ಸಂಕಷ್ಟ ಸೂತ್ರ ರಚನೆಗೆ ಕಾನೂನಾತ್ಮಕ ಹೋರಾಟ: ಗಂಗಾಧರ್

KannadaprabhaNewsNetwork | Published : Mar 26, 2025 1:37 AM

ಸಾರಾಂಶ

ಸುಮಾರು ಐದು ದಶಕಗಳಿಂದ ಕಾವೇರಿ ನೀರಿಗಾಗಿ ಬೀದಿಗಿಳಿದು ಹೋರಾಟ ನಡೆಸಿದ್ದರೂ ಅನ್ಯಾಯ ಮುಂದುವರೆದೇ ಇದೆ. ಸುಪ್ರೀಂ ಕೋರ್ಟ್ ಇನ್ನು ಪ್ರಕರಣವನ್ನು ನಮ್ಮ ಬಳಿಗೆ ಬರದಂತೆ ನ್ಯಾಯ ಮಂಡಳಿ ರಚಿಸಿ ಕೈಬಿಟ್ಟಿದೆ. ಈಗ ಮತ್ತೆ ಕಾನೂನಾತ್ಮಕವಾಗಿಯೇ ಹೋರಾಟವನ್ನು ನಡೆಸಿ ಅನ್ಯಾಯ ಸರಿಪಡಿಸಬೇಕಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾವೇರಿ ನದಿ ನೀರಿನ ವಿಚಾರವಾಗಿ ಸಂಕಷ್ಟ ಸೂತ್ರ ರಚಿಸಲು ಕಾವೇರಿ ನದಿ ರಕ್ಷಣಾ ಸಮಿತಿಯಡಿ ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.

ಹವಾಮಾನ ಬದಲಾಗಿದೆ, ಕಾವೇರಿ ಕಣಿವೆ ಪ್ರದೇಶದಲ್ಲಿ ಮಳೆಯ ಪ್ರಮಾಣವೂ ಕಡಿಮೆಯಾಗಿದೆ. ನೂರು ವರ್ಷಗಳ ಹಿಂದೆ ಆಗಿದ್ದ ಒಪ್ಪಂದದಂತೆ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ. ಮಳೆ ಕೊರತೆ ಎದುರಾಗಿ ನೀರಿಗೆ ಸಂಕಷ್ಟ ಪರಿಸ್ಥಿತಿ ಉದ್ಭವಿಸಿದಾಗ ಎಷ್ಟು ನೀರು ಹರಿಸಬೇಕೆಂಬ ಸಂಕಷ್ಟ ಸೂತ್ರ ಇದುವರೆಗೂ ರಚನೆಯಾಗಿಲ್ಲ. ಸಂಕಷ್ಟ ಸೂತ್ರ ರಚನೆಯಾಗದೆ ಕಾವೇರಿ ನೀರು ಹಂಚಿಕೆಯಲ್ಲಿ ನಿರಂತರವಾಗಿ ಅನ್ಯಾಯವಾಗುತ್ತಿದ್ದು, ಇದಕ್ಕೊಂದು ತಾರ್ಕಿಕ ಅಂತ್ಯ ಬೀಳಬೇಕಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಸುಮಾರು ಐದು ದಶಕಗಳಿಂದ ಕಾವೇರಿ ನೀರಿಗಾಗಿ ಬೀದಿಗಿಳಿದು ಹೋರಾಟ ನಡೆಸಿದ್ದರೂ ಅನ್ಯಾಯ ಮುಂದುವರೆದೇ ಇದೆ. ಸುಪ್ರೀಂ ಕೋರ್ಟ್ ಇನ್ನು ಪ್ರಕರಣವನ್ನು ನಮ್ಮ ಬಳಿಗೆ ಬರದಂತೆ ನ್ಯಾಯ ಮಂಡಳಿ ರಚಿಸಿ ಕೈಬಿಟ್ಟಿದೆ. ಈಗ ಮತ್ತೆ ಕಾನೂನಾತ್ಮಕವಾಗಿಯೇ ಹೋರಾಟವನ್ನು ನಡೆಸಿ ಅನ್ಯಾಯ ಸರಿಪಡಿಸಬೇಕಿದೆ ಎಂದರು.

ಇದಕ್ಕಾಗಿ ಸ್ವಾಮೀಜಿಗಳು, ನ್ಯಾಯಾಧೀಶರು, ರೈತ ಮುಖಂಡರು, ನೀರಾವರಿ ತಜ್ಞರು ಹಾಗೂ ವಿವಿಧ ಪಕ್ಷಗಳ ರಾಜಕೀಯ ನಾಯಕರೆಲ್ಲರೂ ಪಕ್ಷಬೇಧ ಮರೆದು ಒಗ್ಗೂಡಲಾಗುತ್ತಿದೆ. ಏ.೫ರಂದು ಬೆಂಗಳೂರಿನ ಕುವೆಂಪು ಕಲಾಕ್ಷೇತ್ರದಲ್ಲಿ ನ್ಯಾಯಯುತ ನೀರಿನ ಹಕ್ಕಿಗಾಗಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ ಎಂದರು.

