ಹಾಲಿಗೊಂಡನಹಳ್ಳಿ ಕುರಿಹಟ್ಟಿಯ ಮೇಲೆ ಚಿರತೆ ದಾಳಿ

KannadaprabhaNewsNetwork | Published : Aug 17, 2024 12:53 AM

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಚಳ್ಳಕೆರೆ ತಾಲೂಕಿನ ವಿವಿಧ ಭಾಗಗಳಲ್ಲಿ ಕಾಡುಪ್ರಾಣಿಗಳು ಸುಲಭವಾಗಿ ಗ್ರಾಮಗಳನ್ನು ಪ್ರವೇಶಿಸುವುದಲ್ಲದೇ, ಜನ, ಜಾನುವಾರುಗಳ ಮೇಲೆ ಅಕ್ರಮಣ ನಡೆಸುತ್ತಿದ್ದು, ಇದರಿಂದ ಜನರು ಭಯಭೀತರಾಗಿದ್ದಾರೆ.

ಕನ್ನಡಪ್ರಭವಾರ್ತೆ ಚಳ್ಳಕೆರೆ

ಇತ್ತೀಚಿನ ದಿನಗಳಲ್ಲಿ ಚಳ್ಳಕೆರೆ ತಾಲೂಕಿನ ವಿವಿಧ ಭಾಗಗಳಲ್ಲಿ ಕಾಡುಪ್ರಾಣಿಗಳು ಸುಲಭವಾಗಿ ಗ್ರಾಮಗಳನ್ನು ಪ್ರವೇಶಿಸುವುದಲ್ಲದೇ, ಜನ, ಜಾನುವಾರುಗಳ ಮೇಲೆ ಅಕ್ರಮಣ ನಡೆಸುತ್ತಿದ್ದು, ಇದರಿಂದ ಜನರು ಭಯಭೀತರಾಗಿದ್ದಾರೆ.

ಕಳೆದ ಜುಲೈ 29ರಂದು ಸಿರಿವಾಳ ಓಬಳಾಪುರದಲ್ಲಿ ಕರಡಿಯೊಂದು ಓಂಕಾರಪ್ಪ ಎಂಬುವವರ ಮೇಲೆ ದಾಳಿ ನಡೆಸಿತ್ತು. ಗಾಯಗೊಂಡಿದ್ದ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದ. ಕರಡಿ ದಾಳಿ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಅರಣ್ಯಾಧಿಕಾರಿಗಳು ಮುನ್ನೆಚ್ಚರಿಕೆ ವಹಿಸುವ ಭರವಸೆ ನೀಡಿದ್ದರು.

ಆದರೆ, ಈ ಘಟನೆ ಮಾಸುವ ಮುನ್ನವೇ ಪರಶುರಾಮಪುರ ಹೋಬಳಿಯ ಹಾಲಿಗೊಂಡನಹಳ್ಳಿ ಗ್ರಾಮದ ತಿಪ್ಪೇಸ್ವಾಮಿ ಎಂಬುವವರು ಮನೆಯ ಪಕ್ಕದಲ್ಲೇ ಕುರಿಗಳನ್ನು ಸಾಕಲು ಕುರಿಹಟ್ಟಿಯನ್ನು ಕಟ್ಟಿಕೊಂಡು ಹತ್ತು ಕುರಿಗಳನ್ನುಸಾಕುತ್ತಿದ್ದರು. ಜೀವನೋಪಾಯಕ್ಕಾಗಿ ಸುಮಾರು ₹50000 ವೆಚ್ಚದಲ್ಲಿ 10 ಕುರಿಗಳನ್ನು ತಂದು ಜೀವನ ನಿರ್ವಹಿಸುತ್ತಿದ್ದರು. ಗುರುವಾರ ತಡರಾತ್ರಿ ಚಿರತೆಯೊಂದು ಕುರಿಹಟ್ಟಿಗೆ ದಾಳಿ ನಡೆಸಿ 5 ಕುರಿಗಳನ್ನು ಕೊಂದಿದ್ದಲ್ಲದೇ, 5 ಕುರಿಗಳಿಗೆ ಗಾಯಗೊಳಿಸಿದೆ.

ಕುರಿಹಟ್ಟಿಯ ಮೇಲೆ ದಾಳಿ ನಡೆಸಿ ಕುರಿಗಳ ಮಾರಣಹೋಮ ನಡೆಸಿದ ಚಿರತೆಯನ್ನು ಕೂಡಲೇ ಅರಣ್ಯಾಧಿಕಾರಿಗಳು ಸೆರೆಹಿಡಿಯಬೇಕೆಂದು ತಿಪ್ಪೇಸ್ವಾಮಿ ಆಗ್ರಹಿಸಿದ್ದಾರೆ. ಜತೆಯಲ್ಲೇ ಗ್ರಾಮೀಣ ಭಾಗಗಳಲ್ಲಿ ಈ ದಾಳಿಯಿಂದ ಭಯದ ವಾತಾವರಣ ಉಂಟಾಗಿದ್ದು, ಸಂಜೆ ವೇಳೆ ಜನ, ಜಾನುವಾರುಗಳು ಓಡಾಟ ನಡೆಸುವುದು ಕಷ್ಟವಾಗಿದೆ. ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಪತ್ತೆಗೆ ಕ್ರಮವಹಿಸುವಂತೆ ಮನವಿ ಮಾಡಿದ್ದಾರೆ.

ಸಾಮಾನ್ಯವಾಗಿ ಗ್ರಾಮದ ಹೊರಭಾಗದಲ್ಲೇ ಕುರಿ, ಮೇಕೆಗಳ ಹಟ್ಟಿ ಇದ್ದು ರಾತ್ರಿ ವೇಳೆ ಯಾರೂ ಇಲ್ಲದ ಸಮಯದಲ್ಲಿ ಚಿರತೆ ದಾಳಿ ನಡೆಸುತ್ತಿದೆ. ದಾಳಿ ಸಂದರ್ಭದಲ್ಲಿ ಕುರಿ, ಮೇಕೆಗಳು ಗಾಬರಿಯಿಂದ ಒದ್ದಾಟ ನಡೆಸಿದರೂ ನಾವು ಹೊರ ಬಂದು ಅದನ್ನು ನಿಯಂತ್ರಿಸಲು ಸಾಧ್ಯವಾಗದು. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳುವಂತೆ ತಮ್ಮ ನೋವು ತೋಡಿಕೊಂಡಿದ್ದಾರೆ.

ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೇವಣ್ಣ ಮಾತನಾಡಿ, ಹಾಲಿಗೊಂಡನಹಳ್ಳಿ ಚಿರತೆದಾಳಿ ಕುರಿತಂತೆ ಮಾಹಿತಿ ಬಂದಿದ್ದು, ಪಶುವೈದ್ಯ ಡಾ. ಶಿವಪ್ರಕಾಶ್ ಘಟನೆ ಸ್ಥಳಕ್ಕೆ ಭೇಟಿ ನೀಡಿ ಮೃತಪಟ್ಟ 5 ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿ ಗಾಯಗೊಂಡ ಕುರಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಮೃತಪಟ್ಟ 5 ಕುರಿಗಳಿಗೆ ತಲಾ ₹5000ದಂತೆ ₹25000 ಹಣ ಇಲಾಖೆಯಿಂದ ನೀಡಲಾಗುವುದು ಎಂದರು.

Share this article