ಕನಕಪುರದಲ್ಲಿ ಎಸಿ ಕೋರ್ಟ್ ನಡೆಸಲು ವಕೀಲರ ವಿರೋಧ

KannadaprabhaNewsNetwork | Published : Nov 24, 2023 1:30 AM

ಸಾರಾಂಶ

ರಾಮನಗರ: ಉಪವಿಭಾಗಾಧಿಕಾರಿಗಳು ಕನಕಪುರ ತಾಲೂಕು ಆಡಳಿತ ಸೌಧ ಕಚೇರಿಯಲ್ಲಿ ಕಂದಾಯ ಮೇಲ್ಮನವಿ ಪ್ರಕರಣ ನಡೆಸುವುದನ್ನು ಕೈಬಿಟ್ಟು ಜಿಲ್ಲಾ ಕೇಂದ್ರ ಕಚೇರಿಯ ಸ್ಥಾನದಲ್ಲಿಯೇ ಎಲ್ಲ ತಾಲೂಕುಗಳ ಮೇಲ್ಮನವಿ ಪ್ರಕರಣ ಮುಂದುವರೆಸುವಂತೆ ಒತ್ತಾಯಿಸಿ ವಕೀಲರು ಗುರುವಾರ ನ್ಯಾಯಾಲಯದ ಕಾರ್ಯಕಲಾಪಗಳಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು.

ರಾಮನಗರ: ಉಪವಿಭಾಗಾಧಿಕಾರಿಗಳು ಕನಕಪುರ ತಾಲೂಕು ಆಡಳಿತ ಸೌಧ ಕಚೇರಿಯಲ್ಲಿ ಕಂದಾಯ ಮೇಲ್ಮನವಿ ಪ್ರಕರಣ ನಡೆಸುವುದನ್ನು ಕೈಬಿಟ್ಟು ಜಿಲ್ಲಾ ಕೇಂದ್ರ ಕಚೇರಿಯ ಸ್ಥಾನದಲ್ಲಿಯೇ ಎಲ್ಲ ತಾಲೂಕುಗಳ ಮೇಲ್ಮನವಿ ಪ್ರಕರಣ ಮುಂದುವರೆಸುವಂತೆ ಒತ್ತಾಯಿಸಿ ವಕೀಲರು ಗುರುವಾರ ನ್ಯಾಯಾಲಯದ ಕಾರ್ಯಕಲಾಪಗಳಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ಧರಣಿ ನಡೆಸಿದ ವಕೀಲರು, ಕನಕಪುರದಲ್ಲಿ ಕಂದಾಯ ಮೇಲ್ಮನವಿ ಪ್ರಕರಣ ನಡೆಸುವ ಸಂಬಂಧ ರಾಮನಗರ ಉಪವಿಭಾಗದ ಉಪವಿಭಾಗಾಧಿಕಾರಿಗಳ ಕಾರ್ಯಾಲಯ ಹೊರಡಿಸಿರುವ ಆದೇಶವನ್ನು ತಡೆ ಹಿಡಿದು ಹಿಂದಿನಂತೆ ರಾಮನಗರ ಉಪವಿಭಾಗಾಧಿಕಾರಿಗಳ ಜಿಲ್ಲಾ ಕೇಂದ್ರ ಕಚೇರಿ ಸ್ಥಾನದಲ್ಲಿಯೇ ಎಲ್ಲಾ ತಾಲೂಕುಗಳ ಮೇಲ್ಮನವಿ ಪ್ರಕರಣಗಳನ್ನು ಮುಂದುವರೆಸುವಂತೆ ಉಪವಿಭಾಗಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು.

ಜಿಲ್ಲೆಯ ಐದು ತಾಲೂಕುಗಳಿಂದಲೂ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 136(2)ರಡಿಯಲ್ಲಿ ದಾಖಲಾಗಿರುವ ಕಂದಾಯ ಮೇಲ್ಮನವಿ ಪ್ರಕರಣಗಳಿವೆ. ಆದರೆ, ಸದರಿ ನ್ಯಾಯಾಲಯಕ್ಕೆ ರಾಮನಗರ, ಚನ್ನಪಟ್ಟಣ, ಮಾಗಡಿ, ಹಾರೋಹಳ್ಳಿ ಹಾಗೂ ಕನಕಪುರ, ಬೆಂಗಳೂರು, ಮಂಡ್ಯ ಸೇರಿದಂತೆ ಇತರೆ ಜಿಲ್ಲೆಗಳಿಂದ ವಕೀಲರು ಕಂದಾಯ ಮೇಲ್ಮನವಿ ಪ್ರಕರಣಗಳಿಗೆ ಹಾಜರಾಗುತ್ತಾರೆ. ಆದರೆ, ಉಪ ವಿಭಾಗಾಧಿಕಾರಿಗಳು ಕನಕಪುರ ಮೇಲ್ಮನವಿ ಪ್ರಕರಣವನ್ನು ಕನಕಪುರದಲ್ಲಿಯೇ ನಡೆಸುವ ಸಂಬಂಧ ಇತರೆ ತಾಲೂಕು ಸಂಘಗಳಿಗೆ ಯಾವುದೇ ಪತ್ರ ವ್ಯವಹಾರ ಮುಖಾಂತರ ತಿಳಿಸಿ ಚರ್ಚಿಸಿ ಸಂಘಗಳ ಅಭಿಪ್ರಾಯವನ್ನು ಪಡೆಯದೆ ಎಲ್ಲ ವಕೀಲರಿಗೂ ಅನಾನುಕೂಲವಾಗುವ ನಿರ್ಣಯ ಕೈಗೊಂಡಿದ್ದಾರೆ ಎಂದು ದೂರಿದರು.

