ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳು

KannadaprabhaNewsNetwork | Published : May 17, 2024 12:32 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನಗರ ಸೇರಿದಂತೆ ಹಲವೆಡೆ ಕ್ರಿಕೆಟ್ ಬೆಟ್ಟಿಂಗ್ ಸೇರಿದಂತೆ ಬೇರೆ ಬೇರೆ ಬೆಟ್ಟಿಂಗ್ ದಂಧೆಗಳು, ಅಪರಾಧ ಕೃತ್ಯಗಳು ನಡೆಯುತ್ತಿವೆ. ಆದರೆ, ಪೊಲೀಸ್ ಇಲಾಖೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರ ಸೇರಿದಂತೆ ಹಲವೆಡೆ ಕ್ರಿಕೆಟ್ ಬೆಟ್ಟಿಂಗ್ ಸೇರಿದಂತೆ ಬೇರೆ ಬೇರೆ ಬೆಟ್ಟಿಂಗ್ ದಂಧೆಗಳು, ಅಪರಾಧ ಕೃತ್ಯಗಳು ನಡೆಯುತ್ತಿವೆ. ಆದರೆ, ಪೊಲೀಸ್ ಇಲಾಖೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರ ಸೇರಿದಂತೆ ಹಲವಡೆ ಕ್ರಿಕೆಟ್ ಬೆಟ್ಟಿಂಗ್ ಸೇರಿದಂತೆ ಬೇರೆ ಬೇರೆ ಬೆಟ್ಟಿಂಗ್ ದಂಧೆಗಳು, ಅಪರಾಧ ಕೃತ್ಯಗಳು ನಡೆಯುತ್ತಿವೆ. ಇದರಿಂದಾಗಿ ಹಲವಾರು ಪ್ರತಿಷ್ಠಿತ ವ್ಯಕ್ತಿಗಳು ಹಾಳಾಗಿದ್ದಾರೆ. ಈ ದಂಧೆಯಲ್ಲಿ ಕೆಲವು ರಾಜಕೀಯ ಪಕ್ಷದ ಧುರೀಣರು ಇದ್ದು, ಪೊಲೀಸರು ಸಹ ಅವರಿಗೆ ಸಾಥ್ ಕೊಡುತ್ತಿದ್ದಾರೆ‌ ಎಂದು ದೂರಿದರು.

ಈ ದಂಧೆಯ ಬಗ್ಗೆ ಹಿಂದೊಮ್ಮೆ ನಾನು ಧ್ವನಿ ಎತ್ತಿದ್ದಾಗ ಆಗ ಕಡಿವಾಣ ಬಿದ್ದಿತ್ತು. ಈಗ ಮತ್ತೆ ಅವ್ಯಾಹತವಾಗಿ ನಡೆಯುತ್ತಿದೆ. ಹಲವು ಅಪರಾಧ ಪ್ರಕರಣಗಳು, ಕೊಲೆಗಳು, ನಡು ರಸ್ತೆಯಲ್ಲೇ ಚಾಕು ಚುಚ್ಚುವ ಕೃತ್ಯ ಎಸಗುವವರಿಗೆ ಯಾವುದೇ ಭಯವಿಲ್ಲದೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ತಕ್ಷಣ ಇದಕ್ಕೆಲ್ಲ ಬ್ರೇಕ್ ಹಾಕಬೇಕು ಎಂದು ಪೊಲೀಸ್ ಇಲಾಖೆಗೆ ಒತ್ತಾಯಿಸಿದರು.

ಹೆಚ್ಚಾಗಿದೆ ಭೂ ಹಗರಣ:

ನಗರದಲ್ಲಿ ಹಾಗೂ ನಗರದ ಸುತ್ತಮುತ್ತಲಿನ ಹಲವು ಅಮಾಯಕರ ಆಸ್ತಿಗಳನ್ನು ಕೊಳ್ಳೆ ಹೊಡೆಯಲಾಗಿದ್ದು, ಭೂಗಳ್ಳರು ಬಹಳಷ್ಟು ಹಗರಣ ಮಾಡಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ, ಆರ್.ಅಶೋಕ ಕಂದಾಯ ಮಂತ್ರಿಗಳಾಗಿದ್ದಾಗ ಈ ಪ್ರಕರಣಗಳನ್ನು ಸಿಒಡಿಗೆ ವಹಿಸಬೇಕು ಎಂದು ನಾನು ಪತ್ರ ಬರೆದಿದ್ದೆ. ಆ ವೇಳೆ ಇದು ನಿಂತು ಹೋಗಿದ್ದು, ಇದೀಗ ಮತ್ತೆ ಆರಂಭವಾಗಿದೆ. ಯಾರದ್ದೋ ಆಸ್ತಿಯ ನಕಲಿ ದಾಖಲೆಗಳನ್ನು ಸೃಷ್ಟಿಸಿ ಇನ್ಯಾರಿಗೂ ಮೋಸದಿಂದ ಮಾರಾಟ ಮಾಡುವ ದೊಡ್ಡ ಜಾಲ ವಿಜಯಪುರದಲ್ಲಿದೆ. ಬೆಳಗ್ಗೆ ಏಳುವಷ್ಟರಲ್ಲಿ ನಮ್ಮ ಆಸ್ತಿ ನಮ್ಮ ಹೆಸರಿನಿಂದ ಇರುತ್ತದೊ ಇಲ್ಲವೋ ಎಂಬ ಭಯ ಜನರಿಗೆ ಆಗಿದೆ ಎಂದು ಹೇಳಿದರು.

