ಶಂಕರ ಭಟ್ಟ ತಾರೀಮಕ್ಕಿ
ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಗ್ರಾಪಂ ವ್ಯಾಪ್ತಿಯ ಕಳಚೆಯಲ್ಲಿ ಮತ್ತೆ ಭೂಕುಸಿತ ಉಂಟಾಗಿರುವುದು ಈ ಭಾಗದ ಸಾರ್ವಜನಿಕರಲ್ಲಿ ಆತಂಕಕ್ಕೆಡೆ ಮಾಡಿದೆ.೨೦೨೧ರ ಜು. ೨೧ರಂದು ಭಾರೀ ಮಳೆಗೆ ಕಳಚೆಯ ಗುಡ್ಡ ಕುಸಿದು ಹಲವು ಮನೆ, ತೋಟ, ಗದ್ದೆ ಕೊಚ್ಚಿ ಹೋಗಿದ್ದವು. ಘಟನೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಪುನಃ ಕಳಚೆಯ ಕಣಿವೆಯ ೨ ಪ್ರದೇಶಗಳಲ್ಲಿ ಭೂಮಿ ಕುಸಿಯಲಾರಂಭಿಸಿದೆ. ಇದರಿಂದ ಆ ಪ್ರದೇಶದ ಜನ ತೀವ್ರ ಆತಂಕಕ್ಕೀಡಾಗಿದ್ದಾರೆ. ಕಾಳಿನದಿಯ ಕೊಡಸಳ್ಳಿ ಡ್ಯಾಂನ ಹಿನ್ನೀರಿನ ಮೇಲ್ಭಾಗದ ಕಣಿವೆ ಪ್ರದೇಶದ ಕಳಚೆ ಗ್ರಾಮದಲ್ಲಿ ೭೫ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ.
ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಕರೆತಂದಿದ್ದರು. ಘಟನೆಯನ್ನು ವೀಕ್ಷಿಸಿದ ಮುಖ್ಯಮಂತ್ರಿಗಳು ₹೨೦೦ ಕೋಟಿ ಹಣ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಸ್ಥಳೀಯರು ಹೇಳುವಂತೆ ಒಂದೆರಡು ಕೋಟಿ ರು. ಖರ್ಚು ಮಾಡಿ ರಸ್ತೆ ನಿರ್ಮಿಸಿದ್ದರಲ್ಲದೇ, ಯಾವುದೇ ಪರಿಹಾರ, ಸೌಲಭ್ಯಗಳು ದೊರೆತಿಲ್ಲ ಎನ್ನುತ್ತಾರೆ. ಈಗ ಹಿಂದೆ ಕುಸಿತ ಆದ ಪ್ರದೇಶದಲ್ಲೇ ಪುನಃ ಭೂಮಿ ಕುಸಿಯತೊಡಗಿದೆ. ಇದರಿಂದ ಜನಾರ್ದನ ಹೆಬ್ಬಾರ, ಮಾನಿಗದ್ದೆ ಕುಂಬ್ರಿಯ ಕಮಲಾಕರ ಭಾಗ್ವತ, ಉದಯ ಐತಾಳ ಅವರ ಮನೆ, ಜಮೀನಿನ ಬಳಿ ಕುಸಿಯುವುದಕ್ಕೆ ಪ್ರಾರಂಭವಾಗಿದೆ. ಈ ಪ್ರದೇಶದಲ್ಲಿ ಏನಾದರೂ ಭಾರೀ ಮಳೆ ಬಿದ್ದರೆ ನಿರೀಕ್ಷಿಸಲಾರದಷ್ಟು ಅನಾಹುತ ಸಂಭವಿಸುವ ಸಾಧ್ಯತೆ ಇದೆ.