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಸೂಕ್ತ ಕಾನೂನು ಪರಿಪಾಲನೆ ಮಾಡಿದರೆ ಮಾತ್ರ ಸರ್ಕಾರಿ ಜಾಗ ಉಳಿಸಿಕೊಳ್ಳಲು ಸಾಧ್ಯ. ಇಲ್ಲದಿದ್ದಲ್ಲಿ ಸರ್ಕಾರಿ ಜಾಗ ಅನಧಿಕೃತವಾಗಿ ಒತ್ತುವರಿಯಾಗಲಿದೆ ಎಂದರು. ಕಂದಾಯ ಇಲಾಖೆ ಇತರೆ ಇಲಾಖೆಗಳಿಗೆ ಮಾತೃ ಇಲಾಖೆ. ಹಾಗಾಗಿ ಅಧಿಕಾರಿಗಳು, ಸಿಬ್ಬಂದಿ ಜವಾಬ್ದಾರಿಯಿಂದ ಕೆಲಸ ಮಾಡದೆ ಹೋದರೆ ಮುಂದೆ ಬಹಳ ಸಮಸ್ಯೆಗಳು ಎದುರಾಗಲಿವೆ. ಸ್ಮಶಾನಕ್ಕೆ ಖಾಸಗಿಯವರಿಂದ ಜಮೀನು ಖರೀದಿ ಮಾಡಬೇಕಾದ ಪರಿಸ್ಥಿತಿ ಎದುರಾಗಲಿದೆ. ಮುಂದೊಂದು ದಿನ ಸಾರ್ವಜನಿಕ ಉಪಯೋಗಕ್ಕೆ ಭೂಮಿ ಕೊರತೆ ಸಂಖ್ಯೆ ಹೆಚ್ಚಳವಾಗಲಿದೆ ಎಂದರು. ಸರಿಯಾದ ರೀತಿಯಲ್ಲಿ ಕಾನೂನು ಅನುಷ್ಠಾನ ಗೊಳಿಸದಿದ್ದರೆ, ಜವಾಬ್ದಾರಿ ನಿರ್ವಹಿಸಲು ವಿಫಲರಾದರೆ ಅಥವಾ ಉದಾಸೀನ ತೋರಿದರೆ ಅಕ್ರಮ ಭೂ ಮಂಜೂರಾತಿ ಪ್ರಕರಣಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಪರಾಧಿಗಳೆಂದು ಪರಿಗಣಿಸಲಾಗುವುದು. ಪತ್ರಿಕೆಗಳಲ್ಲಿ ಪ್ರಕಟ ಸುದ್ದಿಗಳನ್ನು ಆಧಾರವಾಗಿಟ್ಟುಕೊಂಡು ಸೋಮೋಟೋ ಕೇಸ್‌ ದಾಖಲಿಸಿಸಲಾಗಿದೆ ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಭೂಮಿ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ. ಅದರಲ್ಲೂ ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಹೊಂದಿಕೊಂಡಿರುವ ಗ್ರಾಮೀಣ ಭಾಗದಲ್ಲಿ ಲೇಔಟ್ ನಿರ್ಮಾಣ ಮಾಡುವವರ ಸಂಖ್ಯೆ ಹೆಚ್ಚಿದೆ ಎಂದರು. ಖಾಸಗಿಯವರಿಂದ ಜಮೀನು ಖರೀದಿಸಿ ಲೇಔಟ್ ನಿರ್ಮಾಣ ಮಾಡುವುದು ಈ ದಂಧೆ ಮಾಡುವವರಿಗೆ ದುಬಾರಿ ಯಾಗುತ್ತದೆ. ಅದ್ದರಿಂದ ಅವರು ಸರ್ಕಾರಿ ಜಮೀನುಗಳ ಮೇಲೆ ಕಣ್ಣಿಟ್ಟಿರುತ್ತಾರೆ. ಕಡಿಮೆ ಬೆಲೆಯಲ್ಲಿ ಸುಲಭವಾಗಿ ಜಮೀನು ತಮ್ಮ ಹೆಸರಿಗೆ ಮಾಡಿಕೊಳ್ಳಬಹುದು ಎಂಬುದು ಅವರ ಮೂಲ ಉದ್ದೇಶ. ಇಂತಹವರಿಗೆ ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಪ್ರೋತ್ಸಾಹ ನೀಡಿದರೆ ಸರ್ಕಾರಿ ಭೂಮಿ ಬೇರೆಯವರ ಪಾಲಾಗುತ್ತದೆ ಎಂದು