ಬೆಂಗಳೂರು : ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ 1,200 ಚದರಡಿ ವಿಸ್ತೀರ್ಣ ಮೀರದಂತಹ ನಿವೇಶನಗಳಲ್ಲಿ ನೆಲ ಮತ್ತು 2 ಅಂತಸ್ತು ಅಥವಾ ಸ್ಟಿಲ್ಟ್ ಮತ್ತು 3 ಅಂತಸ್ತಿನ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರದಿಂದ (ಓಸಿ) ವಿನಾಯಿತಿ ನೀಡಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಕಳೆದ ವರ್ಷದಿಂದ ನಂಬಿಕೆ ನಕ್ಷೆ ವ್ಯವಸ್ಥೆ ಜಾರಿ ಮಾಡಲಾಗಿದೆ. ಇದರಡಿ ಆಟೋಮೇಟರ್ ಆನ್ಲೈನ್ ತಂತ್ರಾಂಶದ ಮೂಲಕ 50/80 (4,000 ಚದರಡಿ) ವಿಸ್ತೀರ್ಣದವರೆಗಿನ ಸ್ಥಳದಲ್ಲಿ ನಿರ್ಮಿಸುವ ವಸತಿ ಕಟ್ಟಡಗಳಿಗೆ ಅರ್ಜಿ ಸಲ್ಲಿಸಿದ ದಿನವೇ ಕರಡು ನಕ್ಷೆ ಹಾಗೂ 15 ದಿನಗಳಲ್ಲಿ ಅಂತಿಮ ನಕ್ಷೆ ಮಂಜೂರಾತಿಗೆ ಅವಕಾಶ ಕಲ್ಪಿಸಲಾಗಿದೆ.
ಈ ನಂಬಿಕೆ ನಕ್ಷೆಯನ್ನು ಗಮನದಲ್ಲಿಟ್ಟುಕೊಂಡು ಸಣ್ಣ ಪ್ರಮಾಣದ ನಿವೇಶನಗಳಲ್ಲಿ ನಿರ್ಮಿಸುವ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ ಪಡೆಯುವುದರಿಂದ ವಿನಾಯಿತಿ ನೀಡಲು ಸಹ ಮನವಿ ಬಂದಿತ್ತು.
ಇದರಂತೆ ಆಡಳಿತ ಕಾಯಿದೆ-2024ರ ನಿಯಮ 241(7) ಅಡಿ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ 1,200 ಚದರಡಿ ವಿಸ್ತೀರ್ಣ ಮೀರದಂತಹ ನಿವೇಶನಗಳಲ್ಲಿ ನೆಲ ಮತ್ತು 2 ಅಂತಸ್ತು ಅಥವಾ ಸ್ಟಿಲ್ಟ್ ಮತ್ತು 3 ಅಂತಸ್ತಿನ ಕಟ್ಟಡಗಳಿಗೆ ಓಸಿ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ.
ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ -2024ರ ಅಧ್ಯಾಯ 7ರ ನಿಂಬಂಧನೆಗಳ ಅನ್ವಯ ಕಟ್ಟಡ ಮತ್ತು ನಗರ ಯೋಜನಾ ನಿಯಮಗಳ ನಿಯಂತ್ರಣ ಮತ್ತು ಮೇಲ್ವಿಚಾರಣೆ ವಹಿಸಬೇಕು. ಇದಕ್ಕಾಗಿ ಕಾರ್ಯಪಡೆ ಜತೆಗೆ ದೃಢವಾದ ಆಡಳಿತ ರಚನೆ ಮಾಡುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ನಿರ್ದೇಶನ ನೀಡಿ ನಗರಾಭಿವೃದ್ಧಿ ಇಲಾಖೆಯು ಆದೇಶ ಹೊರಡಿಸಿದೆ.
ಲಕ್ಷಾಂತರ ಮಂದಿಗೆ ಅನುಕೂಲ:
ನಕ್ಷೆ ಮಂಜೂರಾತಿ ಪ್ರಕಾರ ಕಟ್ಟಡ ನಿರ್ಮಾಣ ಮಾಡದೆ ಓಸಿ ಹೊಂದಿಲ್ಲದ ಕಟ್ಟಡಗಳಿಗೆ ನೀರು, ವಿದ್ಯುತ್ ಹಾಗೂ ಒಳಚರಂಡಿ ಸಂಪರ್ಕ ನೀಡದಂತೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿತ್ತು. ಇದರ ಅನ್ವಯ ಕಳೆದ ಆರು ತಿಂಗಳಿಂದ ರಾಜ್ಯದಲ್ಲಿ ನಕ್ಷೆ ಮಂಜೂರಾತಿ ಇಲ್ಲದೆ ನಿರ್ಮಿಸಿರುವ ಕಟ್ಟಡಗಳಿಗೆ ಓಸಿ ನಿರಾಕರಿಸಲಾಗಿತ್ತು. ಪರಿಣಾಮ ವಿದ್ಯುತ್, ನೀರು ಸಂಪರ್ಕವನ್ನೂ ನೀಡಿರಲಿಲ್ಲ. ಇದರಿಂದ ಲಕ್ಷಾಂತರ ಜನರು ಸಮಸ್ಯೆಗೆ ಸಿಲುಕಿದ್ದರು.