ಸ್ಥಳಾಂತರಕ್ಕೆ ಸೂಚನೆ: ಎಲ್ಲೆಡೆ ಮಳೆಯ ಅನಾಹುತವನ್ನು ಗಮನಿಸಿದ ತಹಸೀಲ್ದಾರ್ ಅಶೋಕ ಭಟ್ಟ ಅವರ ನೇತೃತ್ವದಲ್ಲಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು, ಆತಂಕದಲ್ಲಿರುವ ಜನರಿಗೆ ತಕ್ಷಣದಿಂದ ಸ್ಥಳಾಂತರಗೊಳ್ಳಬೇಕು, ನಿಮ್ಮ ಬಂಧುಗಳ ಮನೆ ಅಥವಾ ಎಲ್ಲಿಯಾದರೂ ಸ್ಥಳಾಂತರವಾಗಬೇಕು, ಇಲ್ಲವಾದರೆ ಕಾಳಜಿ ಕೇಂದ್ರದ ವ್ಯವಸ್ಥೆ ಮಾಡುತ್ತೇವೆ, ಅಲ್ಲಿಯಾದರೂ ಬರಬೇಕೆಂದು ವಿನಂತಿ ಮಾಡಿದ್ದಾರೆ. ಅಲ್ಲದೇ ಕುಸಿತದ ತೀವ್ರ ಆತಂಕದಲ್ಲಿರುವ ಮನೆಗಳಿಗೆ ನೋಟಿಸ್ ಜಾರಿ ಮಾಡಿದ್ದೇವೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.ಹೋರಾಟ ಇಲ್ಲ: ಸುಮಾರು ೪೫೦ ಎಕರೆ ಪ್ರದೇಶದ ಈ ಕಳಚೆ ಊರಿನಲ್ಲಿ ೩೫೦ ಎಕರೆ ಪ್ರದೇಶದ ಜನರು ಬೇರೆಡೆ ಸ್ಥಳಾಂತರಗೊಳ್ಳುವುದಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ. ಅಂದರೆ ಇನ್ನೂ ಶೇ. ೨೦ರಷ್ಟು ಜನರು ಅಫಿಡವಿಟ್ ಸಲ್ಲಿಸಿಲ್ಲ. ಅಲ್ಲಿಯೇ ಇರಬೇಕೆಂಬ ಇಚ್ಛೆ ಹೊಂದಿದಂತಿದೆ. ಈ ಕಾರಣದಿಂದಲೇ ಇಡೀ ಕಳಚೆಯ ಜನರಲ್ಲಿ ಪ್ರಬಲವಾದ ಸಂಘಟನೆಯ ಹೋರಾಟ ಸಾಧ್ಯವಾಗುತ್ತಿಲ್ಲ.ಸರ್ಕಾರದ ನೆರವು ಮರೀಚಿಕೆ: ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದು ಅನಾಹುತವಾದರೂ ಇಲ್ಲಿನ ನಾಗರಿಕರಿಗೆ ಸರ್ಕಾರದ ಸಹಾಯ ಮರೀಚಿಕೆಯಾಗಿಯೇ ಉಳಿದಿದೆ. ಆದರೆ, ೨೦೨೧ರಲ್ಲಿ ಆದ ಘಟನೆಯ ಸಂದರ್ಭದಲ್ಲಿ ಸೋಂದಾ ಸ್ವರ್ಣವಲ್ಲೀ ಮಠ, ಯಲ್ಲಾಪುರ ಟಿಎಂಎಸ್, ಮಾತೃಭೂಮಿ ಪ್ರತಿಷ್ಠಾನ ಸೇರಿದಂತೆ ಹಲವು ಸ್ವಯಂಸೇವಾ ಸಂಸ್ಥೆಗಳು ಸಹಾಯ ಮಾಡಿದ್ದು ಬಿಟ್ಟರೆ ಯಾವುದೇ ಸರ್ಕಾರಿ, ಶಾಸಕರ ಸಹಾಯ ಅಲ್ಲಿನ ಜನರಿಗೆ ಲಭಿಸಿಲ್ಲ. ಅಲ್ಲಿನ ಜನರ ಬೇಡಿಕೆ ಎಂದರೆ ಪುನರ್ವಸತಿ ಬೇಕು, ಪರಿಹಾರವನ್ನೂ ನೀಡಬೇಕು ಎಂಬುದಾಗಿದೆ.