ಹುಬ್ಬಳ್ಳಿ:
ಸಂವಿಧಾನದ ನಿಜವಾದ ಸೈನಿಕರು ವಕೀಲರು. ದೇಶ ಹಾಗೂ ಸಂವಿಧಾನ ರಕ್ಷಣೆಯಲ್ಲಿ ಅವರ ಪಾತ್ರ ಹೆಚ್ಚಾಗಿದೆ. ಸಂವಿಧಾನದ ಆಶಯಗಳನ್ನು ಉಳಿಸುವುದು ಕಿರಿಯ ವಕೀಲರ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಹೇಳಿದರು.ನಗರದ ಬಿವಿಬಿ ಕ್ಯಾಂಪಸ್‌ನ ದೇಶಪಾಂಡೆ ಸಭಾಭವನದಲ್ಲಿ ಕಾನೂನು ವಿದ್ಯಾರ್ಥಿಗಳಿಗೆ ಶನಿವಾರ ಸಂಜೆ ನಡೆದ ರಾಷ್ಟ್ರಮಟ್ಟದ ಅಣುಕು ನ್ಯಾಯಾಲಯದ ಫೈನಲ್ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ದಿನದಿಂದ ದಿನಕ್ಕೆ ವ್ಯಾಜ್ಯಗಳ ಸಂಖ್ಯೆ ಅಧಿಕವಾಗುತ್ತಿದ್ದು, ಸಮಾಜದಲ್ಲಿ ವಕೀಲರ ಪಾತ್ರ ಬಹಳಷ್ಟು ಪ್ರಮುಖವಾಗಿದೆ. ಬಡವರು, ನಿರ್ಗತಿಕರು ಹಾಗೂ ಅನ್ಯಾಯಕ್ಕೆ ಒಳಗಾದವರನ್ನು ಗುರುತಿಸಿ, ನ್ಯಾಯ ಒದಗಿಸುವ ಕೆಲಸವನ್ನು ಯುವ ವಕೀಲರು ಮಾಡಬೇಕು ಎಂದರು.ಕಾನೂನಿನ ಬಗ್ಗೆ ಸಂಪೂರ್ಣ ಜ್ಞಾನ, ಉತ್ತಮ ವಾಕ್ ಚಾತುರ್ಯ ಹಾಗೂ ಸಂವಹನ ಕೌಶಲ್ಯ ಹೊಂದಿದಾಗ ಮಾತ್ರ ಯಶಸ್ವಿ ವಕೀಲರಾಗಬಹುದು ಎಂದರು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮಾತನಾಡಿ, ಶ್ರೀಸಾಮಾನ್ಯನಿಗೂ ನ್ಯಾಯದಾನದ ವ್ಯವಸ್ಥೆ ಪರಿಪೂರ್ಣವಾಗಿ ಆಗಿಲ್ಲ. ಪ್ರಕಟವಾದ ನ್ಯಾಯಾಲಯದ ಆದೇಶವನ್ನೂ ಕಾನೂನುಬದ್ಧವಾಗಿ ವಿಮರ್ಶೆಗಳಾಗಬೇಕು. ಸರಕಾರಗಳು ಕೂಡ ಕೋರ್ಟ್‌ಗಳಿಗೆ ಸವಲತ್ತು ಮತ್ತು ನ್ಯಾಯಾಧೀಶರ ನೇಮಕ ಮಾಡಬೇಕು. ಇದರಿಂದ ತ್ವರಿತವಾಗಿ ನ್ಯಾಯದಾನ ಸಾಧ್ಯವಾಗುತ್ತದೆ ಎಂದು ಹೇಳಿದರು.ಹೈಕೋರ್ಟ್ ನ್ಯಾಯಮೂರ್ತಿ ವೇದವ್ಯಾಸಾಚಾರ ಶ್ರೀಶಾನಂದ, ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ವಕೀಲರ ಪಾತ್ರ ಪ್ರಮುಖವಾಗಿದೆ. ವಾದ ಮಂಡಿಸುವಾಗ ಎದುರಿನ ವ್ಯಕ್ತಿಯನ್ನು ಖಂಡಿಸುವುದು, ವಿರೋಧಿಸುವುದು ನಿಜವಾದ ವಕೀಲರ ಲಕ್ಷಣವಲ್ಲ. ನ್ಯಾಯಾಲಯದ ಕಲಾಪದಲ್ಲಿ ಭಾಷೆ ಹಾಗೂ ಪದಗಳ ಬಳಕೆಯ ಮೇಲೆ ಬಹಳಷ್ಟು ಎಚ್ಚರವಿರಬೇಕು ಎಂದು ವಕೀಲರಿಗೆ ಸಲಹೆ ನೀಡಿದರು.
ಪ್ರಶಸ್ತಿ ಪ್ರದಾನ..ರಾಷ್ಟ್ರೀಯ ಮಟ್ಟದ ಅಣಕು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಬೆಳಗಾವಿಯ ಕೆಎಲ್‌ಇ ಬಿ.ವಿ. ಬೆಲ್ಲದ ಕಾನೂನು ಕಾಲೇಜ್ ಪ್ರಥಮ ಸ್ಥಾನ ಪಡೆಯಿತು. ರನ್ನರ್ ಅಪ್ ಆಗಿ ತಮಿಳುನಾಡಿನ ಸವಿತಾ ಸ್ಕೂಲ್ ಆಫ್ ಲಾ ಕಾಲೇಜ್ ಹೊರಹೊಮ್ಮಿತು. ಅದರಂತೆ ಬೆಸ್ಟ್ ಮೆಮೋರಿಯಲ್ ಪ್ರಶಸ್ತಿಯನ್ನು ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯ, ಬೆಸ್ಟ್ ಮೇಲ್ ಅವಾರ್ಡ್ ಸಾಯಿರಾಜ್, ಬೆಸ್ಟ್ ಫಿಮೇಲ್ ಅವಾರ್ಡ್ ಕೀರ್ತನಾ ಪಡೆದರು. ವಿವಿಧ ಕಾಲೇಜುಗಳಿಂದ ಒಟ್ಟು 16 ತಂಡಗಳು ಭಾಗವಹಿಸಿದ್ದರು.ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಜಿ. ಉಮಾ, ಉಮೇಶ ಎಂ.ಅಡಿಗ, ವಿಜಯಕುಮಾರ ಪಾಟೀಲ, ಕೆಎಲ್‌ಇ ನಿರ್ದೇಶಕ ಶ್ರೀಶೈಲಪ್ಪ ಮೆಟಗುಡ್ಡ, ಶಂಕ್ರಣ್ಣ ಮುನವಳ್ಳಿ ಇದ್ದರು.
ಇಂದು ದುಬಾರಿ ವಕೀಲರನ್ನು ನೇಮಿಸಿದಲ್ಲಿ ತೀರ್ಪು ಬೇಗ ಬರುತ್ತದೆ ಎಂಬ ಮನೋಭಾವನೆ ಕೆಲ ಕಕ್ಷಿದಾರರಲ್ಲಿದೆ, ಅದು ಸರಿಯಲ್ಲ. ಯಾವುದೇ ಪ್ರಕರಣ ಇರಲಿ ಶ್ರೀಸಾಮಾನ್ಯನಿಗೂ ನ್ಯಾಯ ಸಿಗಬೇಕು. ಅಂಥದ್ದನ್ನು ಜಾರಿಗೆ ತರಲು ರಾಜ್ಯ ಸರಕಾರ ಉತ್ಸುಕವಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.