ಗಲಭೆ ನಡೆಯದಂತೆ ಮುಖಂಡರೇ ಮುತುವರ್ಜಿ ವಹಿಸಬೇಕು: ಎಸ್‌ಪಿ ಸೂಚನೆ

KannadaprabhaNewsNetwork | Published : Dec 19, 2023 1:45 AM

ಸಾರಾಂಶ

ಸಮುದಾಯಗಳ ನಡುವೆ ಘರ್ಷಣೆ ಉಂಟಾದರೆ ಪೊಲೀಸರು ತಮ್ಮದೇ ಆದ ಕ್ರಮ ಕೈಗೊಳ್ಳುವುದು ಅನಿವಾರ್ಯ. ಈದ್‌ ಮಿಲಾದ್‌ ದಿನ ಶಾಂತಿನಗರದಲ್ಲಿ ನಡೆದ ದುರ್ಘಟನೆ ಇನ್ನೂ ಮುಂದೆ ಸಂಭವಿಸದಂತೆ ಸ್ಥಳೀಯ ಮುಖಂಡರು ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾ ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕ್ಷುಲ್ಲಕ ಕಾರಣಕ್ಕಾಗಿ ಸಮುದಾಯಗಳ ನಡುವೆ ಘರ್ಷಣೆ ಉಂಟಾದರೆ ಪೊಲೀಸರು ತಮ್ಮದೇ ಆದ ಕ್ರಮ ಕೈಗೊಳ್ಳುವುದು ಅನಿವಾರ್ಯ. ಈದ್‌ ಮಿಲಾದ್‌ ದಿನ ಶಾಂತಿನಗರದಲ್ಲಿ ನಡೆದ ದುರ್ಘಟನೆ ಇನ್ನೂ ಮುಂದೆ ಸಂಭವಿಸದಂತೆ ಸ್ಥಳೀಯ ಮುಖಂಡರು ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ತಾಕೀತು ಮಾಡಿದರು.

ನಗರದ ಶಾಂತಿನಗರದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಭಾನುವಾರ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿ, ಹಾದಿ ತಪ್ಪುವ ಮಕ್ಕಳಿಗೆ, ಯುವಕರಿಗೆ ಪೋಷಕರು ಬುದ್ಧಿ ಹೇಳಬೇಕು. ಇಲ್ಲವಾದರೆ ಮುಂದೆ ಪೊಲೀಸರು ಬುದ್ಧಿ ಹೇಳುವಂತಹ ಹಂತಕ್ಕೆ ಹೋದರೆ ಅದರ ಪರಿಣಾಮ ಕಠಿಣವಾಗಿರುತ್ತದೆ ಎಂದರು.

