ರಾಮನಗರ: ವಕೀಲರು ಮತ್ತು ಪೊಲೀಸರ ನಡುವಿನ ಮುಸುಕಿನ ಗುದ್ದಾಟ ತಾರಕಕ್ಕೇರಿದ್ದು, ಕಳೆದೊಂದು ವಾರದಿಂದ ಶಾಂತಿಯುತವಾಗಿ ನಡೆಸುತ್ತಿದ್ದ ವಕೀಲರ ಹೋರಾಟ ಸೋಮವಾರ ತೀವ್ರ ಸ್ವರೂಪ ಪಡೆದುಕೊಂಡಿತು.
ವಕೀಲರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವ ಐಜೂರು ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ತನ್ವೀರ್ ಹುಸೇನ್ ಅವರನ್ನು ಅಮಾನತು ಮಾಡಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು ನೂರಾರು ವಕೀಲರು ಮೆರವಣಿಗೆ ಹೊರಟು ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಧರಣಿ ಕುಳಿತರು.ಇತ್ತ ವಕೀಲರ ಪ್ರತಿಭಟನೆ ನಡೆಯುತ್ತಿದ್ದರೆ, ಮತ್ತೊಂದೆಡೆ ಜಿಲ್ಲಾಧಿಕಾರಿಗಳು ಊಟಕ್ಕೆ ಹೋಗಿದ್ದಾರೆ ಎಂದು ಸಿಬ್ಬಂದಿ ಹೇಳಿದ್ದಾರೆ. ನಾವು ಹಸಿದುಕೊಂಡು ಪ್ರತಿಭಟನೆ ಮಾಡುತ್ತಿದ್ದೇವೆ. ಅದ್ಹೇಗೆ ಅವರು ಊಟ ಮಾಡುತ್ತಾರೆ. ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ವಕೀಲರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಜಿಲ್ಲಾಧಿಕಾರಿ ಅವಿನಾಶ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಊಟ ಬಿಟ್ಟು ಪ್ರತಿಭಟನಾ ಸ್ಥಳಕ್ಕಾಗಮಿಸಿದರು.
ವಕೀಲರು ಪಿಎಸ್‌ಐ ತನ್ವೀರ್ ಅವರನ್ನು ಅಮಾನತು ಮಾಡಿ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರೆ, ಡಿಸಿ ಹಾಗೂ ಎಸ್ಪಿ ತಪ್ಪಿಸ್ಥರ ವಿರುದ್ಧ ತನಿಖೆ ಮಾಡಿ ಕ್ರಮ ಕೈಗೊಳ್ಳುವುದಾಗಿ ಹೇಳಿ ಜಾಣ ನಡೆ ಪ್ರದರ್ಶಿಸಲು ಮುಂದಾದರು. ಇದನ್ನು ಒಪ್ಪದ ನ್ಯಾಯವಾದಿಗಳು ಪಿಎಸ್ಐ ಅಮಾನತಿಗೆ ಪಟ್ಟು ಹಿಡಿದದರು.ಆಗ ಜಿಲ್ಲಾಧಿಕಾರಿ ಮತ್ತು ಎಸ್ಪಿ ಸಂಜೆ 5 ಗಂಟೆವರೆಗೆ ಕಾಲಾವಕಾಶ ಕೇಳಿ ಹೋದವರು ವಾಪಸ್ ಬರಲೇ ಇಲ್ಲ. ಇದರಿಂದ ಮತ್ತಷ್ಟು ಕೋಪಗೊಂಡ ವಕೀಲರು ಜಿಲ್ಲಾಧಿಕಾರಿಗಳ ಕಚೇರಿ ಗೇಟ್ ಗಳನ್ನು ಮುಚ್ಚಿ ಜಿಲ್ಲಾಧಿಕಾರಿ, ಎಸ್ಪಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗುತ್ತಾ ಅಹೋರಾತ್ರಿ ಹೋರಾಟ ಮುಂದುವರೆಸಿದರು.
