ರಾಮನಗರ: ವಕೀಲರ ವಿರುದ್ಧ ಸುಳ್ಳು ಪ್ರಕರಣ ದಾಖಲು ಮಾಡಿದ ಐಜೂರು ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ತನ್ವೀರ್ ಹುಸೇನ್ ಅಮಾನತಿಗೆ ಆಗ್ರಹಿಸಿ ವಕೀಲರು ನಡೆಸುತ್ತಿರುವ ಆಹೋರಾತ್ರಿ ಪ್ರತಿಭಟನೆ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನೆಯಲ್ಲಿ 300ಕ್ಕೂ ಹೆಚ್ಚು ವಕೀಲರು ಭಾಗಿಯಾಗಿದ್ದರು. ವಿಧಾನ ಪರಿಷತ್ ಸದಸ್ಯ, ಸಿ.ಪಿ.ಯೋಗೇಶ್ವರ್ ಸೇರಿದಂತೆ ಹಲವರು ಪಾಲ್ಗೊಂಡು ವಕೀಲರ ಹೋರಾಟಕ್ಕೆ ಸಾಥ್ ನೀಡಿದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿ.ಪಿ.ಯೋಗೇಶ್ವರ್, ಬಹಳ ಸಂದರ್ಭಗಳಲ್ಲಿ ನ್ಯಾಯವಾದಿಗಳು ಮತ್ತು ಪೊಲೀಸರ ನಡುವೆ ಸಂಘರ್ಷ ಏರ್ಪಡುತ್ತದೆ. ಇಂತಹ ಕೆಲ ಘಟನೆಗಳನ್ನು ಹೇಗೆ ಬಗೆಹರಿಸಬೇಕು ಎಂಬುದನ್ನ ನ್ಯಾಯಾಲಯವೇ ಹೇಳಿದೆ. ಅದಕ್ಕೂ ಕೆಲ ಕಾನೂನುಗಳಿವೆ. ಆದರೆ, ಶಾಂತಿಯುವಾಗಿ ಬಗೆಹರಿಸಬೇಕಾದ ಹೋರಾಟವನ್ನು ಸ್ಥಳೀಯ ಶಾಸಕರು, ಉಸ್ತುವಾರಿ ಸಚಿವರು ಯಾಕೆ ಬಗೆಹರಿಸಿಲ್ಲ ಎಂದು ಹರಿಹಾಯ್ದರು.
ಕಳೆದ ರಾತ್ರಿ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ಭೇಟಿ ನೀಡಿದ್ದರು. ಇದನ್ನು ರಾಜಕೀಯ ಪ್ರೇರಿತ ಅಂತ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಮ್ಮ ಸಂಸದರಿಗೆ ಇದು ಅರ್ಥ ಆಗಬೇಕಿತ್ತು. ಅವರನ್ನು ಬಹಳ ಬುದ್ದಿವಂತ ಅನ್ನುತ್ತಾರೆ. ಆದರೆ, ಅವರ ಶಿಷ್ಯ ಶಾಸಕರನ್ನು ರಕ್ಷಿಸಲು ಸಂಸದರು ಸುಮ್ಮನಿದ್ದು, ಈಗ ವಕೀಲರನ್ನು ತಂದು ಬೀದಿಗೆ ನಿಲ್ಲಿಸಿದ್ದಾರೆ. ಇವರ ದುರಹಂಕಾರಕ್ಕೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಮನಗರದಲ್ಲಿ ವಕೀಲರ ಪ್ರತಿಭಟನೆ ವಿಚಾರವನ್ನು ಸದನದಲ್ಲಿ ಶೂನ್ಯವೇಳೆಯಲ್ಲಿ ಚರ್ಚೆಗೆ ಪ್ರಸ್ತಾಪ ಆಗಲಿದೆ. ವಿಧಾನಸಭೆ, ವಿಧಾನ ಪರಿಷತ್ ನಲ್ಲಿ ನಮ್ಮ ಪಕ್ಷ ಚರ್ಚೆ ಮಾಡಲಿದೆ. ನೀವು ವಿಧಾನಸೌಧದ ಮೆಟ್ಟಿಲು ಹತ್ತುವವರೆಗೂ ನ್ಯಾಯ ಸಿಗುವುದಿಲ್ಲ ಅನ್ನಿಸುತ್ತಿದೆ ಎಂದು ಹೇಳಿದರು.