ಶಾಂತಿನಗರದಲ್ಲಿ ಅನೇಕ ಮೂಲಸೌಲಭ್ಯಗಳ ಕೊರತೆ ಇರುವುದು ನಮ್ಮ ಗಮನಕ್ಕೆ ಇದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಮತ್ತು ಮಹಾನಗರ ಪಾಲಿಕೆ ಸೂಕ್ತ ಕ್ರಮ ಕೈಗೊಳ್ಳಲಿದೆ. ಆದರೆ, ಕ್ಲುಲಕ ಕಾರಣಕ್ಕಾಗಿ ಸಮುದಾಯಗಳ ನಡುವೆ ಘರ್ಷಣೆ ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು. ಯಾರೋ ಮಾಡಿದ ಗಲಾಟೆಗೆ ಶಾಲಾ-ಕಾಲೇಜು ಮಕ್ಕಳಿಗೆ, ವೃದ್ಧರಿಗೆ, ರೋಗಿಗಳಿಗೆ ಎಲ್ಲರಿಗೂ ಕೂಡ ಸಮಸ್ಯೆ ಆಗುತ್ತದೆ. ಪೊಲೀಸರು ಕೂಡ ಮನುಷ್ಯರು. ತಮ್ಮ ಮನೆ, ಮಠ ಬಿಟ್ಟು ಶಾಂತಿ ಸ್ಥಾಪನೆಗಾಗಿ ವಾರಗಟ್ಟಲೆ ಇಲ್ಲೇ ಕಾಯಬೇಕಾಗುತ್ತದೆ. ಘರ್ಷಣೆಗಳ ಪರಿಣಾಮಗಳು ಎಲ್ಲರಿಗೂ ಅರಿವಾಗಿದೆ. ಅನೇಕ ಸ್ಥಳೀಯ ಹಿರಿಯ ನಿವಾಸಿಗಳು ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ. ದೇವಸ್ಥಾನ ಸಮಿತಿ, ಮಸೀದಿ ಸಮಿತಿಯ ಹಿರಿಯರು ಮತ್ತು ನಾಗರಿಕರು ಸೇರಿ ಶಾಂತಿ ಪಡೆಯನ್ನು ಕಟ್ಟಿದ್ದಾರೆ. ಇಡೀ ರಾಗಿಗುಡ್ಡ ಮತ್ತು ಶಾಂತಿನಗರದಲ್ಲಿ ಜಾತಿ, ಮತ ಭೇದಗಳ ಮರೆತು ಒಂದಾಗಿ ಅವಲೋಕನ ಮಾಡಬೇಕಿದೆ. ಇದರಿಂದ ಯುವಶಕ್ತಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಿದೆ ಎಂದರು.

ಮೂಲಸೌಕರ್ಯ ಸಮಸ್ಯೆಗೆ ಪರಿಹಾರ-ಡಿಸಿ ಅಭಯ:

ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮಾತನಾಡಿ, ಈ ಪ್ರದೇಶದಲ್ಲಿ ಅನೇಕ ದೂರುಗಳಿವೆ. ಒಳಚರಂಡಿ, ಕುಡಿಯುವ ನೀರು, ಹಕ್ಕುಪತ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಬಸ್, ಬೀದಿದೀಪ ವ್ಯವಸ್ಥೆ, ಬೇಕೆಂಬುವುದು ಅನೇಕ ವರ್ಷದ ಬೇಡಿಕೆ, ಎಲ್ಲವನ್ನೂ ಬಗೆಹರಿಸಲಾಗುವುದು. ಈಗಾಗಲೇ ಡಿಎಚ್‌ಒ ಜೊತೆ ಮಾತನಾಡಿದ್ದೇನೆ. ನಮ್ಮ ಕ್ಲಿನಿಕ್‌ ಅನ್ನು ತೆರೆಯಲಾಗುವುದು, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನೀರು, ಒಳಚರಂಡಿ, ಬೀದಿ ದೀಪ, ಶಾಲೆ, ಬಸ್ ವ್ಯವಸ್ಥೆಗೂ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ವಕೀಲರಾದ ರಾಘವೇಂದ್ರ, ಕುಮಾರ್, ಬಾಷಾ ಸಾಹೇಬ್, ಮಸೀದಿ ಕಮಿಟಿಯ ಮುನ್ನಾ ಸಾಹೇಬ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಧೀರರಾಜ್ ಹೊನ್ನವಿಲೆ, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಸುರೇಶ್, ಕಂದಾಯಾಧಿಕಾರಿ ನಾಗೇಂದ್ರ, ಪಿ.ಎಸ್.ಐ. ಸತ್ಯನಾರಾಯಣ್, ಸೈಮನ್ ಸೇರಿದಂತೆ ಸ್ಥಳೀಯ ಮುಖಂಡರು ಇದ್ದರು.

- - - -18ಎಸ್‌ಎಂಜಿಕೆಪಿ04:

ಶಿವಮೊಗ್ಗದ ಶಾಂತಿನಗರದಲ್ಲಿ ಭಾನುವಾರ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಜಿಲ್ಲಾ ಎಸ್‌ಪಿ ಮಿಥುನ್‌ಕುಮಾರ್‌ ಮಾತನಾಡಿದರು.

Share this article