ಶಿರಸಿ: ಮತಾಂತರಗೊಂಡವರಿಗೆ ಮೀಸಲಾತಿ ಹಾಗೂ ಇನ್ನಿತರ ಪರಿಶಿಷ್ಟ ಪಂಗಡಕ್ಕೆ ನೀಡುವ ಸವಲತ್ತುಗಳನ್ನು ನೀಡಬಾರದು. ಪರಿಶಿಷ್ಟ ಪಂಗಡದಿಂದ ಅವರನ್ನು ಕೈಬಿಡಲು ಒತ್ತಾಯಿಸಿ ಗಿರಿಜನ ಸುರಕ್ಷಾ ವೇದಿಕೆ ವತಿಯಿಂದ ನ. ೨೬ರಂದು ಮೈಸೂರಿನಲ್ಲಿ ಗಿರಿಜನ ಸಂಸ್ಕೃತಿ ಸಂರಕ್ಷಣಾ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ತಿಳಿಸಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ೭೦೦ಕ್ಕೂ ಹೆಚ್ಚು ಗಿರಿಜನ ಪಂಗಡಗಳ ಅಭಿವೃದ್ಧಿ ಮತ್ತು ಉನ್ನತೀಕರಣದ ಸಲುವಾಗಿ ರಾಜ್ಯಾಂಗವು ಮೀಸಲಾತಿ ಮತ್ತು ಇತರ ಸರ್ಕಾರದ ಸೌಲಭ್ಯಗಳನ್ನು ಹೊಂದುವ ಅವಕಾಶ ನೀಡಿದೆ. ಆದರೆ ಹೀಗೆ ಸರ್ಕಾರ ಈ ಸೌಲಭ್ಯಗಳನ್ನು ಗಿರಿಜನರು ಸಂಸ್ಕೃತಿ, ಸಂಪ್ರದಾಯಗಳು, ಅವರ ನಂಬಿಕೆ ವಿಶ್ವಾಸಗಳನ್ನು ಉಳಿಸಿಕೊಳ್ಳಲು ಮತ್ತು ಅಭಿವೃದ್ಧಿಗೆಂದು ನೀಡಿದೆ. ಆದರೆ ಕೆಲವು ಗಿರಿಜನರು ಅವರ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳನ್ನು ಬಿಟ್ಟು ಇತರ ಧರ್ಮಕ್ಕೆ ಪರಿವರ್ತನೆಗೊಂಡು ಪರಿಶಿಷ್ಟ ಪಂಗಡಕ್ಕೆ ಸಿಗುತ್ತಿರುವ ಮೀಸಲಿಟ್ಟ ಸರ್ಕಾರಿ ಸೌಲಭ್ಯಗಳನ್ನು ಮತ್ತು ಇನ್ನಿತರ ಸವಲತ್ತುಗಳನ್ನೂ ಪಡೆಯುತ್ತಿದ್ದಾರೆ. ಮತಾಂತರಗೊಂಡವರು ನಿಜವಾದ ಮೂಲ ಗಿರಿಜನರಿಗೆ ಸೇರಲ್ಪಡುವ ಹಕ್ಕು ಸೌಕರ್ಯಗಳನ್ನು ಶೇ. ೮೦ರಷ್ಟು ಉಪಯೋಗಿಸಿಕೊಳ್ಳುತ್ತಿದ್ದು, ನಿಜವಾದ ಗಿರಿಜನರು ಈ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ನಿಜವಾದ ಗಿರಿಜನರಿಗೆ ಆಗುತ್ತಿರುವ ಈ ನಷ್ಟವನ್ನು ಗಿರಿಜನರಿಗೆ ತಿಳಿಸುತ್ತಾ, ಮತಾಂತರರಾದ ಪರಿಶಿಷ್ಟ ಪಂಗಡದ ಗಿರಿಜನರಿಗೆ ಈ ಸವಲತ್ತು ನೀಡಬಾರದು ಎಂಬ ಧ್ವನಿ ಸರ್ಕಾರಕ್ಕೆ ತಲುಪಿಸುವುದಕ್ಕಾಗಿ ಗಿರಿಜನ ಸಾಂಸ್ಕೃತಿಕ ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದರು.ಉಚ್ಚ ನ್ಯಾಯಾಲಯದ ಸಮಿತಿ ಅಧ್ಯಕ್ಷ ಮುಜಾಫರ್ ಅಸಾದಿ ವದಿಯ ೩೨ ಅಂಶಗಳನ್ನು ಜಾರಿಗೆ ತರುವುದು. ಬುಡಕಟ್ಟು ಅರಣ್ಯ ಹಕ್ಕು ೨೦೦೬ ರೊಳಗೆ ಜಾರಿಗೆ ತರುವುದು. ಸಂವಿಧಾನದ ಐದನೆಯ ಅನುಸೂಚಿತ ಮತ್ತು ಫೇಸ್ ಕಾಯ್ದೆ ೧೯೯೬ರ ಘೋಷಣೆ ಮಾಡುವುದು. ಪ್ರಾಚೀನ ಬುಡಕಟ್ಟು ಘೋಷಣೆಗೆ ಶಿಫಾರಸು ಮಾಡುವುದು. ಪರಿಶಿಷ್ಟ ಪಂಗಡವಲ್ಲದ ಕೆಲವು ಜಾತಿಗಳಿಗೆ ಎಸ್‌ಟಿ ಪ್ರಮಾಣಪತ್ರ ವಿತರಿಸುತ್ತಿರುವುದನ್ನು ನಿಲ್ಲಿಸಬೇಕು ಎಂದು ಹಕ್ಕೊತ್ತಾಯ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆ ಪ್ರಮುಖರಾದ ರಾಮಚಂದ್ರ ಮರಾಠೆ, ಬಾಬು ಪಾಟೀಲ, ಶಂಕರ ರಂಗಜ್ಜನವರ್ ಮತ್ತಿತರರು ಇದ್ದರು.