ಕಾರಟಗಿ: ಪಲ್ಸ್ ಪೊಲಿಯೋ ಲಸಿಕೆಗೆ ರೋಗ ನಿರೋಧಕ ಶಕ್ತಿ ಇದೆ. ರಾಜ್ಯ ಸರ್ಕಾರ ಉಚಿತ ಲಸಿಕೆ ಪೂರೈಕೆ ಮಾಡಿದ್ದು, ಎಲ್ಲರೂ ತಮ್ಮ ಐದು ವರ್ಷದೊಳಗಿನ ಮಕ್ಕಳಿಗೆ ಹಾಕಿಸಬೇಕೆಂದು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಕುಂತಲಾ ಪಾಟೀಲ್ ಹೇಳಿದರು.ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಪಲ್ಸ್ ಪೊಲಿಯೋ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ರಾಜ್ಯ ಸರ್ಕಾರ ಮಾ.೬ರವರೆಗೆ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಲು ಯೋಜನೆ ರೂಪಿಸಿದೆ. ಈ ನಿಟ್ಟಿನಲ್ಲಿ ಕಾರಟಗಿ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯ ಕಾರಟಗಿ ಪಟ್ಟಣ ಸೇರಿದಂತೆ ಜೂರಟಗಿ, ಬೇವಿನಾಳ, ಸಾಲುಂಚಿಮರ ಮತ್ತು ಚೆಳ್ಳೂರು ಗ್ರಾಮಗಳ ವ್ಯಾಪ್ತಿಯಲ್ಲಿ ಒಟ್ಟು ೩೮ ತಂಡಗಳನ್ನು ರಚಿಸಿ ಎಲ್ಲ ಮನೆ ಮನೆಗಳಿಗೆ ಹೋಗಿ ಐದು ವರ್ಷದ ಮಗುವಿಗೆ ಪಲ್ಸ್ ಪೊಲಿಯೋ ಲಸಿಕೆ ಹಾಕಲಾಗುತ್ತದೆ ಎಂದರು.ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ೫೨,೭೮೯ ಅಂದಾಜು ಜನಸಂಖ್ಯೆ ಇದ್ದು, ಆ ಪೈಕಿ ೬೪೧೨ ಐದು ವರ್ಷದೊಳಗಿನ ಮಕ್ಕಳಿದ್ದಾರೆ. ಒಟ್ಟು ೧೩,೫೨೭ ಮನೆಗಳಿದ್ದು, ಮೂರು ದಿನಗಳ ಕಾಲ ಈ ಮನೆಗಳಲ್ಲಿನ ಮಕ್ಕಳಿಗೆ ಲಸಿಕೆ ಹಾಕಿಸುವ ಗುರಿ ಹೊಂದಲಾಗಿದೆ. ಅದಕ್ಕಾಗಿ ಒಟ್ಟು ೩೮ ಬೂತ್‌ಗಳನ್ನು ರಚಿಸಲಾಗಿದೆ ಎಂದರು.
ಈ ವೇಳೆ ಮಕ್ಕಳ ತಜ್ಞರಾದ ಡಾ.ವೀರಭದ್ರಪ್ಪ, ಡಾ.ಅರ್ಪಿತಾ ಲೋಬೋ, ಡಾ.ನಾಗರಾಜ್, ರಮೇಶ ಇಲ್ಲೂರು ಸೇರಿದಂತೆ ಇತರರು ಇದ್ದರು.ಈಳಿಗನೂರು:ಯಾವುದೇ ಮಗುವು ಪೊಲಿಯೋ ಲಸಿಕೆಯಿಂದ ವಂಚಿತವಾಗಬಾರದು ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಶಿವರಾಜ್ ಪಾಟೀಲ್ ಹೇಳಿದರು.ತಾಲೂಕಿನ ಈಳಿಗನೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾಧಿಕಾರಿ ಸರಸ್ವತಿ, ಅಂಗನವಾಡಿ ಕಾರ್ಯಕರ್ತರಾದ ಹುಲಿಗೆಮ್ಮ, ವಿದ್ಯಾ, ಅಕ್ಕಮಹಾದೇವಿ, ಆಶಾ ಕಾರ್ಯಕರ್ತರು ದ್ರಾಕ್ಷಾಯಣಿ, ಬಸಲಿಂಗಮ್ಮ, ಮುಖಂಡರಾದ ಗಿಡ್ಡಪ್ಪ, ದೇವರಾಜ, ಮಾರುತಿ ಇದ್ದರು.