ಪ್ರತಿಭಟನೆ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ಉದ್ಧಟತನದ ಹೇಳಿಕೆ ನೀಡಿದ್ದಾರೆ. ನಿಮ್ಮ ಹೋರಾಟ ಹೀಗೆ ಮುಂದುವರೆಯಲಿ. ನಿಮ್ಮ ಹೋರಾಟಕ್ಕೆ ನಮ್ಮ ಸಂಪೂರ್ಣ ಸಹಕಾರ ಸಿಗಲಿದೆ ಎಂದು ಯೋಗೇಶ್ವರ್ ತಿಳಿಸಿದರು.ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ವಿಶಾಲ್ ರಘು ಮಾತನಾಡಿ, ನಮ್ಮನ್ನು ಯಾರೂ ಬಂದು ಸಂಪರ್ಕಿಸಿಲ್ಲ ಅಂತ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ. ಇದು ಅವರ ಉದ್ಧಟತನದ ಮಾತಾಗಿದೆ. ಕಳೆದ 7 ದಿನಗಳಿಂದ ನಮ್ಮ ಹೋರಾಟ ನಡೆಯುತ್ತಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗಿದೆ. ಹೀಗಿದ್ದರೂ ನಾವು ನಿಮ್ಮ ಬಳಿ ಬರಬೇಕಾ ಎಂದು ಪ್ರಶ್ನಿಸಿದರು.
ಈ ಬಗ್ಗೆ ಜಿಲ್ಲಾಡಳಿತ ನಿಮಗೆ ಮಾಹಿತಿ ನೀಡಿಲ್ವಾ.? ನಿಮ್ಮ ಸ್ಥಳೀಯ ಶಾಸಕರು ಕ್ಷೇತ್ರದಲ್ಲಿ ಇಷ್ಟು ದೊಡ್ಡ ಹೋರಾಟ ನಡೆಯುತ್ತಿದ್ದರೂ ಮಾಹಿತಿ ನೀಡಿಲ್ವಾ.? ಪಿಎಸ್‌ಐ ಅಮಾನತ್ತು ಮಾಡಿದರೆ ನನ್ನ ಮರ್ಯಾದೆ ಹಾಳಾಗುತ್ತದೆ ಅಂತ ಶಾಸಕರು ಹೇಳಿದ್ದಾರೆ. ಎಸ್ಪಿ, ಡಿಸಿ ಅವರು ಅವರ ಕೈಗೊಂಬೆ ಆಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಎಸ್ಪಿ ಕಾರ್ತಿಕ್ ರೆಡ್ಡಿ ಅವರಿಗೆ ನಾಚಿಕೆ ಆಗಬೇಕು. ಜಿಲ್ಲಾಡಳಿತ ಅಣ್ಣತಮ್ಮಂದಿರ ಕೈಗೊಂಬೆ ಆಗಿದೆ. ಡಿಸಿಎಂ ಇದನ್ನು ರಾಜಕೀಯ ಪ್ರೇರಿತ ಅನ್ನುತ್ತಾರೆ. ನಾವು ಗಾಂಧಿ ಪೋಟೊ ಇಟ್ಟು ಪ್ರತಿಭಟನೆ ಮಾಡುತ್ತಿದ್ದೇವೆ. ಹಿಂದೆ ವಕೀಲರ ಸಮ್ಮೇಳನದ ಬಗ್ಗೆ ನಿಮ್ಮನ್ನ ಸಂಪರ್ಕಿಸಿದಾಗ ನೀವು ಹೇಗೆ ನಡೆದುಕೊಂಡಿದ್ದರೀ ಅಂತ ತಿಳಿದಿದೆ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ರಾಮನಗರ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ವಕೀಲರು ಭಾಗವಹಿಸಿದ್ದರು.ಬಾಕ್ಸ್ ............
