ಆಧುನಿಕ ಸವಾಲು ಎದುರಿಸಲು ಸಮರ್ಥರಾಗಿ ಕಾನೂನು ವಿದ್ಯಾರ್ಥಿಗಳಿಗೆ ನ್ಯಾ. ಮುರಳೀಕೃಷ್ಣ ಕರೆ

KannadaprabhaNewsNetwork | Published : Dec 15, 2024 2:02 AM

ಸಾರಾಂಶ

ಟಿ.ಎಂ.ಎ. ಪೈ ಸಭಾಂಗಣದಲ್ಲಿ ಶನಿವಾರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಎರಡು ದಿನಗಳ ಸುವರ್ಣ ಮಹೋತ್ಸವದ ಸಂಭ್ರಮ ‘ಸುವರ್ಣ ಪಥ’ ಹಾಗೂ ಸ್ಥಾಪಕರ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಆಧುನಿಕ ಸವಾಲುಗಳು ಕಾನೂನಿನ ವ್ಯಾಖ್ಯಾನದಲ್ಲಿಯೂ ಬಹಳಷ್ಟು ಬದಲಾವಣೆಗೆ ಕಾರಣವಾಗಿದೆ. ಕಾನೂನು ವಿದ್ಯಾರ್ಥಿಗಳು ಈ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ತಮ್ಮ ಶಿಕ್ಷಣವನ್ನು ಕೇಂದ್ರೀಕರಿಸಬೇಕು ಎಂದು ಕೇರಳ ಹೈಕೋರ್ಟ್‌ ನ್ಯಾಯಾಧೀಶ, ಮಂಗಳೂರು ಎಸ್‌.ಡಿ.ಎಂ. ಕಾನೂನು ಕಾಲೇಜಿನ ಹಳೆ ವಿದ್ಯಾರ್ಥಿ ನ್ಯಾ. ಮುರಳೀಕೃಷ್ಣ ಕರೆ ನೀಡಿದ್ದಾರೆ.ನಗರದ ಟಿ.ಎಂ.ಎ. ಪೈ ಸಭಾಂಗಣದಲ್ಲಿ ಶನಿವಾರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಎರಡು ದಿನಗಳ ಸುವರ್ಣ ಮಹೋತ್ಸವದ ಸಂಭ್ರಮ ‘ಸುವರ್ಣ ಪಥ’ ಹಾಗೂ ಸ್ಥಾಪಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸುಮಾರು 25 ವರ್ಷಗಳ ಹಿಂದೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿಯಾಗಿದ್ದ ವೇಳೆ ವಿದ್ಯುತ್‌ ಸಂಪರ್ಕದ ಕೊರತೆ, ನೀರಿನ ಸಮಸ್ಯೆ ಮೊದಲಾದ ಮೂಲಭೂತ ಸಮಸ್ಯೆಗಳ ಬಗ್ಗೆ ನ್ಯಾಯಕ್ಕಾಗಿ ಜನರ ಬೇಡಿಕೆಗಳನ್ನು ನೋಡುತ್ತಿದ್ದೆವು. ಆದರೆ ಈಗ ಬದಲಾದ ಕಾಲಘಟ್ಟದಲ್ಲಿ ಜನರ ಸಮಸ್ಯೆಗಳೂ ಬದಲಾಗಿವೆ. ಸೈಬರ್‌ ಕ್ರೈಂ, ಹಣದ ಸಮಸ್ಯೆ ಜನರನ್ನು ಬಹುವಾಗಿ ಕಾಡುತ್ತಿದೆ. ಆಧುನಿಕ ತಂತ್ರಜ್ಞಾನದ ಪರಿಣಾಮವಾಗಿ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ನ್ಯಾಯ ಒದಗಿಸುವ ಸವಾಲು ನ್ಯಾಯಾಂಗದ ಮುಂದಿದೆ. ಈ ನಿಟ್ಟಿನಲ್ಲಿ ಕಾನೂನು ವಿದ್ಯಾರ್ಥಿಗಳು ತಮ್ಮನ್ನು ತಯಾರುಗೊಳಿಸಬೇಕು. ಜನಸಾಮಾನ್ಯರಿಗೂ ನ್ಯಾಯ ಸಿಗುವಂತಾಗಬೇಕು ಎಂದು ಅವರು ಹೇಳಿದರು.

