ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರದ ಹೊರವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕುವಂಪು ಕನ್ನಡ ವೇದಿಕೆಯ ವತಿಯಿಂದ ವಿನೂತನವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಅತಿಥಿಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಕಾರ್ಯಕ್ರಮಕ್ಕೆ ಬರಮಾಡಿಕೊಂಡದ್ದು ವಿಶೇಷವಾಗಿತ್ತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಕರವೇ ತಾಲೂಕು ಅಧ್ಯಕ್ಷ ಹೇಮಂತ್ ಕುಮಾರ್ ಮಾತನಾಡಿ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮವಾಗಿದೆ. ಎಲ್ಲಾ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ನಾಮಪಲಕ ಕಡ್ಡಾಯವಾಗಿದೆ. ವಿದ್ಯಾರ್ಥಿಗಳು ಇಂಗ್ಲೀಷ್‌ನ ವ್ಯಾಮೋಹಕ್ಕೆ ಒಳಗಾಗದೆ ಮಾತೃಭಾಷೆಯಾದ ಕನ್ನಡವನ್ನು ಕಟ್ಟುವ ಕೆಲಸ ಮಾಡಬೇಕೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಲೇಖಕಿಯರ ಸಂಘದ ಸದಸ್ಯರು, ಸಾಹಿತಿಗಳು ಹಾಗೂ ಕಲ್ಪತರು ಪ. ಪೂ. ಕಾಲೇಜಿನ ಉಪನ್ಯಾಸಕರಾದ ಗೀತಾಲಕ್ಷ್ಮಿ ಎಲ್ ಕನ್ನಡವು ಅತ್ಯಂತ ಪ್ರಾಚೀನವಾದ ಭಾಷೆಯಾಗಿದೆ. ಈ ನಾಡಿನಲ್ಲಿ ಹುಟ್ಟಿದ ನಾವೇ ಧನ್ಯರು. ವಿದ್ಯಾರ್ಥಿಗಳು ಕನ್ನಡವನ್ನು ಧ್ಯಾನಿಸಬೇಕು ಎಂದರು.ಅರಸೀಕೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತ್ಯುತ್ತಮವಾದ ವಾತಾವರಣದಲ್ಲಿ ನಿರ್ಮಾಣವಾಗಿದೆ. ಇಲ್ಲಿನ ಪ್ರಶಾಂತತೆ ಕಲಿಕೆಗೆ ಅತ್ಯುತ್ತಮವಾಗಿದೆ. ಕರ್ನಾಟಕದ ಏಕೀಕರಣಕ್ಕಾಗಿ ಸಾವಿರಾರು ಜನ ಶ್ರಮಿಸಿದ್ದಾರೆ. ಕನ್ನಡದ ಕವಿಗಳು ಕನ್ನಡ ಸಾಹಿತ್ಯವನ್ನು, ಭಾಷೆಯನ್ನ ಸಮೃದ್ಧಗೊಳಿಸಲು ಸಾಕಷ್ಟು ಪರಿಶ್ರಮ ವಹಿಸಿದ್ದಾರೆ. ಅಂಥವರನ್ನ ನೆನಪು ಮಾಡಿಕೊಳ್ಳಲು ಕನ್ನಡ ರಾಜ್ಯೋತ್ಸವ ಒಂದು ಸುಸಂದರ್ಭವಾಗಿದೆ. ಕನ್ನಡ ಜಗತ್ತಿನಲ್ಲಿ ಅತ್ಯಂತ ಶ್ರೀಮಂತ ಮತ್ತು ಚಿರಂಜೀವಿಯಾದ ಭಾಷೆಯಾಗಿದೆ ಎಂದು ಅಭಿಪ್ರಾಯಪಟ್ಟರು.ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಅರಸೀಕೆರೆ ನಗರದ ಸಮೂಹ ಸಂಪನ್ಮೂಲ ವ್ಯಕ್ತಿ ವಿಷ್ಣುವರ್ಧನ್ ಎಚ್ ಪಿ ಭಾರತೀಯ ಹಾಗೂ ಜಾಗತಿಕ ಸಂಗೀತ ಲೋಕಕ್ಕೆ ಕರ್ನಾಟಕ ಕೊಟ್ಟ ಕೊಡುಗೆ ಅಪಾರವಾಗಿದೆ. ಕರ್ನಾಟಕ ಸಂಗೀತ ಎಂಬುದು ಪುರಂದರದಾಸ ಮತ್ತು ಕನಕದಾಸ ಪರಂಪರೆಯಿಂದ ಬೆಳೆದು ಇಂದು ಉನ್ನತ ಸ್ಥಾನವನ್ನು ಅಲಂಕರಿಸಿದೆ ಎಂದು ಅಭಿಪ್ರಾಯಪಟ್ಟರಲ್ಲದೆ ಹಲವಾರು ಕನ್ನಡ ಗೀತೆಗಳನ್ನು