ಹೇಳಿದರು. ಖಾಸಗಿಯವರು ಸರ್ಕಾರಿ ಜಾಗ ಒತ್ತುವರಿ ಮಾಡಿದರೆ ಅವರಿಗೆ 3 ವರ್ಷ ಶಿಕ್ಷೆ ಜತೆಗೆ ದಂಡ ವಿಧಿಸಲಾಗುವುದು. ಈ ಪ್ರಕರಣಗಳಲ್ಲಿ ಅಧಿಕಾರಿಗಳು ಶಾಮೀಲಾಗಿದ್ದರೆ ಅವರ ಮೇಲೂ ಕಠಿಣ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ ಎಂದರು. ಹಲವು ಪ್ರಕರಣಗಳಲ್ಲಿ ತಹಸೀಲ್ದಾರ್‌ಗಳು ಸ್ಥಳಕ್ಕೆ ಭೇಟಿ ನೀಡುವುದಿಲ್ಲ, ಗ್ರಾಮ ಲೆಕ್ಕಾಧಿಕಾರಿಗಳು (ವಿ.ಎ.) ಹಾಗೂ ಕಂದಾಯ ನಿರೀಕ್ಷಕರು (ಆರ್.ಐ.) ಕೊಟ್ಟ ವರದಿಯನ್ನೇ ಅನುಪಾಲನೆ ಮಾಡುತ್ತಾರೆ. ನ್ಯಾಯಾಲಯಕ್ಕೂ ಅದೇ ವರದಿ ನೀಡುತ್ತಾರೆ. ತಹಸೀಲ್ದಾರ್‌ ಖುದ್ದಾಗಿ ಸ್ಥಳ ಪರಿಶೀಲನೆ ಮಾಡದೆ ವರದಿ ನೀಡಿದರೆ ಮುಂದಿನ ದಿನಗಳಲ್ಲಿ ಕಂದಾಯ ಇಲಾಖೆ ಹಲವು ಸಮಸ್ಯೆ ಎದುರಿಸಬೇಕಾಗುತ್ತದೆ. ಆಗ, ಅಕ್ರಮ ಭೂಮಿ ಸಕ್ರಮವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನ್ಯಾಯಾಲಯಕ್ಕೆ ಯಾವುದೇ ಪ್ರಕರಣದಲ್ಲಿ ವರದಿ ನೀಡುವ ಮೊದಲು ತಹಸೀಲ್ದಾರ್ ಖುದ್ದಾಗಿ ಸ್ಥಳ ಪರಿಶೀಲನೆ ಮಾಡಬೇಕು ಎಂದು ಕಿವಿಮಾತು ಹೇಳಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಶುಭ ಗೌಡರ್ ಮಾತನಾಡಿ, ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದರೆ ಸಂಬಂಧ ಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ಇದೆ. ಆ ಪ್ರಕರಣದಲ್ಲಿ ಅಧಿಕಾರಿಗಳು ಶಾಮೀಲಾಗಿರುವುದು ಕಂಡು ಬಂದರೆ ಅವರ ಮೇಲೂ ಶಿಸ್ತು ಕ್ರಮಕ್ಕೆ ಅವಕಾಶ ಇದೆ. ಅದ್ದರಿಂದ ಕಂದಾಯ ಇಲಾಖೆ ಅಧಿಕಾರಿಗಳು ನಿಯಮಬದ್ಧವಾಗಿ ಕೆಲಸ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಕಂದಾಯ ಸದಸ್ಯರಾದ ಎಸ್.ಪಾಲಯ್ಯ, ಕೆ.ಎಚ್. ಅಶ್ವತ್ಥನಾರಾಯಣಗೌಡ, ನಿವೃತ್ತ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಎಂ. ಅಣ್ಣಯ್ಯ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಎ.ಎಸ್. ಸೋಮ, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಉಪಸ್ಥಿತರಿದ್ದರು.