ಪ್ರಜಾಪ್ರಭುತ್ವದ ಅಡಿಪಾಯಗಳಲ್ಲಿ ಒಂದಾದ ನ್ಯಾಯಾಂಗ ವ್ಯವಸ್ಥೆ ಸಂವಿಧಾನದ ಚೌಕಟ್ಟಿನಿಂದ ನಿಂಯತ್ರಿಸಲ್ಪಟ್ಟಿದೆ. ಅಂತಹ ಮಹತ್ತರವಾದ ಸಂವಿಧಾನದಿಂದಾಗಿ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸವೂ ದೃಢವಾಗಿದೆ ಎಂದರು.

ಕಾನೂನಿಗೂ ಎಐ ಸವಾಲು:

ಸಮಾರಂಭದ ಅಧ್ಯಕ್ಷತೆ ವಹಿಸಿದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಸ್ಥಾಪಕ, ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮಾತನಾಡಿ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ(ಎಐ) ದಾಪುಗಾಲು ಇಡುತ್ತಿರುವ ಇಂದಿನ ದಿನಗಳಲ್ಲಿ ಅವುಗಳಿಂದ ಉಂಟಾಗುವ ತೊಂದರೆನ್ನು ಎದುರಿಸುವುದೂ ದೊಡ್ಡ ಸವಾಲು ಆಗಲಿದೆ. ಕಾನೂನು ಶಿಕ್ಷಣ ಇನ್ನಷ್ಟು ಶಕ್ತಿಯುತವಾಗಬೇಕು. ಅದಕ್ಕಾಗಿ ಈಗಿನ ಯುವ ಪೀಳಿಗೆ ಕಾನೂನಿನ ಬಗ್ಗೆ ಹೆಚ್ಚಿನ ಜ್ಞಾನವಂತರಾಗಬೇಕು. ಸಮಾಜದಲ್ಲಿ ಸ್ಥಾನ, ಅಂತಸ್ತು ಬದಲಾಗುತ್ತಾ ಇದ್ದರೂ ಕಾನೂನು ಬದಲಾಗದು ಎಂದರು.

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಚತುರ್ ದಾನಗಳಲ್ಲಿ ನ್ಯಾಯ ದಾನ ಕೂಡ ಒಂದು. ಧರ್ಮಕ್ಷೇತ್ರದಲ್ಲಿ ನ್ಯಾಯ ದಾನ ಇರುವಾಗ ಕಾನೂನು ಮತ್ತು ಧರ್ಮ ಪಾಲನೆ ಕೂಡ ಪರಸ್ಪರ ಪೂರಕವಾಗಿಯೇ ಕೆಲಸ ಮಾಡುತ್ತದೆ. ವೇದ, ಉಪನಿಷತ್‌ಗಳಲ್ಲೂ ಮಾನವತೆ, ಧರ್ಮ, ಕಾನೂನು ಪರಿಪಾಲನೆಯನ್ನು ಹೇಳುತ್ತವೆ. ನೈತಿಕತೆ, ನಿಯತ್ತುಗಳು ಮಾನವನ ಜೀವನದಲ್ಲಿ ಹಾಸುಹಕ್ಕಾಗಿರಬೇಕು ಎಂದು ಅವರು ಆಶಿಸಿದರು. ಸಂಸ್ಥಾಪನಾ ದಿನದ ಉಪನ್ಯಾಸ ನೀಡಿದ ಹಿರಿಯ ವಕೀಲ ಉದಯ ಹೊಳ್ಳ, ಧರ್ಮಾಧಿಕಾರಿಯಾಗಿದ್ದು ಸ್ವತಃ ಜನರ ಸಮಸ್ಯೆಗಳಿಗೆ ನ್ಯಾಯ ಒದಗಿಸುವ ಕೆಲಸ ನಿರ್ವಹಿಸುತ್ತಾ ಬಂದಿದ್ದಾರೆ. ಡಾ. ವೀರೇಂದ್ರ ಹೆಗ್ಗಡೆಯವರು ಕಾನೂನು ಕಾಲೇಜು ಸ್ಥಾಪಿಸುವ ಮೂಲಕ ಸಮಾಜಕ್ಕೆ ಬೆಳಕು ನೀಡುವ ದೀವಿಗೆಗಳಾಗಿ ಕೆಲಸ ಮಾಡುವ ವಕೀಲರನ್ನು ಸೃಷ್ಟಿಸುವ ಕಾರ್ಯವನ್ನು ಮಾಡಿದ್ದಾರೆ. ಇದು ಡಾ. ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿಗೆ ಸಾಕ್ಷಿಯಾಗಿದೆ ಎಂದರು.