ರಾಮನಗರ ತಾಲೂಕಿನಲ್ಲಿಯೇ ಸಾಕಷ್ಟು ವರ್ಷಗಳಿಂದಲೂ ಮೇಲ್ಮನವಿ ಪ್ರಕರಣಗಳು ನಡೆಯುತ್ತಿದ್ದು, ಎಲ್ಲಾ ತಾಲೂಕು ಜನರಿಗೂ ರಾಮನಗರ ಕೇಂದ್ರ ಬಿಂದುವಾಗಿದ್ದು, ಮೇಲ್ಮನವಿ ಪ್ರಕರಣಗಳನ್ನು ನಡೆಸಲು ಅನುಕೂಲವಾಗಿದೆ. ಈ ಕೂಡಲೇ ಉಪವಿಭಾಗಾಧಿಕಾರಿಗಳು ತಮ್ಮ ರಾಜಕೀಯ ಪ್ರೇರಿತ ಆದೇಶ ರದ್ದು ಪಡಿಸಿ ಎಲ್ಲ ತಾಲೂಕುಗಳ ಮೇಲ್ಮನವಿ ಪ್ರಕರಣಗಳನ್ನು ಹಿಂದಿನಂತೆ ಜಿಲ್ಲಾ ಕೇಂದ್ರದಲ್ಲಿಯೇ ಮುಂದುವರೆಸಬೇಕೆಂದು ಧರಣಿ ನಿರತರು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ವಕೀಲ ವಿಜಯ್ ಕುಮಾರ್, ಉಪವಿಭಾಗಾಧಿಕಾರಿಗಳು ಕಕ್ಷಿದಾರರಿಗೆ ನ್ಯಾಯ ಕೊಡಿಸುವ ಬದಲು ಅನ್ಯಾಯ ಮಾಡಲು ಬಂದಿದ್ದಾರೆ. ಕೇವಲ ಒಂದೇ ದಿನದಲ್ಲಿ 40 ಪ್ರಕರಣಗಳನ್ನು ವಜಾ ಮಾಡಿದ್ದಾರೆ. ಆ ಮೂಲಕ ಶ್ರೀಮಂತರಿಗೆ ನ್ಯಾಯ ಕೊಟ್ಟಿದ್ದಾರೆ. ಕಕ್ಷಿದಾರರ ಹಿತದೃಷ್ಟಿಯಿಂದ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಸಬೇಕು ಎಂದು ಹೇಳಿದರು.

ಜನರಿಗೆ ಅನುಕೂಲವಾಗಲೆಂದು ನಾವು ವಕೀಲ ವೃತ್ತಿ ಮಾಡುತ್ತಿದ್ದೇವೆ. ಅವರಿಗೆ ಜನರ ಬಗ್ಗೆ ಇಚ್ಛಾಸಕ್ತಿ ಹಾಗೂ ರಾಜಕೀಯ ತಾಕತ್ತಿದ್ದರೆ ಎಲ್ಲಾ ತಾಲೂಕುಗಳಲ್ಲಿಯೂ ಎಸಿ ಕೋರ್ಟ್ ಗಳನ್ನು ಮಾಡಲಿ. ಉಪಮುಖ್ಯಮಂತ್ರಿ ಆಗಿರುವುದು ಕೇವಲ ಕನಕಪುರಕ್ಕೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಎಂಬುದನ್ನು ಮರೆಯಬಾರದು. ಕನಕಪುರ ಮಾತ್ರವಲ್ಲದೆ ಎಲ್ಲ ತಾಲೂಕುಗಳಿಗೂ ಎಸಿ ಕೋರ್ಟ್ ವಿಸ್ತರಿಸಲಿ, ಇಲ್ಲವೇ ರದ್ದು ಪಡಿಸಲಿ ಎಂದು ವಕೀಲ ತಿಮ್ಮೇಗೌಡ ಒತ್ತಾಯಿಸಿದರು.

