ಹೊಸಪೇಟೆ: ಭಾಷೆ ಪ್ರತಿಯೊಂದು ಜನಸಮುದಾಯದ ಭಾಗ. ಭಾಷೆ ಕೇವಲ ಸಂವಹನ ವಿಧಾನವಲ್ಲ, ಅದೊಂದು ಆಲೋಚನಾ ಪ್ರಕ್ರಿಯೆ. ಭಾಷೆಯ ಹಿಂದೆ ಮಾನವೀಯ ಸಂಬಂಧಗಳ ಒಂದು ನೈತಿಕ ಹೊಣೆಗಾರಿಕೆ ಇದೆ ಎಂದು ದಾವಣಗೆರೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಸಿ. ದಾದಾಪೀರ್ ನವಿಲೆಹಾಳ್ ತಿಳಿಸಿದರು.
ಕಳೆದ 25 ವರ್ಷಗಳಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳು ಕನ್ನಡವನ್ನು ಸೊರಗಿಸುವ ಕೆಲಸ ಮಾಡಿವೆ. ಇಂದು ಅಚ್ಚ ಕನ್ನಡದ ಬಳಕೆ ಕಡಿಮೆಯಾಗಿದ್ದು, ಹಿಂದಿ, ಇಂಗ್ಲಿಷ್ ಮಿಶ್ರಿತ ಕನ್ನಡದ ಬಳಕೆಯನ್ನು ಕಾಣುತ್ತೇವೆ. ಇದಕ್ಕೆ ಸಾಮಾಜಿಕ ಜಾಲತಾಣಗಳ ಕೊಡುಗೆಯು ಹೇರಳವಾಗಿದೆ. 20 ವರ್ಷಗಳ ಹಿಂದಿನ ಕಾದಂಬರಿಗಳಿಗೂ ಈಗಿನ ಕಾದಂಬರಿಗಳಲ್ಲಿ ಬಳಕೆಯಾಗುತ್ತಿರುವ ಭಾಷೆಗೂ ಬಹಳಷ್ಟು ಭಿನ್ನತೆಯಿದೆ. ಇದರಿಂದಾಗಿ ನೆಲಮೂಲದ ಕಲೆ, ಸಂಸ್ಕೃತಿ, ಜನಪದ, ಪರಂಪರೆಗಳು ಕಣ್ಮರೆಯಾಗುತ್ತಿವೆ. ಕೃಷಿ, ಗುಡಿ ಕೈಗಾರಿಕೆ, ಪರಿಸರ ಮುಂತಾದ ವಿಷಯಗಳ ಕುರಿತು ಅನಕ್ಷರಸ್ಥರಲ್ಲಿರುವಷ್ಟು ಭಾಷಾ ಸಂಪತ್ತು, ವಿದ್ಯಾವಂತರಾದ ನಮ್ಮಲ್ಲಿ ಇಲ್ಲ. ಆದ್ದರಿಂದ ಕನ್ನಡ ಭಾಷೆಯ ಮೂಲ ಸ್ವರೂಪದ ಓದು ಮತ್ತು ಅರ್ಥೈಸುವಿಕೆಯಲ್ಲಿ ಯುವ ಸಮೂಹ ತೊಡಗಿಸಿಕೊಳ್ಳುವುದು ತುಂಬಾ ಮುಖ್ಯ ಎಂದರು.
ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ, ಮಾತೃ ಭಾಷೆಯಲ್ಲಿನ ಪರಿಣತಿಯು ನಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ. ಭಾಷೆ ಎನ್ನುವುದು ನಮ್ಮ ಅಭಿಪ್ರಾಯಗಳನ್ನು ಮತ್ತೊಬ್ಬರಿಗೆ ತಿಳಿಸಲು ಇರುವ ಸಾಧನ. ಮಾತೃಭಾಷೆಯ ಹೊರತಾಗಿ ಬೇರೆ ಭಾಷೆಗಳನ್ನು ವ್ಯವಹಾರಿಕ ಬದುಕಿನಲ್ಲಿ ಬಳಸುವುದು ಸಹಜ. ತಾಯ್ನುಡಿ ಮೇಲೆ ಪ್ರವಾಹಿಸುವಲ್ಲಿ ಹೆಚ್ಚು ಕಡಿಮೆಯಾದರೂ, ಅಂತರ್ಗಾಮಿಯಾಗಿ ಸದಾ ಹರಿಯುತ್ತಿರುತ್ತದೆ. ಎಲ್ಲ ರೀತಿಯ ಕನ್ನಡವು ಕನ್ನಡಿಗರ ಅಸ್ಮಿತೆಯನ್ನು ಸೂಚಿಸುತ್ತದೆ. ಧರ್ಮವನ್ನು ಮೀರಿದ್ದು ಭಾಷೆ. ಇದರ ಬಗ್ಗೆ ಹೆಚ್ಚು ಹೆಚ್ಚು ಚಿಂತನೆಗಳು ನಡೆಯಬೇಕು ಎಂದರು.ಕನ್ನಡ ಭಾಷಾಧ್ಯಯನ ವಿಭಾಗದ ಡಾ. ಪಿ. ಮಹಾದೇವಯ್ಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭಾಗದ ಪ್ರಾಧ್ಯಾಪಕ ಡಾ. ಡಿ. ಪಾಂಡುರಂಗ ಬಾಬು, ಡಾ. ಅಶೋಕಕುಮಾರ ರಂಜೇರೆ ಮತ್ತು ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಅಧ್ಯಾಪಕರು, ಬೋಧಕೇತರ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು ಇದ್ದರು.