ನಾಳೆ ವಿಧಾನಸೌಧ ಚಲೋಇನ್ನು ವಕೀಲರು ನ್ಯಾಯಕ್ಕಾಗಿ ಆಗ್ರಹಿಸಿ ಬುಧವಾರ ವಿಧಾನಸೌಧ ಚಲೋ ಹಮ್ಮಿಕೊಂಡಿದ್ದರು. ಆದರೆ, ಇದನ್ನು ಗುರುವಾರಕ್ಕೆ ಮುಂದೂಡಿದ್ದಾರೆ. ಎಂದಿನಂತೆ ಬುಧವಾರವೂ ವಕೀಲರ ಪ್ರತಿಭಟನೆ ಮುಂದುವರೆಯಲಿದೆ. ಮಂಗಳವಾರ ರಾತ್ರಿಯೂ ವಕೀಲರು ಡಿಸಿ ಕಚೇರಿ ಮುಂಭಾಗ ಹಾಸಿಗೆ ಹಾಸಿ ಮಲಗಿದರು.
ಬಾಕ್ಸ್ ..............ದಲಿತರ ಹೋರಾಟಕ್ಕೆ ವಕೀಲರಿಂದ ಟಕ್ಕರ್
ವಕೀಲರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸುವಂತೆ ದಲಿತ ಪರ ಸಂಘಟನೆಗಳ ಮಖಂಡರು ನಡೆಸಿದ ಪ್ರತಿಭಟನೆಗೆ ಪ್ರತಿಯಾಗಿ ವಕೀಲರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜೈ ಭೀಮ್ ಘೋಷಣೆ ಕೂಗಿ ಟಕ್ಕರ್ ನೀಡಿದರು.ಬಾಕ್ಸ್ ...............
ಡಿಸಿ ಕಚೇರಿ ಸುತ್ತಲೂ ಬಿಗಿ ಭದ್ರತೆ:ವಕೀಲರು ಹಾಗೂ ದಲಿತ ಪರ ಸಂಘಟನೆಗಳ ಪ್ರತಿಭಟನೆಯಿಂದಾಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ವಕೀಲರ ಪ್ರತಿಭಟನೆ ಸ್ಥಳಕ್ಕೆ ದಲಿತರು ಹೋಗದಂತೆ ಬ್ಯಾರಿಕೇಟ್ ಹಾಕಿದ್ದಲ್ಲದೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಭದ್ರತೆ ಒದಗಿಸಲಾಗಿತ್ತು. ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ದಿನವಿಡಿ ತಮಟೆ, ನಗಾರಿಯ ಸದ್ದು, ಘೋಷಣೆಗಳೇ ಮೊಳಗಿದವು. ಇದರಿಂದ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಕಾರ್ಯಗಳಿಗೆ ಅಡಚಣೆ ಆಯಿತಲ್ಲದೆ, ಕಚೇರಿಗೆ ಬಂದ ನಾಗರಿಕರು ಕಿರಿಕಿರಿ ಅನುಭವಿಸಿದರು.
20ಕೆಆರ್ ಎಂಎನ್ 3,4.ಜೆಪಿಜಿ3.ರಾಮನಗರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ವಕೀಲರು ಅಹೋರಾತ್ರಿ ಹೋರಾಟ ನಡೆಸುತ್ತಿರುವುದು.
4.ವಕೀಲರ ಹೋರಾಟದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಪಾಲ್ಗೊಂಡು ಬೆಂಬಲ ನೀಡಿದರು.