ಕಲಿಕಾ ಆಸಕ್ತಿ ಪರೀಕ್ಷೆ ಫಲಿತಾಂಶಕ್ಕೆ ಸಹಕಾರಿ

KannadaprabhaNewsNetwork | Published : Jul 9, 2024 12:47 AM

ಸಾರಾಂಶ

ಸದೃಢ ದೇಹದಲ್ಲಿ ಸದೃಢ ಮನಸ್ಸು ಎಂಬ ವಿವೇಕಾನಂದರ ವಾಣಿಯಂತೆ ವಿದ್ಯಾರ್ಥಿಗಳ ದೇಹ, ಮನಸ್ಸು ಸದೃಢವಾಗಿರಲು ಯೋಗ ಸುಲಭೋಪಾಯವಾಗಿದೆ

ಗದಗ: ವಿದ್ಯಾರ್ಥಿಗಳು ಕಲಿಕಾ ಆಸಕ್ತಿ ಬೆಳೆಸಿಕೊಳ್ಳಬೇಕು ಇದು ನಿಮ್ಮ ಪರೀಕ್ಷಾ ಫಲಿತಾಂಶ ಉತ್ತಮವಾಗುವುದಕ್ಕೆ ಸಹಕಾರಿಯಾಗಲಿದೆ ಎಂದು ತೋಂಟದಾರ್ಯ ಪಾಲಿಟೆಕ್ನಿಕ್ ಕಾಲೇಜ ಪ್ರಾಚಾರ್ಯ ವಿನೋದ ರಾಯ್ಕರ ಹೇಳಿದರು.

ಅವರು ಜಗದ್ಗುರು ತೋಂಟದಾರ್ಯ ಕಲ್ಯಾಣ ಕೇಂದ್ರದ ತೋಂಟದಾರ್ಯ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಯೋಗ ತರಬೇತಿ ಶಿಬಿರದ ಪ್ರಾರಂಭೊತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸ್ತುತ ಅನೇಕ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆಯುವ ಸಾಮರ್ಥ್ಯ ಹೊಂದಿರುವರು ಆದರೆ ಈ ಸಾಮರ್ಥ್ಯ ಎಲ್ಲ ವಿದ್ಯಾರ್ಥಿಗಳಲ್ಲಿ ಇರುವುದಿಲ್ಲ. ಕಾರಣ ಅವರು ದೈಹಿಕ, ಮಾನಸಿಕವಾಗಿ ಸದೃಢರಾಗಿರುವುದಿಲ್ಲ. ಸದೃಢ ದೇಹದಲ್ಲಿ ಸದೃಢ ಮನಸ್ಸು ಎಂಬ ವಿವೇಕಾನಂದರ ವಾಣಿಯಂತೆ ವಿದ್ಯಾರ್ಥಿಗಳ ದೇಹ, ಮನಸ್ಸು ಸದೃಢವಾಗಿರಲು ಯೋಗ ಸುಲಭೋಪಾಯವಾಗಿದೆ ಎಂದರು.

ಯೋಗದಿಂದ ವಿದ್ಯಾರ್ಥಿಗಳ ದೇಹ ಮನಸ್ಸುಗಳು ಸಶಕ್ತಗೊಂಡು ಅವರಲ್ಲಿ ಆಲೋಚನಾ ಶಕ್ತಿ ಹೆಚ್ಚುವುದು. ಇದರಿಂದ ಒಳ್ಳೆಯದನ್ನು ರೂಢಿಸಿಕೊಳ್ಳುವರು. ಅವರಲ್ಲಿ ಅಭಿರುಚಿ, ಆಸಕ್ತಿ, ಕಲಿಕಾ ಗುಣಾಂಶಗಳು ಬೆಳೆದು ಅಧ್ಯಯನಶೀಲರಾಗುವರು. ಹೀಗಾಗಿ ಅವರು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಲು ಸಾಧ್ಯವಾಗುವುದು. ಹೀಗಾಗಿ ವಿದ್ಯಾರ್ಥಿಗಳಲ್ಲಿರುವ ಕಲಿಕಾ ಆಸಕ್ತಿ ಪರೀಕ್ಷಾ ಫಲಿತಾಂಶಕ್ಕೆ ಸಹಕಾರಿಯಾಗಿದೆ ಎಂದರು.

ಅತಿಥಿಗಳಾಗಿ ಆಗಮಿಸಿದ ಬಸವಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಸ್.ಪಲ್ಲೇದ ಮಾತನಾಡಿ, ಯೋಗ ವಿಶ್ವದಾದ್ಯಂತ ಹೆಚ್ಚಿನ ಮಾನ್ಯತೆ ಪಡೆದಿದೆ. ಇಂದಿನ ಕಲುಷಿತ ಪರಿಸರದಲ್ಲಿ ನಾವೆಲ್ಲ ಆರೋಗ್ಯವಂತರಾಗಿರಲು ಯೋಗ ಸಹಾಯಕವಾಗಿದೆ.ವಿದ್ಯಾರ್ಥಿಗಳಿಗಂತೂ ಯೋಗದ ಅವಶ್ಯಕತೆ ಸಾಕಷ್ಟಿದೆ ಎಂದರು.

ವೇದಿಕೆಯಲ್ಲಿ ತೋಂಟದಾರ್ಯ ಪಾಲಿಟೆಕ್ನಿಕ್ ಕಾಲೇಜ ಹಿರಿಯ ಉಪನ್ಯಾಸಕ ಜಿ.ಎಂ.ಶಿವಶಿಂಪರ ಮತ್ತು ಉಪನ್ಯಾಸಕಿ ಜಿ. ಎಸ್. ದಾದ್ಮಿ, ಯೋಗ ತರಬೇತುದಾರ ಬಸವ ಯೋಗ ಮಹಾವಿದ್ಯಾಲಯದ ಸಹ ಶಿಕ್ಷಕ ಚೇತನ ಚುಂಚಾ ಉಪಸ್ಥಿತರಿದ್ದರು. ಪ್ರಿಯಾ ಪ್ರಾರ್ಥಿಸಿದರು. ನಂದಾ ಇಟಗಿ ಸ್ವಾಗತಿಸಿ ನಿರೂಪಿಸಿದರು. ಮೆಕ್ಯಾನಿಕ್ ವಿಭಾಗದ ಮುಖ್ಯಸ್ಥ ಎಂ.ಎಂ. ಉಪ್ಪಿನ ವಂದಿಸಿದರು.

Share this article