ನಾಳೆ ಧಾರವಾಡದಲ್ಲಿ ಕಾನೂನು ವಿವಿ ಘಟಿಕೋತ್ಸವ

KannadaprabhaNewsNetwork |  
Published : Nov 04, 2025, 12:30 AM IST
3ಡಿಡಬ್ಲೂಡಿ1ಆಂಧ್ರಪ್ರದೇಶ ರಾಜ್ಯಪಾಲ ಅಬ್ದುಲ್‌ ನಜೀರ, ಆಂಧ್ರಪ್ರದೇಶ ರಾಜ್ಯಪಾಲರು | Kannada Prabha

ಸಾರಾಂಶ

ನ. 5ರಂದು ಬೆಳಗ್ಗೆ 11.30ಕ್ಕೆ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ನಡೆಯಲಿರುವ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅಧ್ಯಕ್ಷತೆ ವಹಿಸಲಿದ್ದು ಆಂಧ್ರಪ್ರದೇಶ ರಾಜ್ಯಪಾಲ ಅಬ್ದುಲ್‌ ನಜೀರ, ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ಹಾಗೂ ಹಿರಿಯ ನ್ಯಾಯವಾದಿ ಬೆಂಗಳೂರಿನ ವಿ. ಸುದೇಶ ಪೈ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.

ಧಾರವಾಡ:

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ನ. 5ರಂದು ನಡೆಸಲಿರುವ 7ನೇ ಘಟಿಕೋತ್ಸವದಲ್ಲಿ ಸುಪ್ರೀಂ ಕೋರ್ಟ್‌ ನ್ಯಾ. ಬಿ.ವಿ. ನಾಗರತ್ನಾ ಸೇರಿ ಮೂವರು ಕಾನೂನು ತಜ್ಞರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಿದೆ.

ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕುಲಪತಿ ಡಾ. ಸಿ. ಬಸವರಾಜು, ನ. 5ರಂದು ಬೆಳಗ್ಗೆ 11.30ಕ್ಕೆ ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ನಡೆಯಲಿರುವ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅಧ್ಯಕ್ಷತೆ ವಹಿಸಲಿದ್ದು, ಆಂಧ್ರಪ್ರದೇಶ ರಾಜ್ಯಪಾಲ ಅಬ್ದುಲ್‌ ನಜೀರ, ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ಹಾಗೂ ಹಿರಿಯ ನ್ಯಾಯವಾದಿ ಬೆಂಗಳೂರಿನ ವಿ. ಸುದೇಶ ಪೈ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು ಎಂದರು.

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ, ಕರ್ನಾಟಕ ರಾಜ್ಯ ಗಡಿ ಮತ್ತು ನದಿ ಸಂರಕ್ಷಣಾ ಆಯೋಗದ ಅಧ್ಯಕ್ಷ ಡಾ. ಶಿವರಾಜ ಪಾಟೀಲ ಘಟಿಕೋತ್ಸವ ಭಾಷಣ ಮಾಡುವರು. ರಾಜ್ಯ ಕಾನೂನು ಸಚಿವ ಎಚ್‌.ಕೆ. ಪಾಟೀಲ ಭಾಗವಹಿಸಲಿದ್ದು ಘಟಿಕೋತ್ಸವದಲ್ಲಿ 4053 ವಿದ್ಯಾರ್ಥಿಗಳು ಮತ್ತು 3663 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 7716 ವಿದ್ಯಾರ್ಥಿಗಳಿಗೆ ಪದವಿ ಮತ್ತು ಇಬ್ಬರಿಗೆ ಪಿಎಚ್‌ಡಿ ಪ್ರದಾನ ಮಾಡಲಾಗುವುದು. ಜತೆಗೆ ವಿವಿಧ ಕಾನೂನು ಕೋರ್ಸ್‌ಗಳಿಗೆ 28 ಸುವರ್ಣ ಪದಕ ಮತ್ತು ಪ್ರತಿ ಕೋರ್ಸ್‌ಗಳಿಗೆ ತಲಾ ಹತ್ತು ವಿದ್ಯಾರ್ಥಿಗಳು ಸೇರಿ ಒಟ್ಟು 150 ರ್‍ಯಾಂಕ್‌ಗಳನ್ನು ಸಹ ಪ್ರದಾನ ಮಾಡಲಾಗುವುದು. ಹೆಚ್ಚು ಅಂಕ ಪಡೆದ 29 ವಿದ್ಯಾರ್ಥಿಗಳಿಗೆ ನಗದು ಬಹುಮಾನಗಳು ಇವೆ ಎಂದು ತಿಳಿಸಿದರು.

ಸಂಶೋಧನೆಗೆ ಹೆಚ್ಚಿನ ಒತ್ತು:

ಇತ್ತೀಚಿನ ವರ್ಷಗಳಲ್ಲಿ ವಿವಿ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಪ್ರಸಕ್ತ ವರ್ಷ 18 ವಿದ್ಯಾರ್ಥಿಗಳು ಸಂಶೋಧನೆಯ ಕೊನೆ ಹಂತದಲ್ಲಿದ್ದಾರೆ. ಅತ್ಯುತ್ತಮ ಸಂಶೋಧಕರಿಗೆ ನಗದು ಬಹುಮಾನ ಹಾಗೂ ಇತರ ಶೈಕ್ಷಣಿಕ ಸೌಕರ್ಯ ನೀಡಲಾಗುತ್ತಿದೆ ಎಂದ ಅವರು, ರಾಜ್ಯಾದ್ಯಂತ ವಿವಿ ಅಡಿಯಲ್ಲಿ 167 ಕಾಲೇಜುಗಳಿದ್ದು ವರ್ಷದಿಂದ ವರ್ಷಕ್ಕೆ ಕಾನೂನು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಬಿಎ ಎಲ್‌ಎಲ್‌ಬಿ, ಬಿಕಾಂ ಎಲ್‌ಎಲ್‌ಬಿ ಹಾಗೂ ಬಿಬಿಎ ಎಲ್‌ಎಲ್‌ಬಿ ಐದು ವರ್ಷಗಳ ಕೋರ್ಸ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಖಾಲಿ ಹುದ್ದೆ ನೇಮಕ ಶೀಘ್ರ:

