ಕನ್ನಡಪ್ರಭ ವಾರ್ತೆ ಕೊಲ್ಹಾರ: ಬೆಳಗಾವಿ ಸುವರ್ಣಸೌಧದ ಬಳಿ ಪ್ರತಿಭಟನೆ ವೇಳೆ ಲಿಂಗಾಯತರ ಮೇಲೆ ಲಾಠಿ ಪ್ರಹಾರ ಮಾಡಿಸಿದ ಹಾಗೂ ಸಮಾಜದ ಶ್ರೀಗಳನ್ನು ಮತ್ತು ಶಾಸಕ, ಸಂಸದ, ಮುಖಂಡರನ್ನು ಬಂಧಿಸಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ರಾಜ್ಯಪಾಲರು ಮಧ್ಯ ಪ್ರವೇಶಿಸಿ ವಜಾಗೊಳಿಸಿಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಪಟ್ಟಣದ ರಾಣಿಚನ್ನಮ್ಮ ಸರ್ಕಲ್‌ನಲ್ಲಿ ಕೊಲ್ಹಾರ ತಾಲ್ಲೂಕು ಪಂಚಮಸಾಲಿ ಸಮಾಜದ ಮುಖಂಡರು, ಯುವಕರು ಪ್ರತಿಭಟನೆ ನಡೆಸಿದರು. ವೀರರಾಣಿ ಕಿತ್ತೂರು ಚನ್ನಮ್ಮ ಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪೊಲೀಸ್ ಅಧಿಕಾರಿಗಳ ವಿರುದ್ಧ ಘೋ಼ಷಣೆ ಕೂಗುತ್ತ ಅಗಸಿ, ಸಂಗಮೇಶ್ವರ ಸರ್ಕಲ್ ಮೂಲಕ ಪ್ರತಿಭಟನಾ ರ್‍ಯಾಲಿ ನಡೆಸಿದರು. ಬಳಿಕ, ತಹಸೀಲ್ದಾರ್ ಕಚೇರಿಗೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಈ ವೇಳೆ ಮುಖಂಡ ಸಂತೋಷ ಚನಗೊಂಡ ಮಾತನಾಡಿ, ಸಮಾಜದ ಬಡ ಪ್ರತಿಭಾವಂತ ಮಕ್ಕಳಿಗೆ ಉದ್ಯೋಗದ ಸಲುವಾಗಿ 2ಎ ಮೀಸಲಾತಿಗಾಗಿ ನಾಲ್ಕು ವರ್ಷಗಳಿಂದ ಶಾಂತಿಯುತವಾಗಿ ಹೋರಾಟ ಮಾಡಲಾಗುತ್ತಿದೆ. ಆದರೆ, ಬೆಳಗಾವಿಯಲ್ಲಿ ನಡೆದ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಮಾಜ ಮೇಲೆ ಲಾಠಿ ಪ್ರಹಾರ ನಡೆಸಿ ಲಿಂಗಾಯತ ವಿರೋಧಿ ಧೋರಣೆ ತಳಿದಿದ್ದು, ಅವರ ನಡೆಯನ್ನು ಖಂಡಿಸುವುದಾಗಿ ತಿಳಿಸಿದರು. ನಮ್ಮ ಸಮಾಜದ ವಿರೋಧವನ್ನು ಈ ಸರ್ಕಾರ ಕಟ್ಟಿಕೊಂಡಿದೆ. ಮುಂದಿನ ದಿನಗಳಲ್ಲಿ ಅವರ ಸೋಲನ್ನು ಅವರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನಾವು ನಮ್ಮ ಹೋರಾಟವನ್ನು ಕೈಬಿಡುವುದಿಲ್ಲ. ಬರುವ ದಿನಗಳಲ್ಲಿ ಸಮಾಜದ ವಕೀಲರ ಜೊತೆ ಉಗ್ರ ಹೋರಾಟ ಮಾಡಿ 2ಎ ಮೀಸಲಾತಿ ಪಡದೆ ಪಡೆಯುತ್ತೇವೆ ಎಂದರು.
ಮುಖಂಡ ಮಲ್ಲು ದೇಸಾಯಿ ಬೀಳಗಿ, ಬಾಬು ಬೆಲ್ಲದ ಮಾತನಾಡಿದರು. ಈ ವೇಳೆ ಪಂಚಮಸಾಲಿ ಸಮಾಜದ ಮುಖಂಡರಾದ ಶಿವಶಂಕರ ದೇಸಾಯಿ ಬೀಳಗಿ, ನಾಗರಾಜ ಬೆಳ್ಳುಬ್ಬಿ, ಸಂಗಮೇಶ ಹೆರಕಲ್, ಬಸವರಾಜ ಪತಂಗಿ, ಪರಶುರಾಮ ಬೆನ್ನೂರು, ಸಂಗಮೇಶ ಚಿಮ್ಮಲಗಿ, ಸಂತೋಷ ರೂಡಗಿ, ಸಂಗಮೇಶ ಬಿರಾದಾರ, ಶ್ರೀಶೈಲ ಕಾಗಲ್, ಶಿವಾನಂದ ಕಾಗಲ್, ಮಹಾದೇವ ಹಳ್ಳಿ, ನವೀನ ಹಳ್ಳಿ, ಬಸವರಾಜ ಬೀಳಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.