ಇದಕ್ಕೂ ಮುನ್ನಾ ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಿದ್ದ ವಕೀಲರು ಜಿಲ್ಲಾಡಳಿತ, ಜಿಲ್ಲಾ ನ್ಯಾಯಾಧೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಹರಿಯಾಯ್ದರು. ಬಳಿಕ ವಕೀಲರ ಪ್ರತಿಭಟನಾ ಮೆರವಣಿಗೆಗೆ ಚಾಲನೆ ದೊರಕಿತು.ವೀವಾಂಟ್ ಜಸ್ಟೀಸ್:
ಹರಿಹರ, ಮೈಸೂರು, ಮಂಡ್ಯ, ಹುಣಸೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ವಕೀಲರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾ ನ್ಯಾಯಾಲಯದ ಆವರಣದಿಂದ ಆರಂಭವಾದ ವಕೀಲರ ಮೆರವಣಿಗೆ ಬಿಸಿಲನ್ನು ಲೆಕ್ಕಿಸದೆ ನಗರದ ಐಜೂರು ಸರ್ಕಲ್, ಕೆಂಗಲ್ ಹನುಮಂತಯ್ಯ ಪ್ರತಿಮೆ ರಸ್ತೆ ಮುಖಾಂತರ, ಎ.ಜಿ.ರಸ್ತೆ ವಾಟರ್ ಟ್ಯಾಂಕ್ ಸರ್ಕಲ್ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಈ ವೇಳೆ ವೀ ವಾಂಟ್ ಜಸ್ಟೀಸ್, ನ್ಯಾಯವಾದಿಗಳಿಗೆ ನ್ಯಾಯಬೇಕಿದೆ ಎಂದು ಘೋಷಣೆ ಮೊಳಗಿಸಿದರು.ಮಧ್ಯಾಹ್ನ 3ಗಂಟೆ ವೇಳೆಗೆ ರಾಮನಗರ ಜಿಲ್ಲಾಧಿಕಾರಿ ಕಚೇರಿ ಆವರಣವನ್ನು ವಕೀಲರ ಮೆರವಣಿಗೆ ಪ್ರವೇಶಿಸಿತು. ಈ ವೇಳೆ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್ ಊಟಕ್ಕೆಂದು ತೆರಳಿದ್ದು, ಪ್ರತಿಭಟನಾನಿರತರ ಆಕ್ರೋಶಕ್ಕೆ ಕಾರಣವಾಯಿತು. ಈ ವೇಳೆ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿ, ನಮ್ಮ ಅಹವಾಲು ಕೇಳದಿದ್ದರೆ, ಡಿಸಿ ಕಚೇರಿ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದರು. ಆಗ ಜಿಲ್ಲಾಧಿಕಾರಿ ಅವಿನಾಶ್ ಮತ್ತು ಜಿಲ್ಲಾ ಎಸ್ಪಿ ಕಾರ್ತಿಕ್ ರೆಡ್ಡಿ ಸ್ಥಳಕ್ಕೆ ಆಗಮಿಸಿ ಅಹವಾಲು ಆಲಿಸಿದರು.
ಈ ಮಾತುಗಳಿಂದ ತೃಪ್ತರಾಗದ ವಕೀಲರು ಜಿಲ್ಲಾಧಿಕಾರಿಗೆ 2 ಗಂಟೆಗಳ (ಸಂಜೆ5) ಡೆಡ್ಲೈನ್ ನೀಡುತ್ತೇವೆ. 2 ಗಂಟೆಯೊಳಗೆ ಒಂದು ನಿರ್ಧಾರಕ್ಕೆ ಬಂದು ಪಿಎಸ್ಐ ಸಸ್ಪೆಂಡ್ ಮಾಡಬೇಕು. ಜೊತೆಗೆ ಗೃಹ ಸಚಿವರೂ ಸ್ಥಳಕ್ಕೆ ಬರಬೇಕು ಎಂದು ಪಟ್ಟುಹಿಡಿದು ಹೋರಾಟ ಮುಂದುವರೆಸಿದರು.ಬಾಕ್ಸ್...........
ಡಿಸಿ ಕಚೇರಿ ದ್ವಾರಕ್ಕೆ ದಿಗ್ಬಂಧನ:ಜಿಲ್ಲಾಧಿಕಾರಿ ಡಾ. ಅವಿನಾಶ್, ಎಸ್ಪಿ ಕಾರ್ತೀಕ್ ರೆಡ್ಡಿ ಸೇರಿದಂತೆ ಜಿಲ್ಲಾಡಳಿತದ ಸಂಕೀರ್ಣದಲ್ಲಿರುವ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಜೆ 5.30ಕ್ಕೆ ಕರ್ತವ್ಯ ಮುಗಿಸಿ ಮನೆಗಳಿಗೆ ವಾಪಸಾಗಲು ಅವಕಾಶ ನೀಡದೆ ವಕೀಲರು ದಿಗ್ಭಂಧನ ಹೇರಿದ್ದರು.