ವಕೀಲ ಸಂಘದ ಖಜಾಂಚಿ ಮಂಜೇಶ್ ಗೌಡ ಮಾತನಾಡಿ, ಕನಕಪುರದಲ್ಲಿ ಎಸಿ ಕೋರ್ಟ್ ಪ್ರಾರಂಭಿಸಿರುವುದರ ಹಿಂದೆ ಒಳಮರ್ಮ ಅಡಗಿದೆ. ವಕೀಲರಲ್ಲಿ ಒಡಕು ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಅವಕಾಶ ನೀಡಬಾರದು. ಅಧಿಕಾರಿಗಳು ಇಂದು ಇದ್ದು, ನಾಳೆ ಹೋಗುತ್ತಾರೆ. ಆದ್ದರಿಂದ ಸಂಘ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಉಪವಿಭಾಗಾಧಿಕಾರಿಗಳು ಆದೇಶ ಹಿಂಪಡೆಯುವವರೆಗೂ ಹೋರಾಟ ನಿಲ್ಲಿಸುವುದು ಬೇಡ ಎಂದು ಕರೆ ನೀಡಿದರು.

ಮತ್ತೊಬ್ಬ ವಕೀಲ ವಿನೋದ್ ಮಾತನಾಡಿ, ಉಪವಿಭಾಗಾಧಿಕಾರಿಗಳು ಒಂದೇ ದಿನದಲ್ಲಿ 40 ಪ್ರಕರಣಗಳನ್ನು ವಜಾ ಮಾಡಿರುವ ಹಿಂದೆ ಭ್ರಷ್ಟಾಚಾರ ನಡೆದಿರುವ ಅನುಮಾನ ಬರುತ್ತಿದೆ. ಈ ಬಗ್ಗೆ ಲೋಕಾಯುಕ್ತ ಮತ್ತು ಎಸಿಬಿಯಿಂದ ತನಿಖೆ ನಡೆಸಬೇಕು. ಪ್ರಕರಣಗಳು ಹೆಚ್ಚಾಗಿರುವ ನೆಪವೊಡ್ಡಿ ವಕೀಲರಿಗೆ ತೊಂದರೆ ಕೊಡುತ್ತಿರುವ ಎಸಿರವರ ನಡವಳಿಕೆ ಕಂಟೆಂಪ್ಟ್ ಆಫ್ ಕೋರ್ಟ್ ಆಗುತ್ತದೆ. ಅವರಿಗೆ ವಕೀಲರ ಅಧಿಕಾರ ವ್ಯಾಪ್ತಿ ಏನೆಂಬುದನ್ನು ತೋರಿಸಬೇಕಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಬಿ.ಎಂ.ಶ್ರೀವತ್ಸಾ, ಉಪಾಧ್ಯಕ್ಷ ಚಂದ್ರಶೇಖರ್ , ಕಾರ್ಯದರ್ಶಿ ಟಿ.ತಿಮ್ಮೇಗೌಡ, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ವಕೀಲರು ಭಾಗವಹಿಸಿದ್ದರು.ಕೋಟ್ .............

ಜಿಲ್ಲಾಕೇಂದ್ರದಲ್ಲಿ ನಡೆಯುತ್ತಿರುವ ಎಸಿ ಕೋರ್ಟ್ ನಿಂದ ತೊಂದರೆ ಆಗುತ್ತಿದೆ ಎಂದು ಯಾವ ಕಕ್ಷಿದಾರರು ಹೇಳಿಲ್ಲ. ಪ್ರಭಾವಿ ರಾಜಕಾರಣಿಯೊಬ್ಬರು ತಮ್ಮ ಹಿತಾಸಕ್ತಿಗಾಗಿ ಕನಕಪುರಕ್ಕೆ ಎಸಿ ಕೋರ್ಟ್ ನಡೆಸುವ ಆದೇಶ ಮಾಡಿಸಿಕೊಂಡಿದ್ದಾರೆ. ಇದನ್ನು ಪ್ರಸ್ನಿಸಿದರೆ ನ್ಯಾಯಾಲಯ ಇರುವುದು ಕಕ್ಷಿದಾರರಿಗೆ, ವಕೀಲರಿಗಲ್ಲ ಎಂದು ಉಡಾಫೆಯಿಂದ ಮಾತನಾಡುತ್ತಾರೆ. ಅವರು ಜೈಲಿನಿಂದ ಬಿಡುಗಡೆಯಾಗಿ ಬರಲು ಇದೇ ವಕೀಲರು ಬೇಕಾಗಿತ್ತು ಎಂಬುದನ್ನು ಮರೆಯಬಾರದು.

-ಧನಂಜಯ, ಮಾಜಿ ಅಧ್ಯಕ್ಷರು, ವಕೀಲರ ಸಂಘ, ರಾಮನಗರ

23ಕೆಆರ್ ಎಂಎನ್ 2.ಜೆಪಿಜಿ

ರಾಮನಗರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವಕೀಲರು ಪ್ರತಿಭಟನಾ ಧರಣಿ ನಡೆಸಿದರು.

Share this article