ವಿದ್ಯುತ್ ಸಂಪರ್ಕ ಇಲ್ಲ: ಅರಣ್ಯ ಇಲಾಖೆಯಿಂದ ಇಲ್ಲಿನ ೨೦೦ ಮನೆಗಳಿಗೆ ಸೋಲಾರ್ ವಿದ್ಯುತ್ ನೀಡಲಾಗಿದೆ. ಇಲ್ಲಿ ವಿದ್ಯುತ್ ಸಂಪರ್ಕ ಇಲ್ಲದೇ ೧೫ ದಿನವಾಗಿದೆ. ಬಸ್ ಕೂಡಾ ಕಾಂಕ್ರೀಟ್ ರಸ್ತೆಯಿದ್ದರೂ ಕಳಚೆಗೆ ಹೋಗದೇ ಹೆಬ್ಬಾರಕುಂಬ್ರಿವರೆಗೆ ಬರುತ್ತಿತ್ತು. ನಿನ್ನೆಯಿಂದ ಅದು ಕೂಡಾ ನಿಂತಿದೆ. ತಕ್ಷಣ ಪರಿಹಾರವನ್ನಾದರೂ ನೀಡಿ ಜನರ ಸುರಕ್ಷತೆ ದೃಷ್ಟಿಯಿಂದ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಮತ್ತಷ್ಟು ಕುಸಿತ ಸಾಧ್ಯತೆ: ಕಳಚೆಯ ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ ಮಾತನಾಡಿ, ಹೋರಾಟದ ಕುರಿತು ಏನು ಪ್ರಕ್ರಿಯೆ ನಡೆದಿದೆ ಎನ್ನುವುದು ನನ್ನ ಗಮನಕ್ಕಿಲ್ಲ. ಶ್ರೀಮಠದ ನಿರ್ಣಯ ಏನು ಬರುತ್ತದೋ ಹಾಗೆ ನಾವು ನಡೆಯುವುದಕ್ಕೆ ಸಿದ್ಧ ಎಂದಷ್ಟೇ ತಿಳಿಸಿದ್ದಾರೆ. ಅಲ್ಲದೇ ಈರಾಪುರ, ನೆಲೆಪಾಲ ಸಿಸಿ ರಸ್ತೆ ಅಕ್ಕಪಕ್ಕದಲ್ಲಿ ಸಂಪೂರ್ಣ ಕುಸಿದ ಪರಿಣಾಮ ವಾಹನ ಹೋದರೆ ರಸ್ತೆಯೂ ಮತ್ತಷ್ಟು ಕುಸಿಯುವ ಸ್ಥಿತಿ ನಿರ್ಮಾಣಗೊಂಡಿದೆ ಎಂದಿದ್ದಾರೆ.
ಪರಿಹಾರ ಇಲ್ಲ: ಇಂದಿಗೂ ತೀವ್ರ ಆತಂಕದಲ್ಲೇ ನಾವು ಇದ್ದೇವೆ. ಹೆಚ್ಚಿನ ಮಳೆ ಬಂದರೆ ಏನಾದೀತೆಂದು ಹೇಳಲಾಗದು. ₹೩ ಕೋಟಿ ವೆಚ್ಚದಲ್ಲಿ ರಸ್ತೆ ಆಗಿದ್ದು ಬಿಟ್ಟರೆ ಯಾವುದೇ ಪರಿಹಾರ ಇಲ್ಲ ಎಂದು ಕಳಚೆ ಗ್ರಾಮ ಪುನರ್ವಸತಿ ಹೋರಾಟ ಸಮಿತಿಯ ಅಧ್ಯಕ್ಷ ಗಜಾನನ ಭಟ್ಟ ತಿಳಿಸಿದರು.