ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಬಳ್ಳಾರಿರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಶಿಸ್ತು, ತಾಳ್ಮೆ, ನಾಯಕತ್ವದ ಗುಣಗಳನ್ನು ಹೆಚ್ಚಿಸುತ್ತದೆ ಎಂದು ಸರಳಾದೇವಿ ಸತೀಶ್ಚಂದ್ರ ಅಗರ್‌ವಾಲ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಎಚ್. ಸೋಮನಾಥ್ ತಿಳಿಸಿದರು.
ತಾಲೂಕಿನ ಕಪ್ಪಗಲ್ಲು ಗ್ರಾಮದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.ವಿದ್ಯಾರ್ಥಿಗಳಲ್ಲಿ ವೈಯಕ್ತಿಕ ಗುರುತಿಸುವಿಕೆ, ಸಮಗ್ರತೆ ಮತ್ತು ಜವಾಬ್ದಾರಿಗಳನ್ನು ಎನ್‌ಎಸ್‌ಎಸ್ ವಿಶೇಷ ಶಿಬಿರಗಳು ಅಭಿವೃದ್ಧಿಪಡಿಸುತ್ತವೆ. ಹೀಗಾಗಿಯೇ ಶಿಕ್ಷಣದ ಮೂಲಕ ಸೇವೆ ಮತ್ತು ಸಮಾಜಕ್ಕಾಗಿ ಸೇವೆಯ ಮೂಲಕ ಶಿಕ್ಷಣ ಎಂಬುದು ರಾಷ್ಟ್ರೀಯ ಸೇವಾ ಯೋಜನೆಯ ಮೂಲ ಉದ್ದೇಶ ಅರ್ಥಪೂರ್ಣವಾಗಿದೆ ಎಂದರು.
ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕಲು ಶಿಬಿರ ಅತ್ಯುತ್ತಮವಾದ ವೇದಿಕೆಯಾಗಿದ್ದು, ವಿದ್ಯಾರ್ಥಿಗಳು ಇದನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು. ಶಿಬಿರದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಈ ಮೂಲಕ ಸಮುದಾಯದ ಜೊತೆಗೆ ಸಹಭಾಗಿತ್ವ ಮನೋಭಾವನೆಯನ್ನು ವಿದ್ಯಾರ್ಥಿ ಜೀವನದಿಂದಲೇ ಬೆಳಿಸಿಕೊಂಡಾಗ ಉತ್ತಮ ನಾಗರಿಕರಾಗಲು ಸಹಕಾರಿಯಾಗುತ್ತದೆ ಎಂದು ಡಾ. ಸೋಮನಾಥ್ ಅಭಿಪ್ರಾಯ ಪಟ್ಟರು.ಕಾರ್ಯಕ್ರಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಪ್ಪಗಲ್ಲಿನ ಎಸ್‌ಡಿಎಂಸಿ ಅಧ್ಯಕ್ಷ ನಾಗೇಂದ್ರ, ಉಪಾಧ್ಯಕ್ಷ ಪಂಪಾಪತಿ, ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ್, ವಿದ್ಯುನ್ಮಾನ ವಿಭಾಗದ ಮುಖ್ಯಸ್ಥ ಡಾ. ಪಂಚಾಕ್ಷರಿ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ಪಂಪನಗೌಡ, ರಾಜ್ಯಶಾಸ್ತ್ರ ಉಪನ್ಯಾಸಕ ಡಾ. ಟಿ. ದುರಗಪ್ಪ, ಇತಿಹಾಸ ಸಹಾಯಕ ಪ್ರಾಧ್ಯಾಪಕ ಕೆ.ಬಸಪ್ಪ, ಅರ್ಥಶಾಸ್ತ್ರ ಉಪನ್ಯಾಸಕ ವೀರೇಶಯ್ಯ ಸ್ವಾಮಿ ಹಾಗೂ ಗ್ರಾಮದ ಮುಖಂಡರು, ಹಳೆಯ ವಿದ್ಯಾರ್ಥಿಗಳು, ರಾಷ್ಟ್ರೀಯ ಸ್ವಯಂ ಸೇವಕರು ಈ ಕಾರ್ಯಕ್ರಮದಲ್ಲಿದ್ದರು.
ಪ್ರೊ. ಪ್ರವೀಣ್ ಕುಮಾರ್, ಎನ್ಎಸ್ಎಸ್ ಘಟಕದ ಸಂಚಾಲಕ ಪ್ರೊ. ರಾಮಸ್ವಾಮಿ, ಡಾ. ಚನ್ನಬಸವಯ್ಯ ಹಾಗೂ ವಿದ್ಯಾರ್ಥಿನಿ ಬಿಂದು ಕಾರ್ಯಕ್ರಮ ನಿರ್ವಹಿಸಿದರು.