ಮಧುರವಾಗಿ ಹಾಡುವ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು. ಕನ್ನಡ ಅತ್ಯಂತ ಸುಲಲಿತವಾದ ಭಾಷೆ ಎಂಬುದನ್ನು ತಮ್ಮದೇ ಆದ ಶೈಲಿಯಲ್ಲಿ ನಿರೂಪಿಸಿದರು. ಪ್ರಥಮ ದರ್ಜೆ ಗುತ್ತಿಗೆದಾರರಾದ ಶ್ರೀ ಕೃಷ್ಣ ಹಾಗೂ ಗಿರೀಶ್ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಶುಭ ಕೋರಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಎಸ್. ನಾರಾಯಣ್ ಕನ್ನಡ ಜಾನಪದ ಲೋಕ ತುಂಬಾ ವೈವಿಧ್ಯತೆಯಿಂದ ಕೂಡಿದೆ ಮತ್ತು ಶ್ರೀಮಂತವಾಗಿದೆ. "ಮಾತು ಬೆಳ್ಳಿ ಮೌನ ಬಂಗಾರ " ಎಂಬ ಗಾದೆ ಮಾತುಗಳೊಂರಿಗೆ ಸಾವಿರಾರು ನುಡಿಮುತ್ತುಗಳನ್ನು ನಮ್ಮಕನ್ನಡ ಜಾನಪದ ಸಾಹಿತ್ಯ ಲೋಕಕ್ಕೆ ನಮ್ಮ ಹಿರಿಯರು ಕೊಡುಗೆಯಾಗಿ ನೀಡಿ ಹೋಗಿದ್ದಾರೆ. ಇಂತಹ ಜನಪದ ಸಾಹಿತ್ಯವನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಮುದ್ರಿಸುವ ಕೆಲಸ ನಡೆಯುತ್ತಿರುವುದು ಶ್ಲಾಘನೀಯ. ಇಂತಹ ಜನಪದ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ಮಡುಗಟ್ಟಿವೆ ಅವುಗಳ ಅಧ್ಯಯನ ಮತ್ತು ಬಳಕೆಯಿಂದ ಕನ್ನಡ ಭಾಷೆ ಮತ್ತು ನಮ್ಮ ಬದುಕನ್ನು ಹಸನು ಮಾಡಿಕೊಳ್ಳಬಹುದು ಎಂದು ಹೇಳಿದರು.ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಉಷಾ ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ವಿದ್ಯಾರ್ಥಿ ದಿಸೆಯಿಂದಲೇ ಬರವಣಿಗೆ ಕೌಶಲವನ್ನು ರೂಡಿಸಿಕೊಳ್ಳಬೇಕು. ಭಾಷಾ ಪ್ರೌಢಿಮೆಯನ್ನು ಹೆಚ್ಚಿಸಿಕೊಳ್ಳಬೇಕು. ಅದಕ್ಕೆ ಬೇಕಾದ ಪೂರಕವಾದ ಎಲ್ಲ ರೀತಿಯ ಮಾರ್ಗದರ್ಶನವನ್ನು ಕುವೆಂಪು ಕನ್ನಡ ವೇದಿಕೆಯ ವತಿಯಿಂದ ಒದಗಿಸಲಾಗುತ್ತದೆ ಎಂದು ಹೇಳಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ಗೀತಾ ಕನ್ನಡ ರಾಜ್ಯೋತ್ಸವ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೆ ಅದು ನಿತ್ಯೋತ್ಸವವಾಗಬೇಕು ಎಂದು ಹೇಳಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಭಾಸ್ಕರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸರ್ವರನ್ನು ವಂದಿಸಿದರು. ಐಕ್ಯೂಎಸಿ ಸಂಚಾಲಕ ಡಾ. ಸುನಿಲ್ ಪ್ರೊ. ಶಿವಕುಮಾರ್ ಡಾ. ಹರೀಶ್ ಕುಮಾರ್, ರಾಘವೇಂದ್ರ ಭಜಂತ್ರಿ, ಹರೀಶ್ ,ರವಿ ,ಮೋಹನ್ ಮಲ್ಲಿಕಾರ್ಜುನ್ ,ವೀಣಾ, ಪ್ರತಿಭಾ, ರತ್ನಮ್ಮ, ಸೇರಿದಂತೆ ಎಲ್ಲಾ ಬೋಧಕರು ಮತ್ತು ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.