ಕನ್ನಡಪ್ರಭ ವಾರ್ತೆ ಮೈಸೂರು
ಭಾರತದ ರಾಜಕೀಯ ಪಕ್ಷಗಳಲ್ಲಿ ಕೇವಲ ನಿರ್ದಿಷ್ಟ ನಾಯಕತ್ವದ ಹಿಂಬಾಲಕರು ಹಾಗೂ ಸುಪ್ರೀಂ ನಾಯಕರು ಸೃಷ್ಟಿಯಾಗುತ್ತಾರೆಯೇ ಹೊರತು ಸೈದ್ಧಾಂತಿಕ ಹಿನ್ನೆಲೆ ಮತ್ತು ಹೋರಾಟದ ಹಿನ್ನೆಲೆಯುಳ್ಳ ನಾಯಕರು ಸೃಷ್ಟಿಯಾಗುತ್ತಿಲ್ಲ ಎಂದು ಚಿಂತಕ ನಾ. ದಿವಾಕರ ತಿಳಿಸಿದರು.ಕುವೆಂಪುನಗರದ ರಂಗಾಂತರಂಗ ಸಂಸ್ಥೆ ಆವರಣದಲ್ಲಿ ಬದುಕು ಟ್ರಸ್ಟ್, ರಂಗಾತರಂಗ, ಮಹಾಬೆಳಕು ಸಹಯೋಗದೊಂದಿಗೆ ಆಯೋಜಿಸಿದ್ದ ಸೈದ್ಧಾಂತಿಕ ವರ್ಸಸ್ ಅಧಿಕಾರ ರಾಜಕಾರಣ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಯಾವುದೇ ಸೈದ್ಧಾಂತಿಕ ಚೌಕಟ್ಟಿಗೆ ಒಳಪಡದ ಲೋಹಿಯಾವಾದ, ಸಮಾಜವಾದ, ಅಂಬೇಡ್ಕರ್ ವಾದ ಪ್ರತಿಪಾದಿಸುವ ವಿವಿಧ ರಾಜಕೀಯ ಪಕ್ಷಗಳಿಗೆ ಸೈದ್ಧಾಂತಿಕ ನೆಲೆ ಒಂದು ಆದ್ಯತೆಯಾಗಿ ಪರಿಗಣಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತೀಯ ರಾಜಕಾರಣದಲ್ಲಿ ನಾವು ಗುರುತಿಸಬಹುದಾದ ಬಹುದೊಡ್ಡ ನ್ಯೂನತೆ ಎಂದರೆ ಸೈದ್ಧಾಂತಿಕ ರಾಜಕಾರಣ. ಸಾಮಾನ್ಯ ಭಾಷೆಯಲ್ಲಿ ಹೇಳಾಗುವ ಸೈದ್ಧಾಂತಿಕ ರಾಜಕಾರಣ ಮೂಲತಃ ತತ್ವಾಧಾರಿತ ರಾಜಕೀಯವೇ ಹೊರತು ಅಧಿಕಾರದ ರಾಜಕೀಯವಲ್ಲ ಎಂದರು.ನಮ್ಮ ರಾಜಕಾರಣಿಗಳಲ್ಲಿ ಏಕಮುಖಿ ಅಧ್ಯಯನ ಮತ್ತು ಚಿಂತನೆಗಳನ್ನು ಅಳವಡಿಸಿ ಕೊಂಡಿರುವುದರಿಂದ ಬಹುಮುಖಿ, ಬಹು ಸಾಂಸ್ಕೃತಿಕ ಚರಿತ್ರೆಗಳನ್ನು ತಿಳಿದುಕೊಳ್ಳುವ ಗೋಜಿಗೆ ಹೋಗುತ್ತಿಲ್ಲ ಎಂಬ ಪರಿಜ್ಞಾನ ನಮ್ಮಲ್ಲಿ ಇರಬೇಕು. ಹಾಗೆಯೇ, ತತ್ವಬದ್ಧ- ಸಿದ್ಧಾಂತ ಬದ್ಧ ರಾಜಕಾರಣಿಗಳು ಹಾಗೂ ಬುದ್ಧಿಜೀವಿ ವರ್ಗ ಈ ಅರಿವನ್ನು ತಮ್ಮಲ್ಲೇ ಅರಿವು ಮೂಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ಅಂಶ ವರ್ತಮಾನ ಭಾರತಕ್ಕೆ ತುರ್ತು ಅಗತ್ಯವಿದೆ ಎಂದು ಅವರು ಹೇಳಿದರು.
ದೇಶದ ಜನಸಂಖ್ಯೆಯಲ್ಲಿ ಶೇ.50 ರಷ್ಟಿರುವ ಯುವ ಸಮೂಹಕ್ಕೆ ಈ ವಾಸ್ತವತೆವನ್ನು ತಿಳಿಸುವುದು ಹಿರಿಯರ ನೈತಿಕ ಹೊಣೆ ಹಾಗೂ ರಾಜಕೀಯ ಕರ್ತವ್ಯವೂ ಹೌದು. ತತ್ವ ಮತ್ತು ಸಿದ್ಧಾಂತ, ಇವೆರಡರ ನಡುವಿನ ವ್ಯತ್ಯಾಸವನ್ನು ಸಮಕಾಲೀನ ಯುವ ಸಮೂಹ ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕಿದೆ. ತತ್ವ ಎನ್ನುವುದು ಒಂದು ಸಾಮಾಜಿಕ-ರಾಜಕೀಯ ನಡಿಗೆಯ ಮಾದರಿ. ಪಕ್ಷ ಅಥವಾ ಸಂಘಟನೆಗಳಲ್ಲಿ ಸಾಮಾಜಿಕ ಆಶಯಗಳನ್ನು ಹೊಂದಿರಬೇಕು. ಸಾಂಸ್ಕೃತಿಕವಾಗಿ ಯಾವ ನೆಲೆಗಳನ್ನು ಅವಲಂಬಿಸಬೇಕು ಹಾಗೂ ಸಮಾಜ ಸುಧಾರಣೆಗಳಿಗೆ ಹೇಗೆ ತೆರದುಕೊಳ್ಳಬೇಕು ಎಂಬುದರ ಅರಿವು ಇಂದಿನ ರಾಜಕಾರಣಿಗಳಿಲ್ಲ ಎಂದರು.ಸಾಹಿತಿ ಪ್ರೊ. ಕಾಳೇಗೌಡ ನಾಗವಾರ, ಸಾಮಾಜಿಕ ಕಾರ್ಯಕರ್ತ ಪ್ರಮೋದ್, ಮಹಾಬೆಳಕು ಸಂಸ್ಥೆಯ ಅಧ್ಯಕ್ಷೆ ಕಾತ್ಯಾಯಿನಿ, ಬದುಕು ಟ್ರಸ್ಟ್ ಅಧ್ಯಕ್ಷ ಇ. ಧನಂಜಯ ಎಲಿಯೂರು, ಸಾಮಾಜಿಕ ಕಾರ್ಯಕರ್ತ ಮಹೇಂದ್ರ ಇದ್ದರು.