ಕಾನೂನು ಎಂಬುದು ಸೇವೆಯನ್ನು ಆಧರಿಸಿದ ವೃತ್ತಿ ಎಂಬುದನ್ನು ಕಾನೂನು ವಿದ್ಯಾರ್ಥಿಗಳು ಅರಿತುಕೊಂಳ್ಳಬೇಕು. ಭ್ರಷ್ಟಾಚಾರದಿಂದ ಹದಗೆಟ್ಟಿರುವ ಸಮಾಜದ ಮೌಲ್ಯ ವ್ಯವಸ್ಥೆಯನ್ನು ಎತ್ತಿಹಿಡಿಯುವ ಕಾರ್ಯವನ್ನು ಕಾನೂನು ಪದವೀಧರರು ನಿರ್ವಹಿಸಬೇಕಿದೆ. ನ್ಯಾಯಕಾಗಿ ಪರಿತಪಿಸುವ ಜನರ ಕಣ್ಣೊರೆಸುವ ಅವಕಾಶವು ಕಾನೂನು ಪದವೀಧಕರಿಗೆ ಲಭ್ಯವಾಗಿದೆ. ಜಿಲ್ಲಾ ನ್ಯಾಯಾಲಗಳಲ್ಲಿ ಸೂಕ್ತವಾಗಿ ತಮ್ಮ ಕಾರ್ಯವೈಖರಿಯ ಮೂಲಕ ಸಮಾಜದ ಸಬಲೀಕರಣಕ್ಕೆ ಮುಂದಾಗುವಂತೆ ಅವರು ಕಾನೂನು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಉದ್ಘಾಟನಾ ಸಮಾರಂಭದಲ್ಲಿ ಕಾಲೇಜಿನ ಮ್ಯಾಗಝೀನ್‌ ಅನಾವರಣಗೊಳಿಸಲಾಯಿತು. ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಉಜ್ವರ ಅವರ ‘ಲೀಗಲ್‌ ಲಾಂಗ್ವೇಜ್‌ ಆ್ಯಂಡ್‌ ಜನರಲ್‌ ಇಂಗ್ಲಿಷ್‌’ ಪುಸ್ತಕವನ್ನು ಈ ಸಂದರ್ಭ ಲೋಕಾರ್ಪಣೆಗೊಳಿಸಲಾಯಿತು.

ಸಮಾರಂಭದಲ್ಲಿ ಕಾಲೇಜಿನ ಸಂಸ್ಥಾಪಕ ಡಾ. ಡಿ. ವೀರೇಂದ್ರ ಹೆಗ್ಗಡೆ, ನ್ಯಾ. ಮುರಳಿಕೃಷ್ಣ, ನ್ಯಾಯವಾದಿ ಉದಯ ಹೊಳ್ಳ, ಪ್ರೊ. ಎ. ರಾಜೇಂದ್ರ ಶೆಟ್ಟಿ, ನ್ಯಾಯವಾದಿ ರೋಹಿತ್‌ ರಾವ್‌ ಅವರನ್ನು ಸನ್ಮಾನಿಸಲಾಯಿತು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ದೇವರಾಜ್‌ ಕೆ., ವಿದ್ಯಾರ್ಥಿ ಪೋಷಕರ ಸಮಿತಿ ಅಧ್ಯಕ್ಷ ಪುರುಷೋತ್ತಮ ಭಟ್‌, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್‌ಚಂದ್ರ ಮತ್ತಿತರರಿದ್ದರು.

ಎಸ್‌ಡಿಎಂ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ತಾರನಾಥ ಸ್ವಾಗತಿಸಿದರು. ಡಾ. ಸುಬ್ಬಲಕ್ಷ್ಮಿ ಸನ್ಮಾನಿತರ ಬಗ್ಗೆ ಮಾಹಿತಿ ನೀಡಿದರು. ಡಾ. ಬಾಲಿಕ ವಂದಿಸಿದರು.

Share this article