ಕಾವೇರಿ ರಕ್ಷಣಾ ವೇದಿಕೆ ಮಂಡ್ಯ ಜಿಲ್ಲಾಧ್ಯಕ್ಷ ಎಚ್.ಕೆ.ರಾಮು ಮಾತನಾಡಿ, ತಮಿಳುನಾಡಿನಲ್ಲಿ ಎಲ್ಲಾ ಪಕ್ಷದವರು ಪಕ್ಷಬೇಧ ಮರೆತು ಕಾವೇರಿ ನೀರಿನ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸುತ್ತಿರುವುದರಿಂದ ತೀರ್ಪುಗಳು ಅವರ ಪರವಾಗಿ ಹೊರಬೀಳುತ್ತಿವೆ. ಕರ್ನಾಟಕದ ರಾಜಕೀಯ ಪಕ್ಷಗಳಲ್ಲಿ ಒಗ್ಗಟ್ಟಿಲ್ಲದಿರುವುದರಿದ ಎಷ್ಟೇ ಸಮರ್ಥವಾಗಿ ವಾದ ಮಂಡಿಸಿದರೂ ವಿರುದ್ಧವಾದ ತೀರ್ಪುಗಳೇ ಹೊರಬೀಳುತ್ತಿವೆ. ಇದೆಲ್ಲವನ್ನೂ ಮನಗಂಡು ಸ್ವಾಮೀಜಿಗಳ ನೇತೃತ್ವದಲ್ಲಿ ರಾಜಕಾರಣಿಗಳು, ನ್ಯಾಯಾಧೀಶರು, ತಜ್ಞರು, ನ್ಯಾಯವಾದಿಗಳನ್ನೆಲ್ಲಾ ಜೊತೆಗೂಡಿಸಿಕೊಂಡು ಕಾನೂನು ಹೋರಾಟಕ್ಕೆ ಸಜ್ಜುಗೊಳಿಸಲಾಗುತ್ತಿದೆ ಎಂದರು.

ಪ್ರಸ್ತುತ ಪರಿಸ್ಥಿತಿಯಲ್ಲಿ ಸಂಕಷ್ಟ ಸೂತ್ರ ರಚಿಸಲೇಬೇಕಾದ ಸನ್ನಿವೇಶದಲ್ಲಿ ನಾವಿದ್ದೇವೆ. ನ್ಯಾಯಮಂಡಳಿ ನಿಗದಿ ಪಡಿಸಿರುವಷ್ಟು ಪ್ರಮಾಣದ ನೀರನ್ನು ನಾವು ಯಾವುದೇ ಕಾರಣಕ್ಕೂ ಬಿಡಲಾಗುವುದಿಲ್ಲ. ಮೇಕೆದಾಟು ಅಣೆಕಟ್ಟು ನಿರ್ಮಿಸಿ ನೀರನ್ನು ಸಂಗ್ರಹಿಸಿಟ್ಟುಕೊಂಡು ನೀಡೋಣವೆಂದರೆ ಅದಕ್ಕೂ ಒಪ್ಪಿಗೆ ಕೊಡುತ್ತಿಲ್ಲ. ನಮಗೆ ಒಂದು ಬೆಳೆಗೂ ನೀರಿಲ್ಲದೆ ಆತಂಕ ಪರಿಸ್ಥಿತಿ ಎದುರಿಸುವಾಗ ತಮಿಳುನಾಡಿನ ಮೂರು ಬೆಳೆಗೆ ಎಲ್ಲಿಂದ ನೀರು ಹರಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ಕಾವೇರಿ ನೀರು ಹಂಚಿಕೆಯಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಸುಪ್ರೀಂಕೋರ್ಟ್‌ನ ಗಮನಸೆಳೆಯಬೇಕಿದೆ. ಅದಕ್ಕಾಗಿ ಒಂದು ವೇದಿಕೆ ಸೃಷ್ಟಿಸಿಕೊಂಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿ ಹೋರಾಟವನ್ನು ಕೈಗೆತ್ತಿಕೊಳ್ಳುವುದಕ್ಕೆ ಕಾವೇರಿ ನದಿ ರಕ್ಷಣಾ ಸಮಿತಿ ಮುಂದಾಗಿದೆ ಎಂದರು.

ಗೋಷ್ಠಿಯಲ್ಲಿ ಸಿದ್ದರಾಮೇಗೌಡ, ಸಾತನೂರು ವೇಣುಗೋಪಾಲ್, ಎಂ.ಎಸ್.ಚಿದಂಬರ್, ಅಶೋಕ್ ಜಯರಾಂ, ಪದ್ಮಾವತಿ ಇತರರಿದ್ದರು.

Share this article