ದೊಡ್ಡ ಜಾಲ ಇದೆ:

ಈ ಭೂ ಮಾಫಿಯಾದಲ್ಲಿ ಬಾಂಡ್ ರೈಟರ್, ತಹಸೀಲ್ದಾರ್ ಕಚೇರಿ, ಆಧಾರ್ ಕಾರ್ಡ್ ಕೊಡುವವರು, ಕಂದಾಯ ಇಲಾಖೆ, ಸಬ್‌ ರಿಜಿಸ್ಟ್ರಾರ್ ಕಚೇರಿಗಳು ಶಾಮೀಲಾಗಿದ್ದು, ಇದರಲ್ಲಿ ದೊಡ್ಡ ಜಾಲವೇ ಇದೆ. ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಕಳೆದ 9 ವರ್ಷಗಳಿಂದ ಒಬ್ಬರೇ ಅಧಿಕಾರಿ ಕರ್ತವ್ಯ ನಿರ್ವಹಿಸುತ್ತಾರೆ. ಅದನ್ನು ಪ್ರಶ್ನಿಸಿ ನಾನು ಪತ್ರ ಬರೆದಿದ್ದ ವೇಳೆ ಅವರನ್ನು ಆರು ತಿಂಗಳವರೆಗೆ ಮಾತ್ರ ವರ್ಗಾವಣೆ ಮಾಡಿದ್ದರು ಎಂದರು.

ಆಸ್ತಿ ಹೊಂದಿದವರಲ್ಲಿ ಯಾರು ಊರಲ್ಲಿ ಇರುವುದಿಲ್ಲವೋ ಅಂತಹದ್ದೇ ವಯಸ್ಸಿನ ಗಂಡು, ಹೆಣ್ಣು ಮಕ್ಕಳ ಫೋಟೋ, ನಕಲಿ ಆಧಾರ್‌ ಕಾರ್ಡ್ ತಯಾರಿಸಿ, ಅವರ ಆಸ್ತಿಗಳನ್ನು ಬೇರೆಯವರಿಗೆ ಮಾರಾಟ ಮಾಡುವ ದಂಧೆಯ ಮೂಲಕ ಅಮಾಯಕರಿಗೆ ಮೋಸ ಮಾಡುತ್ತಿದ್ದಾರೆ. ಸುಮಾರು 200 ರಿಂದ 300 ಇಂತಹ ಪ್ರಕರಣಗಳಾಗಿವೆ. ಅದರಲ್ಲಿ ಕೆಲವು ಆದರ್ಶನಗರ, ಜಲನಗರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿವೆ ಎಂದು ಮಾಹಿತಿ ಹಂಚಿಕೊಂಡರು.

ಸಿಒಡಿ ತನಿಖೆಗೆ ಆಗ್ರಹ:

ನಾನು ತಕ್ಷಣವೇ ಈ ಕುರಿತು ಸಿಎಂ, ಕಂದಾಯ ಸಚಿವರಿಗೆ ಪತ್ರ ಬರೆದು ಈ ಪ್ರಕರಣವನ್ನು ಸಿಒಡಿಗೆ ಕೊಡಬೇಕು ಎಂದು ಒತ್ತಾಯ ಮಾಡುತ್ತೇನೆ. ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಈ ಕುರಿತು ಕ್ರಮ ಕೈಗೊಳ್ಳಬೇಕು. ಒಂದು ತಿಂಗಳಿನಲ್ಲಿ ಸಿಓಡಿಗೆ ಕೊಡದಿದ್ದರೆ ನೊಂದವರ ಜೊತೆಗೂಡಿ ನಾನು ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಸರ್ಕಾರ ಸ್ಪಂದಿಸದಿದ್ದರೆ ಬಾಧಿತರೊಂದಿಗೆ ಸೇರಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

----

ಕೋಟ್‌

ಮಧ್ಯಮ ವರ್ಗದವರು ಒಂದು ಪ್ಲಾಟ್ ತೆಗೆದುಕೊಳ್ಳಲು ಜೀವನವೇ ಸವೆಸಿರುತ್ತಾರೆ. ಅನ್ಯಾಯಕ್ಕೊಳಗಾದ ಭೂ ಮಾಲೀಕರಿಗೆ, ಮಧ್ಯಮ ವರ್ಗದವರಿಗೆ ಅವರ ಜಮೀನು ಮತ್ತೆ ಅವರಿಗೆ ಸಿಗಬೇಕು. ಹಾಗಾಗಿ ಈ ಪ್ರಕರಣಗಳು ಇತ್ಯರ್ಥ ಆಗುವವರೆಗೆ ನಾನು ಎಲ್ಲ ಹಂತದ ಹೋರಾಟಗಳನ್ನು ಮಾಡುತ್ತೇನೆ.

-ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾಜಿ ಸಚಿವ

Share this article