ಕಾನೂನು ವಿದ್ಯಾರ್ಥಿಗಳು ಭಾಷಾ ಪ್ರಾವಿಣ್ಯತೆ ಬೆಳೆಸಿಕೊಳ್ಳಿ

KannadaprabhaNewsNetwork | Published : Jul 29, 2024 12:49 AM

ಸಾರಾಂಶ

ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ವ್ಯಾಜ್ಯಗಳನ್ನು ಬಗೆಹರಿಸಲು ನ್ಯಾಯಾಲಯದ ಪ್ರಕ್ರಿಯೆಗಳನ್ನು ಮಾತ್ರ ಅವಲಂಬಿಸದೆ ಸಂಧಾನ ಮತ್ತು ಮಧ್ಯಸ್ಥಿಕೆಯ ಮುಖಾಂತರ ನ್ಯಾಯಾಲಯಗಳಲ್ಲಿ ಬಾಕಿ ಇರುವ 5 ಕೋಟಿಗಿಂತಲೂ ಹೆಚ್ಚಿನ ಪ್ರಕರಣಗಳನ್ನು ಬಗೆಹರಿಸಬೇಕು.

ಹುಬ್ಬಳ್ಳಿ:

ಕಾನೂನು ವಿದ್ಯಾರ್ಥಿಗಳು ಹಾಗೂ ವಕೀಲರು ಭಾಷಾ ಪ್ರಾವಿಣ್ಯತೆ ಬೆಳೆಸಿಕೊಳ್ಳಬೇಕು ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎ.ಎಸ್‌. ಪಾಚ್ಛಾಪುರೆ ಹೇಳಿದರು.

ಅವರು ಇಲ್ಲಿನ ಜಿ.ಕೆ. ಕಾನೂನು ಮಹಾವಿದ್ಯಾಲಯದಲ್ಲಿ ಭಾನುವಾರ ಸಂಜೆ ಜರುಗಿದ ದ್ವಿತೀಯ ರಾಷ್ಟ್ರೀಯ ಸ೦ಧಾನ ಸ್ಪರ್ಧೆಯ ಸಮಾರೋಪದಲ್ಲಿ ಪಾಲ್ಗೊಂಡು ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ವ್ಯಾಜ್ಯಗಳನ್ನು ಬಗೆಹರಿಸಲು ನ್ಯಾಯಾಲಯದ ಪ್ರಕ್ರಿಯೆಗಳನ್ನು ಮಾತ್ರ ಅವಲಂಬಿಸದೆ ಸಂಧಾನ ಮತ್ತು ಮಧ್ಯಸ್ಥಿಕೆಯ ಮುಖಾಂತರ ನ್ಯಾಯಾಲಯಗಳಲ್ಲಿ ಬಾಕಿ ಇರುವ 5 ಕೋಟಿಗಿಂತಲೂ ಹೆಚ್ಚಿನ ಪ್ರಕರಣಗಳನ್ನು ಬಗೆಹರಿಸಲು ಸಲಹೆ ನೀಡಿದರು. ಕಾನೂನು ವಿದ್ಯಾರ್ಥಿಗಳು ಮತ್ತು ವಕೀಲರು ಭಾಷಾ ಪ್ರಾವಿಣ್ಯತೆ ಪಡೆದು ಸಂಧಾನ ಪ್ರಕ್ರಿಯೆಯಲ್ಲಿ ನೈಪುಣ್ಯತೆ ಗಳಿಸಿ ಸಮಾಜದಲ್ಲಿ ಶಾಂತಿಯುತ ವಾತಾವರಣ ನಿರ್ಮಿಸಲು ಕರೆ ನೀಡಿದರು.

ಹುಬ್ಬಳ್ಳಿಯ ರಾಜ್ಯ ಕಾನೂನು ವಿವಿಯ ಕಾನೂನು ವಿಭಾಗದ ನಿವೃತ್ತ ಡೀನ್‌ ಪ್ರೊ. ಜಿ.ಬಿ. ಪಾಟೀಲ ಹಾಗೂ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎಂ.ಐ. ಶಿಗ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು. ಬೆಂಗಳೂರಿನ ಕೆಎಲ್‌ಇ ಕಾನೂನು ಮಹಾವಿದ್ಯಾಲಯ ಪ್ರಾಂಶುಪಾಲ ಹಾಗೂ ಕೆಎಲ್‌ಇ ಕಾನೂನು ಅಕಾಡೆಮಿ ಅಧ್ಯಕ್ಷ ಪ್ರೊ. ಜೆ.ಎಂ. ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸಿದ್ದರು. ಈ ಸ್ಪರ್ಧೆಯಲ್ಲಿ ವಿವಿಧ ಕಾನೂನು ಕಾಲೇಜುಗಳ 24 ತಂಡಗಳು ಭಾಗವಹಿಸಿದ್ದವು. ಮೈಸೂರಿನ ಜೆಎಸ್‌ಎಸ್‌ ಕಾನೂನು ಕಾಲೇಜು, ಪ್ರಥಮ ಸ್ಥಾನ ಮತ್ತು ಪ್ರಾಥಮಿಕ ಸುತ್ತಿನಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ತಂಡ ಪ್ರಶಸ್ತಿ ಪಡೆದರೆ. ಚಿಕ್ಕೋಡಿಯ ಕೆಎಲ್‌ಇ ಸಂಸ್ಥೆಯ ಕಾನೂನು ಕಾಲೇಜು ದ್ವಿತೀಯ ಸ್ಥಾನ ಪಡೆದುಕೊಂಡಿತು. ಮೈಸೂರಿನ ಜೆಎಸ್‌ಎಸ್‌ ಕಾನೂನು ಕಾಲೇಜಿನ ಆರ್.‌ಕೆ. ಪೂಜಾ, ಅತ್ಯುತ್ತಮ ಸಮಾಲೋಚಕ ಪ್ರಶಸ್ತಿ ಮತ್ತು ನವ ಮುಂಬೈನ ಕೆಎಲ್‌ಇ ಸಂಸ್ಥೆಯ ಕಾನೂನು ಕಾಲೇಜಿನ ಪೂಜಾ ಶರ್ಮಾ ಸ್ಪಿರಿಟ್‌ ಆಪ್‌ ಜಿ.ಕೆ.ಎಲ್.ಸಿ. ರಾಷ್ಟ್ರೀಯ ಸಂಧಾನ ಸ್ಪರ್ಧೆ ಪ್ರಶಸ್ತಿ ಪಡೆದುಕೊಂಡರು. ದ್ವಿತೀಯ ಸುತ್ತಿನಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರಶಸ್ತಿಯನ್ನು ಸೆಂಟ ಜೋಸೆಫ್‌ ಕಾನೂನು ಕಾಲೇಜು ಪಡೆದುಕೊಂಡಿತು.

ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳಿಂದ ಆಗಮಿಸಿದ ನಿರ್ಣಾಯಕರು, ಹು-ಧಾ ವಕೀಲರು ಹಾಗೂ ಕಾಲೇಜಿನ ಎಲ್ಲ ಸಿಬ್ಬ೦ದಿಗಳು ಹಾಗೂ ಸ್ಪರ್ಧಾಳುಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಜ್ಜಾನೇಶ್ವರ ಚೌರಿ ಸ್ವಾಗತಿಸಿ, ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಸಂಜೀವ ಹುಳ್ಳೂರ ವ೦ದಿಸಿದರು.

Share this article