ಕನ್ನಡಪ್ರಭ ವಾರ್ತೆ ಇಂಡಿ
ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಲಿಂಬೆ ಬೆಳೆ ಹಾನಿಯಾದ ರೈತರಿಗೆ ಲಿಂಬೆ ಅಭಿವೃದ್ಧಿ ನಿಗಮಕ್ಕೆ ಬಂದಿರುವ ₹50 ಲಕ್ಷ ಅನುದಾನದಲ್ಲಿ ಪ್ರತಿ ರೈತರಿಗೆ ₹10 ಸಾವಿರಗಳನ್ನು ನೀಡುವಂತೆ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಸಭೆಯಲ್ಲಿ ಸೂಚಿಸಿದ್ದರು. ಆದರೆ ಸರ್ಕಾರ ಅದಕ್ಕೆ ಒಪ್ಪಿಗೆ ನೀಡಿರುವುದಿಲ್ಲ. ಏಪ್ರಿಲ್ ಎರಡನೇ ವಾರದಲ್ಲಿ ತೋಟಗಾರಿಕೆ ಬೆಳೆಗಳಾದ ಲಿಂಬೆ, ದ್ರಾಕ್ಷಿ, ದಾಳಿಂಬೆ ಬೆಳೆಗಳ ಹಾನಿಯಾದ ಬಗ್ಗೆ ಜಂಟಿ ತಂಡ ರಚನೆ ಮಾಡಲು ಎಸಿ ಅಬೀದ್ ಗದ್ಯಾಳ ಅವರು ತಹಸೀಲ್ದಾರ್ ಅವರಿಗೆ ಸೂಚಿಸಿದರು.ಅವರು ಶುಕ್ರವಾರ ಪಟ್ಟಣದ ಮಿನಿ ವಿಧಾನಸೌಧ ಸಭಾಭವನದಲ್ಲಿ ಕರೆದ ಟಾಸ್ಕ್‌ಪೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದ್ರಾಕ್ಷಿ, ಲಿಂಬೆ, ದಾಳಿಂಬೆ ಸೇರಿದಂತೆ ತೋಟಗಾರಿಕೆ ಇಲಾಖೆಯ ಬೆಳೆಗಳ ಹಾನಿಯ ಬಗ್ಗೆ ಸರ್ವೆ ಮಾಡಿ ಮೇಲಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.ಜಿಲ್ಲಾಮಟ್ಟದಲ್ಲಿಯೇ ಗೋಶಾಲೆ ತೆರೆಯಲು ಇ-ಟೆಂಡರ್ ಕರೆಯಲಾಗಿದೆ. ನಿಂಬಾಳ, ಹಂಜಗಿ ಗ್ರಾಮಕ್ಕೆ ಭೇಟಿ ನೀಡಿದಾಗ ಅಲ್ಲಿನ ರೈತರು ನಮ್ಮ ಗ್ರಾಮ ಪಂಚಾಯಿತಿಯಲ್ಲಿಯೇ ಮೇವು ಬ್ಯಾಂಕ್ ತೆರೆಯಲು ಸಲಹೆ ನೀಡಿದ್ದಾರೆ. ಹೀಗಾಗಿ ಅದನ್ನು ಪರಿಶೀಲಿಸಿ ಎಲ್ಲೆಲ್ಲಿ ಮೇವು ಬ್ಯಾಂಕ್ ತೆರೆಯಬೇಕು ಎಂದು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ನಿಂಬಾಳ ಕೆಡಿ, ಬಬಲಾದ, ಹಿರೇರೂಗಿ, ಹೊರ್ತಿ, ಭತಗುಣಕಿ, ತಡವಲಗಾ, ಬಸನಾಳ, ಕಪನಿಂಬರಗಿ, ಅಂಜುಟಗಿ, ಝಳಕಿ, ಅಥರ್ಗಾ ಗ್ರಾಮ ಪಂಚಾಯಿತಿಗಳಲ್ಲಿ ಮೇವು ಬ್ಯಾಂಕ್ ತೆರೆಯಲು ಸ್ಥಳಗಳನ್ನು ಗುರುತಿಸಲಾಗಿದ್ದು, ಜಾನುವಾರುಗಳಿಗೆ ಮೇವಿನ ಸಮಸ್ಯೆ ಆಗುವುದಕ್ಕಿಂತ ಮುಂಚೆಯೇ ಮೇವು ಬ್ಯಾಂಕ್ ತೆರೆಯಲು ಅಧಿಕಾರಿಗಳಿಗೆ ಸೂಚಿಸಿದರು.ಅಗರಖೇಡ ಸೇರಿದಂತೆ ಭೀಮಾನದಿಯ ದಂಡೆಯ ಮೇಲಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದಕ್ಕಿಂತ ಭೀಮಾನದಿಯಲ್ಲಿನ ನೀರಿನ ಮೂಲ ಹುಡುಕಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಹೀಗಾಗಿ ನದಿ ತೀರದ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೊರೈಕೆ ಮಾಡುವುದನ್ನು ಪರಿಶೀಲಿಸಿ, ಗಂಭೀರ ಸಮಸ್ಯೆ ಉಂಟಾದಾಗ ಮಾತ್ರ ಆ ಭಾಗಕ್ಕೆ ಟ್ಯಾಂಕರ್ ಆರಂಭಿಸುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ತಾಲೂಕಿನ 28 ಗ್ರಾಮಗಳಿಗೆ 67 ಟ್ಯಾಂಕರ್ ಮೂಲಕ ಪ್ರತಿ ನಿತ್ಯ 176 ಟ್ರೀಪ್ ನೀರು ಪೂರೈಕೆ ಮಾಡಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಕುಡಿಯುವ ನೀರು ಹಾಗೂ ಚುನಾವಣೆಯ ವಿಷಯವನ್ನು ಎಲ್ಲ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಯಾವುದೇ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ಆಗುವುದಕ್ಕಿಂತ ಮುಂಚೆಯೇ ಗ್ರಾಪಂ ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಯಾವ ಗ್ರಾಮಕ್ಕೆ ಎಷ್ಟು ದಿನದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ ಎಂಬುವುದನ್ನು ಮುಂಚಿತವಾಗಿಯೇ ಪಟ್ಟಿ ಮಾಡಿಕೊಂಡು ಸಂಬಂಧಿಸಿದ ನೋಡಲ್ ಅಧಿಕಾರಿಗಳಿಗೆ ತಲುಪಿಸಬೇಕು ಎಂದು ಸೂಚಿಸಿದರು.ಈ ವೇಳೆ ತಹಸೀಲ್ದಾರ್ ಮಂಜುಳಾ ನಾಯಕ, ತಾಪಂ ಇಒ ಕು.ನೀಲಗಂಗಾ,ಶಿರಸ್ತೇದಾರ ಎಸ್.ಆರ್.ಮುಜಗೊಂಡ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳಾದ ಎಇಇ ಎಸ್.ಆರ್.ರುದ್ರವಾಡಿ, ಮಹಾದೇವಪ್ಪ ಏವೂರ,ಎಚ್.ಎಸ್.ಪಾಟೀಲ, ಆರ್.ಎಸ್.ಮೆಡೆಗಾರ, ಡಾ.ಕನ್ನೂರ, ವೀಣಾ ಕೊಳೂರಗಿ ಹಾಗೂ ಗ್ರಾಪಂ ನೋಡಲ್ ಅಧಿಕಾರಿಗಳು, ಪಿಡಿಒಗಳು ಸಭೆಯಲ್ಲಿ ಇದ್ದರು.