ವಕೀಲರು ನೀಡಿದ ಗಡುವು ಮುಗಿದರು ಜಿಲ್ಲಾಧಿಕಾರಿಗಳು ನಿರ್ಧಾರ ತಿಳಿಸಲಿಲ್ಲ. ಇದರಿಂದ ಆಕ್ರೋಶಗೊಂಡ ವಕೀಲರು ಜಿಲ್ಲಾಧಿಕಾರಿ ಕಚೇರಿಯ ಆಗಮನ - ನಿರ್ಗಮನದ ದ್ವಾರಗಳಿಗೆ ದಿಗ್ಬಂಧನ ಹಾಕಿ ಪ್ರತಿಭಟಿಸಿದರು.ವಕೀಲರು ಸಂಜೆ 5 ಗಂಟೆವರೆಗೆ ಜಿಲ್ಲಾಧಿಕಾರಿಗಳಿಗೆ ಗಡುವು ನೀಡಿದ್ದರು. ಸಂಜೆ 6 ಗಂಟೆಯಾದರು ತಮ್ಮ ನಿರ್ಧಾರ ತಿಳಿಸಲಿಲ್ಲ. ಬದಲಿಗೆ ವಕೀಲರ ನಿಯೋಗ ಬಂದು ಭೇಟಿ ಮಾಡಬೇಕೆಂದು ಪೊಲೀಸರ ಬಳಿ ಹೇಳಿ ಕಳುಹಿಸಿದರು. ಇದಕ್ಕೆ ಒಪ್ಪದ ವಕೀಲರು ಎಲ್ಲರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ನಿರ್ಧಾರ ತಿಳಿಸಲಿ ಎಂದರು. ಇದಕ್ಕೆ ಜಿಲ್ಲಾಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದರಿಂದ ಕೆರಳಿದ ವಕೀಲರು ಕಚೇರಿಯ ಎರಡೂ ದ್ವಾರಗಳಿಗೆ ಅಡ್ಡ ಕುಳಿತು ಧರಣಿ ನಡೆಸಿದರು.
ಬಾಕ್ಸ್ ...............ವಕೀಲರು - ಪೊಲೀಸರ ಜಟಾಪಟಿಗೆ ಕಾರಣವೇನು ?
ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ತೀರ್ಪು ನೀಡಿದ ವಾರಾಣಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದ ವಕೀಲ ಚಾಂದ್ ಪಾಷಾ ವಿರುದ್ಧ ಕ್ರಮ ವಹಿಸುವಂತೆ ಬಿಜೆಪಿ, ಹಿಂದೂಪರ ಸಂಘಟನೆಗಳ ಮುಖಂಡರು ವಕೀಲರ ಸಂಘ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದ್ದರು. ಅಲ್ಲದೆ, ಐಜೂರು ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು.ಇದಕ್ಕೆ ಪ್ರತಿಯಾಗಿ ಪ್ರಗತಿಪರ ಸಂಘಟನೆಗಳ ಹೆಸರಿನಲ್ಲಿ ಕೆಲ ಮುಖಂಡರು, ಚಾನ್ ಪಾಷಾ ತಪ್ಪನ್ನು ಮನ್ನಿಸುವಂತೆ ಕೋರಿ ವಕೀಲರ ಸಂಘಕ್ಕೆ ಮನವಿ ಸಲ್ಲಿಸಲು ತೆರಳಿದ್ದರು. ಈ ವೇಳೆ ವಕೀಲರು ಮತ್ತು ಮುಖಂಡರ ನಡುವೆ ವಾಗ್ವಾದ, ನೂಕುನುಗ್ಗಲು ಉಂಟಾಯಿತು. ಆಗ ವಕೀಲರ ಸಂಘದ ಅಧ್ಯಕ್ಷ ಶ್ರೀವತ್ಸ ರವರು ಫೆ.6ರಂದು ವಕೀಲ ಚಾನ್ ಪಾಷಾ ಸೇರಿದಂತೆ 40 ಮಂದಿ ವಿರುದ್ಧ ಐಜೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಇದಕ್ಕೆ ಪ್ರತಿಯಾಗಿ ಫೆ.7ರಂದು ರಫಿಕ್ ಖಾನ್ ಎಂಬುವರು 40 ವಕೀಲರ ವಿರುದ್ಧ ಪ್ರಕರಣ ಎಫ್ ಐಆರ್ ದಾಖಲಿಸಿದ್ದರು.
ಈಗ ವಕೀಲರೆಲ್ಲರು ಸಹೋದ್ಯೋಗಿ ವಕೀಲರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಸಬ್ ಇನ್ಸ್ ಪೆಕ್ಟರ್ ತನ್ವೀರ್ ಹುಸೇನ್ ಅವರನ್ನು ಅಮಾನತ್ತು ಪಡಿಸಬೇಕೆಂದು ಪಟ್ಟು ಹಿಡಿದು ಅಹೋರಾತ್ರಿ ಹೋರಾಟ ನಡೆಸುತ್ತಿದ್ದಾರೆ.ಬಾಕ್ಸ್ ............
