ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಮ್ಮೊಳಗಿನ ಅಜ್ಞಾನ, ಅಹಂಕಾರ ತೊರೆದು ಎಲ್ಲರೊಂದಿಗೆ ಸಮನ್ವಯತೆಯ ಬದುಕು ನಡೆಸುವುದು ಹೇಗೆ ಎಂದು ಕಲಿಸಿಕೊಟ್ಟವರು ಪಿ.ಲಂಕೇಶ್ ಎಂದು ಸಾಹಿತಿ ಬಿ.ಚಂದ್ರೇಗೌಡ ಅಭಿಪ್ರಾಯಪಟ್ಟರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕೇಂದ್ರ ಕಾರಾಗೃಹದ ಸಹಯೋಗದಲ್ಲಿ ಗುರುವಾರ ಕಾರಾಗೃಹದಲ್ಲಿ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಮತ್ತು ಪಿ.ಲಂಕೇಶ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಿ.ಲಂಕೇಶ್ ಒಡನಾಟದ ಕುರಿತು ಅವರು ಮಾತನಾಡಿದರು.
ಲಂಕೇಶ್ ಪತ್ರಿಕೆ ಮೂಲಕ ಎಲ್ಲ ಸಮುದಾಯದ ಸೃಜನಶೀಲ ಬರಹಗಾರರು ಅವರವರ ಧರ್ಮ ಸಮುದಾಯಗಳ ಕುರಿತು ಒಳಿತು, ಕೆಡಕುಗಳನ್ನು ಬರೆದು ಸಾರ್ವತ್ರಿಕ ಗಮನಕ್ಕೆ ತರುವ ಕೆಲಸ ಮಾಡಿದರು. ಅನೇಕ ಬದಲಾವಣೆ, ಜಾಗೃತಿ ತರುವಲ್ಲಿ ಲಂಕೇಶ್ ಶ್ರಮಿಸಿದರು ಎಂದು ಹೇಳಿದರು.ಕವಯಿತ್ರಿ ಅಕ್ಷತಾ ಹುಂಚದಕಟ್ಟೆ ಅವರು "ಲಂಕೇಶ್ ಕೃತಿಗಳಲ್ಲಿ ಮಹಿಳೆ ಮತ್ತು ಮಾನವೀಯತೆ " ಕುರಿತು ಮಾತನಾಡಿ, ಲಂಕೇಶ್ ಈ ಕಾರ್ಯಕ್ರಮಕ್ಕೆ ಬಂದಿದ್ದರೆ ನಿಮ್ಮ ಕಥೆ ಕೇಳಿ, ಅದನ್ನು ಬರೆಯಲು ಪ್ರಯತ್ನ ಮಾಡುತ್ತಿದ್ದರು. ತನ್ನ ಜಾತಿಯವರನ್ನು ದೂರವಿಟ್ಟು, ಮಹಿಳೆಯರಿಗೆ ಹೆಚ್ಚು ಅವಕಾಶ ನೀಡುವ ಮೂಲಕ ಲಂಕೇಶ್ ಪತ್ರಿಕೆ ಅವರ ಅಭಿವ್ಯಕ್ತಿಗೆ ವೇದಿಕೆಯಾಗಿತ್ತು ಎಂದರು.
ರಂಗಕರ್ಮಿ ಡಾ. ಜಿ.ಆರ್. ಲವ ಮಾತನಾಡಿ, ಲಂಕೇಶ್ ಅವರ ನಾಟಕಗಳು ರೋಗವನ್ನು ವಾಸಿ ಮಾಡುವ ಶಕ್ತಿ ಪಡೆದಿತ್ತು. ಸಮಕಾಲೀನ ರಾಜಕಾರಣವನ್ನು ತಿವಿದು, ಜನರನ್ನು ಎಚ್ಚರಿಸುತ್ತಿದ್ದರು ಎಂದು ವಿವರಿಸಿದರು.ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಿ.ಮಂಜುನಾಥ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಡಾ. ಅನಿತಾ ಆರ್. ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಗಿರೀಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜೈಲರ್ ಕಟ್ಟೀಮನಿ, ಕಸಾಪ ಪದಾಧಿಕಾರಿಗಳಾದ ಡಾ. ಕೆ.ಜಿ. ವೆಂಕಟೇಶ್, ಭೈರಾಪುರ ಶಿವಪ್ಪಗೌಡ ಉಪಸ್ಥಿತರಿದ್ದರು.
ವಿಶ್ವ ಮಹಿಳಾ ದಿನಾಚರಣೆ ಅಂವಾಗಿ ಡಾ.ಅನಿತಾ ಮತ್ತು ಅಕ್ಷತಾ ಹುಂಚದಕಟ್ಟೆ ಅವರನ್ನು ಸನ್ಮಾನಿಸಲಾಯಿತು. ಗಾಯಕಿ ಬಿ.ಟಿ. ಅಂಬಿಕಾ ಭಾವಗೀತೆ ಹಾಡಿದರು. ತಿಮ್ಮಪ್ಪ ಪ್ರಾರ್ಥಸಿ, ಲೀಲಾ ಸ್ವಾಗತಿಸಿ, ಗೋಪಾಲಕೃಷ್ಣ ನಿರೂಪಿಸಿದರು.- - - -7ಎಸ್‌ಎಂಜಿಕೆಪಿ07:
ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಮತ್ತು ಪಿ. ಲಂಕೇಶ್ ಅವರ ಜನ್ಮದಿನಾಚರಣೆ ಆಚರಿಸಲಾಯಿತು.