--ಬಾಕ್ಸ್---

ಅಕ್ರಮ ಭೂ ಮಂಜೂರು, ಒತ್ತುವರಿ ಸಮಸ್ಯೆ: ಅಧಿಕಾರಿ, ಸಿಬ್ಬಂದಿ ಹೊಣೆ

ಜಿಲ್ಲೆಯಲ್ಲಿ 3 ಲಕ್ಷ ಹೆಕ್ಟೇರ್ ಕೃಷಿ ಜಮೀನು, ಸುಮಾರು 2 ಲಕ್ಷ ಹೆಕ್ಟೇರ್‌ ಸೊಪ್ಪಿನಬೆಟ್ಟ ಸೇರಿದಂತೆ ಇತರೆ ಜಮೀನು ಇದೆ. ಶೇ.27ರಷ್ಟು ಅರಣ್ಯ ಭೂಮಿ ಇದೆ. ಕಾಲಕಾಲಕ್ಕೆ ದಾಖಲೆಗಳನ್ನು ಸೂಕ್ತ ರೀತಿ ನಿರ್ವಹಣೆ ಮಾಡದಿದ್ದರಿಂದ ಕಂದಾಯ ಮತ್ತು ಅರಣ್ಯ ಭೂಮಿ ಗೊಂದಲ ಮುಂದುವರೆದಿದೆ. ಇದರಿಂದ ಜನರಿಗೆ ತುಂಬಾ ತೊಂದರೆಯಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್‌ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾತನಾಡಿದ ಅವರು, ಜಮೀನು ಖರೀದಿ ಹಾಗೂ ಮಂಜೂರಾತಿ ಸಂದರ್ಭದಲ್ಲಿ ಸರಿಯಾದ ರೀತಿಯಲ್ಲಿ ಇಂಡೀಕರಣ ಆಗಿರಬೇಕು. ಇಲ್ಲದೆ ಹೋದರೆ ಮೂಲ ದಾಖಲೆಯಂತೆಯೇ ಆರ್‌ಟಿಸಿ ಮುಂದುವರೆ ಯಲಿದೆ. ಇಂತಹ ಕಡೆಗಳಲ್ಲಿ ಅಕ್ರಮ ಭೂ ಮಂಜೂರು, ಒತ್ತುವರಿ ಸಮಸ್ಯೆ ಎದುರಾಗಲಿದೆ. ಇದಕ್ಕೆ ಕಡಿವಾಣ ಹಾಕುವ ಕೆಲಸ ಕಂದಾಯ ಇಲಾಖೆ ಮಾಡಬೇಕು. ಇಲ್ಲದೆ ಹೋದರೆ ಸಂಬಂಧಪಟ್ಟ ಅಧಿಕಾರಿ ಹಾಗೂ ಸಿಬ್ಬಂದಿ ಹೊಣೆಗಾರ ರನ್ನಾಗಿ ಮಾಡಲು ಕಾನೂನಿನಲ್ಲಿ ಅವಕಾಶ ಇದೆ ಎಂದರು.

3 ಕೆಸಿಕೆಎಂ 1ಚಿಕ್ಕಮಗಳೂರಿನ ಜಿಪಂ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯ್ದೆಗಳ ಕುರಿತು ಕಾರ್ಯಾಗಾರ ನಡೆಯಿತು. ನ್ಯಾ. ಬಿ.ಎ. ಪಾಟೀಲ್‌, ಎಸ್‌.ಪಾಲಯ್ಯ, ಅಶ್ವತ್ಥ ನಾರಾಯಣಗೌಡ, ಡಿಸಿ ಮೀನಾ ನಾಗರಾಜ್‌, ಎ.ಎಂ. ಅಣ್ಣಯ್ಯ ಇದ್ದರು.

Share this article