ವಕೀಲರ ಮೇಲೆ ಕ್ಯಾಮೆರಾ ಕಣ್ಗಾವಲು:ವಕೀಲರ ಪ್ರತಿಭಟನೆ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಲ್ಲದೆ, ವಕೀಲರ ಮೇಲೆ ನಿಗಾ ಇಡಲು ಕ್ಯಾಮೆರಾ ಕಣ್ಗಾವಲು ಹಾಕಲಾಗಿತ್ತು. 1ಎಎಸ್ಪಿ, 3ಮಂದಿ ಡಿವೈಎಸ್ಪಿ, 13ಇನ್ಸ್ಪೆಕ್ಟರ್, 45 ಮಂದಿ ಪಿಎಸ್ಐ, 60 ಎಎಸ್ಐ, 700 ಮಂದಿ ಪೀಸಿ, 2 ಕೆಎಸ್ಆರ್ ಪಿ, 3 ಡಿಎಆರ್ ಸೇರಿದಂತೆ 500ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತಿಗೆ ನಿಯೋಜಿಸಲಾಗಿತ್ತು. ವಕೀಲರ ಮೇಲೆ ನಿಗಾ ಇಡಲು 100 ಬಾಡಿ ಕ್ಯಾಮೆರಾ, 2 ಡ್ರೋನ್ , 40 ಹ್ಯಾಂಡಿಕ್ಯಾಮ್ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಸುತ್ತಮುತ್ತ ಸಿಸಿ ಟಿವಿ ಅಳವಡಿಸಲಾಗಿತ್ತು.
ಬಾಗಿಲು ಬಂದ್ :ಪ್ರತಿಭಟನಾ ನಿರತ ವಕೀಲರು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕದಂತೆ ತಡೆಯಲು ಪೊಲೀಸರು ಡಿಸಿ ಕಚೇರಿ ಬಾಗಿಲು ಬಂದ್ ಮಾಡಿ ಬ್ಯಾರಿಕೇಡ್ ಹಾಕಿದ್ದ ದಶ್ಯಕಂಡು ಬಂದಿತು.
ಪೊಲೀಸರಿಗೆ ನೋ ಎಂಟ್ರಿ :ಪಿಎಸ್‌ಐ ತನ್ವೀರ್ ನನ್ನು ಸಸ್ಪೆಂಡ್ ಮಾಡದಿದ್ದರೆ ನಾಳೆಯಿಂದ ಕೋರ್ಟ್ ಆವರಣಕ್ಕೆ ಪೊಲೀಸರಿಗೆ ನೋ ಎಂಟ್ರಿ ಎಂಬ ಅಭಿಯಾನ ನಡೆಸುವ ಎಚ್ಚರಿಕೆಯನ್ನು ವಕೀಲರು ನೀಡಿದರು.ಬಾಕ್ಸ್ ............
1.ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಫೆ.20ರಂದು ಕಾರ್ಯ ಕಲಾಪ ಬಹಿಷ್ಕಾರ2. ರಾಮನಗರ ವಕೀಲರ ಪ್ರಕರಣವನ್ನು ರಾಷ್ಟ್ರ ಮಟ್ಟದಲ್ಲಿ ಬಿಂಬಿಸಿ ಹೋರಾಟ ವಿಸ್ತರಿಸುವುದು
3. ಪಿಎಸ್‌ಐ ತನ್ವೀರ್ ಅಮಾನತುಗೊಳ್ಳುವವರೆಗೂ ಅಹೋರಾತ್ರಿ ಹೋರಾಟ ಮುಂದುವರೆಸುವುದು19ಕೆಆರ್ ಎಂಎನ್ 5,6,7,8,9.ಜೆಪಿಜಿ
5.ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ವಕೀಲರು ಪ್ರತಿಭಟನೆ ನಡೆಸುತ್ತಿರುವುದು6.ಜಿಲ್ಲಾಧಿಕಾರಿಗಳ ಕಚೇರಿ ಆಗಮನ - ನಿರ್ಗಮನ ದ್ವಾರದ ಗೇಟ್ ಗಳನ್ನು ಮುಚ್ಚಿ ವಕೀಲರು ಪ್ರತಿಭಟಿಸುತ್ತಿರುವುದು
7.ರಾಮನಗರದಲ್ಲಿ ವಕೀಲರ ಪ್ರತಿಭಟನಾ ಮೆರವಣಿಗೆ8.ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿರುವುದು
9.ಜಿಲ್ಲಾಧಿಕಾರಿ ಕಚೇರಿ ಬಾಗಿಲಲ್ಲಿ ಬ್ಯಾರಿಕೇಟ್ ಅಳವಡಿಸಿ ಪೊಲೀಸ್ ಬಂದೋಬಸ್ತ್ .