ವಿವಿಯಲ್ಲಿ ಒಟ್ಟು 56 ಮಂಜೂರಾತಿ ಹುದ್ದೆಗಳಿದ್ದು, ಈ ಪೈಕಿ ಒಂಭತ್ತು ಜನರು ಮಾತ್ರ ಕಾಯಂ ಬೋಧಕರಿದ್ದಾರೆ. ಖಾಲಿ‌ ಇರುವ ಹುದ್ದೆಗಳ ನೇಮಕಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಸರ್ಕಾರದಿಂದ ನೇಮಕಾತಿಗೆ ಒಪ್ಪಿಗೆ ಸಿಗುವ ನಿರೀಕ್ಷೆ ಹೊಂದಿದ್ದೇವೆ ಎಂದು ಡಾ.ಸಿ. ಬಸವರಾಜು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕುಲಸಚಿವರಾದ ಡಾ. ರತ್ನಾ ಭರಮಗೌಡರ, ಗೀತಾ ಕೌಲಗಿ ಇದ್ದರು. ವಿವಿ ಅಭಿವೃದ್ದಿಗೆ ₹ 100 ಕೋಟಿ ಬೇಡಿಕೆ

ಇತ್ತೀಚಿನ ವರ್ಷಗಳಲ್ಲಿ ಕಾನೂನು ಕ್ಷೇತ್ರಕ್ಕೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಕಾನೂನು ಪದವಿ ಪಡೆಯಲು ವಿದ್ಯಾರ್ಥಿಗಳ ಸಂಖ್ಯೆ ಏರುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮೂಲಭೂತ ಸೌಕರ್ಯಗಳ ಬೇಕಿದ್ದು, ಸದ್ಯ ಆಂತರಿಕ ಸಂಪನ್ಮೂಲದಿಂದ ವಿವಿ ಚಟುವಟಿಕೆಗಳು ನಡೆಯುತ್ತಿವೆ. ಪ್ರಸ್ತುತ ಆಡಳಿತ ಭವನ, ಗ್ರಂಥಾಲಯ ಹಾಗೂ ಅತಿಥಿ ಗೃಹ ಕಟ್ಟಡ ಕಾಮಗಾರಿಗಳು ನಡೆಯುತ್ತಿದ್ದು, ಹೆಚ್ಚುವರಿಯಾಗಿ ವಿವಿ ಅಭಿವೃದ್ಧಿ ದೃಷ್ಟಿಯಿಂದ ಕಳೆದ ವರ್ಷ ₹ 100 ಕೋಟಿ ಅನುದಾನ ಕೇಳಲಾಗಿದೆ.

ಡಾ. ಸಿ. ಬಸವರಾಜು, ಕುಲಪತಿಗಳು, ಕಾನೂನು ವಿವಿಇನ್ನೂ ಬಂದಿಲ್ಲ ಪಾಲಿಕೆ ನೋಟಿಸ್‌...

ಕಾನೂನು ವಿವಿ ಆವರಣದಲ್ಲಿರುವ ಹು-ಧಾ ಮಹಾನಗರ ಪಾಲಿಕೆಯ 39 ಗುಂಟೆ ಜಾಗದ ಕುರಿತಾಗಿ ಮಹಾನಗರ ಪಾಲಿಕೆಯಿಂದ ವಿವಿಗೆ ನೋಟಿಸ್‌ ಜಾರಿ ಮಾಡಲಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಕುಲಪತಿ ಡಾ. ಸಿ. ಬಸವರಾಜು, ಪಾಲಿಕೆಯಿಂದ ಈ ಕುರಿತಾಗಿ ನೋಟಿಸ್‌ ಬಂದಿಲ್ಲ. ಆದರೆ, ಈ ಬಗ್ಗೆ ಮಾಹಿತಿ ಪಡೆದಿದ್ದು, ಪಾಲಿಕೆಯಲ್ಲಿ ಸರ್ಕಾರ ಮಾಡಿಕೊಂಡಿರುವ ಜಾಗ ಕೊಡುಕೊಳ್ಳುವಿಕೆಯ ಒಪ್ಪಂದದ ಬಗ್ಗೆ ಸರ್ಕಾರವೇ ಉತ್ತರಿಸಬೇಕು. ಈ ವಿಷಯ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿ ಸಮಸ್ಯೆಗೆ ಪರಿಹಾರ ದೊರೆಯಬೇಕು. ಸದ್ಯ ಕಾಮಗಾರಿ ಬಂದ್‌ ಆಗಿರುವ ಕುರಿತು ಪತ್ರ ಬರೆದು ಸರ್ಕಾರದ ಗಮನಕ್ಕೆ ತರಲಾಗುವುದು. ಜತೆಗೆ ವಿವಿ ಕಟ್ಟಡಗಳ ನಿರ್ಮಾಣದ ವೇಳೆ ಎರಡು ದೇವಸ್ಥಾನ ತೆರವುಗೊಳಿಸಲಾಗುತ್ತಿದೆ ಎಂಬುದು ಸಹ ಸುಳ್ಳು ಎಂದು ಸ್ಪಷ್ಟಪಡಿಸಿದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